ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿರುವ ಬಾಂಗ್ಲಾ ವಲಸಿಗರಿಗೆ ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭಕ್ಕೆ ದಿನಾಂಕ ನಿಗದಿ ಮಾಡುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಪತ್ರ ಬರೆದಿದ್ದಾರೆ.
ಸಿಂಧನೂರು ತಾಲೂಕಿನಲ್ಲಿರುವ ಆರ್.ಎಚ್ ಕ್ಯಾಂಪ್ 1ರಿಂದ 5ರಲ್ಲಿ ಸುಮಾರು 20 ಸಾವಿರ ಜನ ಪೌರತ್ವ ಪಡೆಯುವ ಫಲಾನುಭವಿಗಳು ಇದ್ದಾರೆ. ಆದ್ದರಿಂದ ಸಿಂಧನೂರಿನಲ್ಲಿ 15 ಜನವರಿ 2020ರೊಳಗೆ ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭ ನಡೆಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಿನಾಂಕ ನಿಗದಿಪಡಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಅಂತ ಪತ್ರದ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಂಗಣ್ಣ ಕರಡಿ ಕೋರಿದ್ದಾರೆ.
Advertisement
Advertisement
1970-71ರಲ್ಲಿ ಬಂದ ಬಾಂಗ್ಲಾ ನಿವಾಸಿಗಳು ಈ ಕ್ಯಾಂಪ್‍ಗಳಲ್ಲಿ ವಾಸಿಸುತ್ತಿದ್ದಾರೆ. ಭಾರತ ಬಾಂಗ್ಲಾ ವಿಭಜನೆ ಬಳಿಕ ಬಂದವರಿಗೆ ನಿರಾಶ್ರಿತ ಯೋಜನೆಯಡಿ ಆಗಿನ ಕೇಂದ್ರ ಸರ್ಕಾರ ಜಮೀನು, ನಿವೇಶನ ಸೇರಿ ಎಲ್ಲಾ ಸೌಲಭ್ಯಗಳನ್ನು ನೀಡಿತ್ತು. ಯೋಜನೆ ಮುಗಿದ ಬಳಿಕ ಬಂದ ವಲಸಿಗರು ಇದೂವರೆಗೆ ಅಕ್ರಮವಾಗಿಯೇ ವಾಸಮಾಡುತ್ತಿದ್ದರು. ಈಗ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಇಲ್ಲಿನ ಕ್ಯಾಂಪ್‍ಗಳಲ್ಲಿ ವಾಸಿಸುವ ಎಲ್ಲಾ ಬಾಂಗ್ಲಾ ವಲಸಿಗರು ಭಾರತ ಪೌರತ್ವ ಪಡೆಯುತ್ತಿದ್ದಾರೆ.