ಬೆಳಗಾವಿ: ಇತ್ತೀಚೆಗೆ ಬೆಳಗಾವಿಯಲ್ಲಿ ಗ್ಯಾಸ್ ಸ್ಟೋ, ಕುಕ್ಕರ್ ಮತ್ತು ಇಸ್ತ್ರೀ ಪೆಟ್ಟಿಗೆಗಳನ್ನು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ವಿತರಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಆದ್ರೆ ಬಿಜೆಪಿ ಮುಖಂಡರೊಬ್ಬರು ಸ್ಲಂ ನಿವಾಸಿಗಳಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಿ ಮಹಿಳೆಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಬೆಳಗಾವಿ ಶ್ರೀನಗರ ಗಾರ್ಡನ್ ಬಳಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮಹಿಳೆಯರು ಸ್ಯಾನಿಟರಿ ಪ್ಯಾಡ್ ಕೈಯಲ್ಲಿ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ನೀಡಿದ ರಾಜಕಾರಣಿಗೆ ಹಿಡಿ ಶಾಪ ಹಾಕಿದ್ದಾರೆ.
ಸ್ಲಂ ನಿವಾಸಿಗಳ 60 ಮನೆಗಳಿಗೆ ಬಿಜೆಪಿ ಮುಖಂಡರ ಬೆಂಬಲಿಗರು ಬಂದು ಸ್ಯಾನಟರಿ ಪ್ಯಾಡ್ ನೀಡಿ ಇದನ್ನು ಬಳಸುವಂತೆ ಹೇಳಿದ್ದಾರೆ. ಆದರೇ ಮೊದಲು ಈ ಬಗ್ಗೆ ಇಲ್ಲಿನ ಮಹಿಳೆಯರಿಗೆ ಗೊತ್ತಾಗಿಲ್ಲ. ನಂತರ ಮಾಹಿತಿ ತಿಳಿದು ಬಿಜೆಪಿ ಮುಖಂಡ ಅನಿಲ್ ಬೆನಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಅನಿಲ್ ಬೆನಕೆ ಅಪಮಾನ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸಹ ಇಲ್ಲಿನ ಮುಖಂಡರು ಪತ್ರ ಬರೆದು ಒತ್ತಾಯಿಸಿದ್ದಾರೆ. ಬುಧವಾರ ಸ್ಲಂ ನಿವಾಸಿಗಳು ದಿಢೀರ್ ಪ್ರತಿಭಟನೆ ನಡೆಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಿದ್ದು ಈಗಲ್ಲ. ಬದಲಿಗೆ ಮಾರ್ಚ್ 10ರಂದು ಮಹಿಳಾ ದಿನದ ಅಂಗವಾಗಿ ವಿತರಣೆ ಮಾಡಲಾಗಿತ್ತು. ಸ್ವಯಂ ಸೇವಾ ಸಂಘವೊಂದು ನನ್ನ ಬಳಿ ಬಂದು ಸ್ಯಾನಿಟರಿ ಪ್ಯಾಡ್ ವಿತರಣೆ ಸಹಾಯ ಕೇಳಿತ್ತು. ಅದರಂತೆ ಧನ ಸಹಾಯ ಮಾಡಿದ್ದೇನೆ. ಇದರಲ್ಲಿ ನನ್ನದು ಏನು ತಪ್ಪಿಲ್ಲ. ಈ ವಿಚಾರವನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ ಎಂದು ಅನಿಲ್ ಬೆನಕೆ ಸ್ಪಷ್ಟನೆ ನೀಡಿದ್ದಾರೆ.
ಒಟ್ಟಾರೆಯಾಗಿ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ರಾಜಕಾರಣಿಗಳು ಪರಸ್ಪರ ಕಾಲೆಳೆಯೋದು ಆರಂಭವಾಗಿದೆ.