ಕೊಪ್ಪಳ: ರೈತರ ಜಮೀನಿಗೆ ಹರಿಯಬೇಕಿದ್ದ ಕೊಪ್ಪಳ ತಾಲೂಕಿನ ಹಿರೇಹಳ್ಳ ಕಾಲುವೆ ನೀರಿಗೆ ಸಂಸದ ಸಂಗಣ್ಣ ಕರಡಿ ಅವರ ಅಳಿಯ ಸಿದ್ದಲಿಂಗಪ್ಪ ಕನ್ನ ಹಾಕಿದ್ದಾರೆ.
ಸಂಗಣ್ಣ ಕರಡಿ ಅವರ ಅಳಿಯ ಸಿದ್ದಲಿಂಗಪ್ಪ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ನೀಲಗಿರಿ, ಸಬಾಬುಲ್ಲಾ ಮರಗಳಿಗೆ ನೀರು ಉಪಯೋಗಿಸುತ್ತಿದ್ದಾರೆ. ತನ್ನ ಜಮೀನಿನ ಅರ್ಧ ಕೆರೆಯಲ್ಲಿ ನೀರನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆ ಎಂದು ಗ್ರಾಮದ ರೈತರು ಆರೋಪಿಸುತ್ತಿದ್ದಾರೆ.
ಈ ಸಂಬಂಧ ದೌರ್ಜನ್ಯವನ್ನು ಪ್ರಶ್ನಿಸಿದ ಗ್ರಾಮದ ರೈತರಿಗೆ ಆಳುಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ. ಈ ಬಗ್ಗೆ ಸಂಸದ ಕರಡಿ ಸಂಗಣ್ಣ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಸಣ್ಣ ರೈತರು ಆರೋಪ ಮಾಡುತ್ತಾರೆ.
ನಾನೇನು ಯಾರ ನೀರನ್ನೂ ಸಂಗ್ರಹಿಸಿಕೊಂಡಿಲ್ಲ. ನನ್ನ ಪಾಲಿನ ನೀರನ್ನು ರಾತ್ರಿ ಸಂಗ್ರಹಿಸಿಕೊಂಡು ಹಗಲಿನಲ್ಲಿ ಬಳಸಿಕೊಳ್ಳುತ್ತಿದ್ದೇನೆ. ನನ್ನ ಮೇಲೆ ವಿನಾಕಾರಣ ಆರೋಪ ಮಾಡಲಾಗ್ತಿದೆ ಎಂದು ಸಂಗಣ್ಣ ಕರಡಿ ಅವರ ಅಳಿಯ ಸಿದ್ದಲಿಂಗಪ್ಪ ಹೇಳುತ್ತಾರೆ.
ರೈತರು ಸಾವಿರಾರು ರೂಪಾಯಿ ಸಾಲ ಮಾಡಿ ಬೆಳೆದಿದ್ದ ಬೆಳೆ ನೀರಿಲ್ಲದೆ ಒಣಗಿಹೋಗ್ತಿದೆ. ಇಷ್ಟೆಲ್ಲಾ ಆಗ್ತಿದ್ರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಣ್ಣು ತೆರೆದು ಸಹ ನೋಡುತ್ತಿಲ್ಲ ಎಂಬುದು ರೈತರ ಆರೋಪ.