– ಬೆಳಗ್ಗೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ
ಬಳ್ಳಾರಿ: ಬೆಳಗ್ಗೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬ ಕೊನೆಗೂ ಚಲಿಸುತ್ತಿದ್ದ ಬಸ್ ಕೆಳಗೆ ಮಲಗಿ ಪ್ರಾಣ ಬಿಟ್ಟ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಸಂಡೂರು ತಾಲೂಕಿನ ತೋರಣಗಲ್ ಗ್ರಾಮದ ನಿವಾಸಿ ಈರಾರೆಡ್ಡಿ (36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಈರಾರೆಡ್ಡಿ ಬೆಳಗ್ಗೆಯಿಂದಲೇ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಆದರೆ ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಹೊಸಪೇಟೆಯ ಶಾನ್ ಬಾಗ್ ಸರ್ಕಲ್‍ನಲ್ಲಿ ಬಸ್ ಚಕ್ರಕ್ಕೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹೊಸಪೇಟೆಯಿಂದ ಕೊಪ್ಪಳದ ಕಡೆಗೆ ಹೋಗುತ್ತಿದ್ದ ಬಸ್‍ನ ಹಿಂಬದಿಯ ಚಕ್ರಕ್ಕೆ ಈರಾರೆಡ್ಡಿ ತೆಲೆಕೊಟ್ಟು ಮಲಗಿದ್ದ. ಈ ವೇಳೆ ಚಾಲಕ ನೋಡದೆ ಬಸ್ ಆರಂಭಿಸಿ ಮುಂದೆ ಹೋದ ಪರಿಣಾಮ ತಲೆಯ ಮೇಲೆ ಹರಿದು ಈರಾರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇತ್ತ ವಿಷಯ ತಿಳಿದ ಈರಾರೆಡ್ಡಿ ಪೋಷಕರು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ನಮ್ಮ ಮಗ ಈ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೊಸಪೇಟೆ ಸಂಚಾರ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.