ಇಂದಿನಿಂದ ಜನೌಷಧ ಕೇಂದ್ರಗಳಲ್ಲಿ ಸ್ಯಾನಿಟರಿ ಪ್ಯಾಡ್‍ಗಳು 1 ರೂ.ಗೆ ಲಭ್ಯ

Public TV
1 Min Read
sanitary 1

ನವದೆಹಲಿ: ಮಹಿಳೆಯರ ಆರೋಗ್ಯ, ಶುಚಿತ್ವ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಜನೌಷಧ ಕೇಂದ್ರಗಳಲ್ಲಿ ಕೇವಲ 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಒದಗಿಸಲು ಮುಂದಾಗಿದೆ.

ಈ ಹಿಂದೆ ಜನೌಷಧ ಕೇಂದ್ರಗಳಲ್ಲಿ 2.50 ರೂ.ಗೆ ಮಾರಲಾಗುತ್ತಿದ್ದ ಸ್ಯಾನಿಟರಿ ಪ್ಯಾಡ್‍ಗಳು ಇಂದಿನಿಂದ ಕೇವಲ 1 ರೂ.ಗೆ ದೊರೆಯಲಿವೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್‍ಸುಖ್ ಮಾಂಡವೀಯ ತಿಳಿಸಿದ್ದಾರೆ. ಮಣ್ಣಿನಲ್ಲಿ ಕರಗಬಲ್ಲ(ಬಯೋಡಿಗ್ರೆಡೆಬಲ್) ‘ಸುವಿಧಾ’ ನ್ಯಾಪ್‍ಕಿನ್‍ಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ವಿಶ್ವ ಪರಿಸರ ದಿನಾಚರಣೆಯಂದು ಮಹಿಳೆಯರಿಗೆ ಭರ್ಜರಿ ಗಿಫ್ಟ್- ಕಡಿಮೆ ಬೆಲೆಯ ನ್ಯಾಪ್‍ಕಿನ್ ಬಿಡುಗಡೆ

ಈ ಹಿಂದೆ 4 ಸ್ಯಾನಿಟರಿ ಪ್ಯಾಡ್‍ಗಳುಳ್ಳ ಪ್ಯಾಕಿಗೆ 10 ರೂ. ಇತ್ತು. ಆದರೆ ಇಂದಿನಿಂದ ಅದೇ ಪ್ಯಾಡ್‍ಗಳ ಬೆಲೆ 4 ರೂ.ಗೆ ಇಳಿದಿದೆ. ಹೀಗೆ ದರದಲ್ಲಿ 60% ಕಡಿತ ಮಾಡುವ ಮೂಲಕ ಮೋದಿ ನೇತೃತ್ವದ ಸರ್ಕಾರವು 2019ರ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಿದೆ ಎಂದು ಸಚಿವರು ತಿಳಿಸಿದರು.

ಸದ್ಯ ತಯಾರಕರು ಉತ್ಪಾದನಾ ವೆಚ್ಚ ಎಷ್ಟಾಗುತ್ತದೋ ಅದೇ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‍ಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಆದರೆ ನಾವು ಅದಕ್ಕೆ ಸಬ್ಸಿಡಿ ನೀಡಿ ಅದರ ಮಾರಾಟ ದರವನ್ನು ಕಡಿಮೆಗೊಳಿಸಿದ್ದೇವೆ. ಮಾರಾಟದ ಪ್ರಮಾಣದ ಮೇಲೆ ಸಬ್ಸಿಡಿಯ ವಾರ್ಷಿಕ ವೆಚ್ಚ ಅವಲಂಭಿಸಿದೆ ಎಂದರು.

ಸುವಿಧಾ ನ್ಯಾಪ್‍ಕಿನ್ಸ್ ಯೋಜನೆಯನ್ನು 2018ರ ಮಾರ್ಚ್‍ನಲ್ಲಿ ಘೋಷಿಸಲಾಗಿತ್ತು. ಅದೇ ವರ್ಷ ಮೇ ತಿಂಗಳಿನಿಂದ ಈ ಯೋಜನೆ ಜನೌಷಧ ಕೇಂದ್ರಗಳಲ್ಲಿ ಲಭ್ಯವಾಗಿತ್ತು. ಕಳೆದ 1 ವರ್ಷದ ಅವಧಿಯಲ್ಲಿ ಸುಮಾರು 5,500 ಜನೌಷಧ ಕೇಂದ್ರಗಳಲ್ಲಿ 2.2 ಕೋಟಿ ನ್ಯಾಪ್‍ಕಿನ್‍ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಈಗ ದರ ಇಳಿಕೆ ಮಾಡಿರುವುದರಿಂದ ಸುವಿಧಾ ನ್ಯಾಪ್‍ಕಿನ್ಸ್ ಮಾರಾಟ ಪ್ರಮಾಣ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ ಎಂದು ಮನ್‍ಸುಖ್ ಮಾಂಡವೀಯ ಅಭಿಪ್ರಾಯ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *