ಬಳ್ಳಾರಿ: ಸಂಡೂರು ಕ್ಷೇತ್ರದ (Sandur By Poll) ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತ (Bangaru Hanumanta) ಅವರು ಮತ ಎಣಿಕೆ ಕೇಂದ್ರದ ಹೊರಗೆ ಕಾಂಗ್ರೆಸ್ (Congress) ಕಾರ್ಯಕರ್ತರನ್ನ ನೋಡಿ ತೊಡೆ ತಟ್ಟಿದ ಪ್ರಸಂಗ ನಡೆದಿದೆ.
ಮತ ಎಣಿಕೆ ಕೇಂದ್ರದಿಂದ ಹೊರಬರುವಾಗ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ಹಾಗೂ ಜಯಗಳಿಸಿದ ಅಭ್ಯರ್ಥಿ ಅನ್ನಪೂರ್ಣ ಅವರಿಗೆ ಜೈಕಾರ ಕೂಗಿದ್ದಾರೆ. ಈ ವೇಳೆ ಬಂಗಾರು ಹನುಮಂತ ಅವರು `ಕೈ’ ಕಾರ್ಯಕರ್ತರನ್ನು ಕಂಡು ತೊಡೆ ತಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇದು ಧರ್ಮ, ಅಧರ್ಮದ ನಡುವೆ ನಡೆದ ಚುನಾವಣೆ. ಧರ್ಮ ಸೋತಿದೆ, ಅಧರ್ಮ ಗೆದ್ದಿದೆ. ಸೋಲು ಹಾಗೂ ಗೆಲವು ಸಹಜ. ಪುಡಾರಿಗಳು ಬಂದು ಕೂಗಾಡಿದರು. ಅದಕ್ಕೆ ತೊಡೆ ತಟ್ಟಿದ್ದೇನೆ ಎಂದ ಹೇಳಿದ್ದಾರೆ.
ಇಲ್ಲಿ ಸ್ವತಃ ಸಿದ್ದರಾಮಯ್ಯನವರೇ ಮೊಕ್ಕಾಂ ಹೂಡಿದ್ದರು. ನಾವು ಅವರ ವಿರುದ್ಧ ಚುನಾವಣೆ ಮಾಡಿದ್ದೇವೆ. ಸಂಡೂರುನಲ್ಲಿ 2028ಕ್ಕೆ ಬಿಜೆಪಿಯಿಂದ ಶಾಸಕನಾಗುತ್ತೇನೆ ಎಂದು ಹೇಳಿದ್ದಾರೆ.
ಚುನಾವಣೆ ಸೋತಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಸೋಲಿನ ಹೊಣೆ ನಾನೇ ಹೊರುತ್ತೇನೆ. ಇನ್ನೂ, ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.