– ಸರ್ಕಾರದಿಂದ ಸಾವಿನ ಭಾಗ್ಯ ಬಂದಿದೆ
ಬಳ್ಳಾರಿ: ಕಾಂಗ್ರೆಸ್ ಸರ್ಕಾರ (Congress Government) ಹಗರಣಗಳ ಮೇಲೆ ಹಗರಣ (Scam) ಮಾಡುತ್ತಿದೆ. ಸಿದ್ದರಾಮಯ್ಯ (Siddaramaiah) ತೆರೆದ ಪುಸ್ತಕ ಎನ್ನುತ್ತಾರೆ. ಆದರೆ ಅವರ ಪುಸ್ತಕ ತೆರೆದರೆ ಬರೀ ಕಪ್ಪು ಕಾಣಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashok) ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಂಡೂರು (Sanduru) ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂಡಾ ಹಗರಣ (MUDA Scam) ನಡೆದಿದೆ. ನನಗೆ 14 ಸೈಟ್ ಯಾವ ಲೆಕ್ಕ ಅಂತಾರೆ. ಸಿದ್ದರಾಮಯ್ಯ ಲೆಕ್ಕದಲ್ಲಿ 3-4 ಸಾವಿರ ಕೋಟಿ ಯಾವ ಲೆಕ್ಕ ಅಂತಾ ಹೇಳೋದನ್ನ ಜನ ಅರ್ಥ ಮಾಡ್ಕೋಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ ಆಗಿದೆ. ವಾಲ್ಮೀಕಿ ಜನಾಂಗಕ್ಕೆ ಬಳಕೆಯಾಗಬೇಕಿದ್ದ ಹಣವನ್ನೂ ನುಂಗಿ ನೀರು ಕುಡಿದಿದ್ದಾರೆ. ಅದ್ಯಾವ ಮುಖ ಇಟ್ಕೊಂಡು ಇಲ್ಲಿ ಪ್ರಚಾರಕ್ಕೆ ಬರ್ತಾರೆ ಗೊತ್ತಿಲ್ಲ. ನಾನು ಅಧಿವೇಶನದಲ್ಲಿ ಪ್ರಶ್ನೆ ಕೇಳಿದಾಗ ಬರೀ 87 ಕೋಟಿ ರೂ. ಮಾತ್ರ ಎಂದು ಹೇಳಿದರು ಎಂದು ಕಿಡಿಕಾರಿದರು.
ಈ ಸರ್ಕಾರ ಬಂದ ಮೇಲೆ ಹಗರಣಗಳ ಜೊತೆಗೆ ಅಧಿಕಾರಿಗಳ ಸರಣಿ ಆತ್ಮಹತ್ಯೆ ನಡೆತಿದೆ. ವಾಲ್ಮೀಕಿ ನಿಗಮದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ್ರು. ಹೆಬ್ಬಾಳ್ಕರ್ ಪಿಎ 2 ಲಕ್ಷ ರೂ. ಪಡೆದು ವರ್ಗಾವಣೆ ಮಾಡದೇ ಇದ್ದಿದ್ರಿಂದ ಅವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರ ಬಂದ್ಮೇಲೆ ಸಾವಿನ ಭಾಗ್ಯ ಕೊಟ್ಟಿದೆ. ಲಂಚ ಕೊಡಿ ಇಲ್ಲ ನೇಣು ಹಾಕಿಕೊಳ್ಳಿ ಎಂದು ಹೇಳ್ತಿದೆ. ಅಬಕಾರಿ ಮಂತ್ರಿ ಒಂದು ವಾರದಲ್ಲಿ 18 ಕೋಟಿ ರೂ. ಕಲೆಕ್ಟ್ ಮಾಡಿದ್ದಾರೆ. ವರ್ಷಕ್ಕೆ 500 ಕೋಟಿ ರೂ. ಕಲೆಕ್ಟ್ ಮಾಡ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ದರ್ಶನ್ ಪರ ವಕೀಲರಿಂದ ಹೈಕೋರ್ಟ್‌ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಕೆ – ವರದಿಯಲ್ಲಿ ಏನಿದೆ?
ಸ್ವತಃ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತ ಆಫೀಸ್ ಮುಂದೆ ಕುಂತಿದ್ದಾರೆ. ವಿಚಾರಣೆ ಎದುರಿಸುತ್ತಿದ್ದರೂ ಪ್ರಚಾರಕ್ಕೆ ಹೋಗುವ ಸಮಯವನ್ನು ಟಿಪಿಯಲ್ಲಿ ಹಾಕಿದ್ದಾರೆ. ಟಿಪಿಯಲ್ಲಿ ಹಾಕಿ ವಿಚಾರಣೆ ಹೋಗುತ್ತಾರೆ ಎಂದರೆ ಏನದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪಚುನಾವಣೆಯಲ್ಲಿ ಅಧಿಕಾರಿಗಳು ಕಾಂಗ್ರೆಸ್ ಪರವಾಗಿ ಕೆಲಸ ಮಾಡ್ತಿರೋದು ಗೊತ್ತಾಗುತ್ತಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ವೇಳೆಯೂ ಅದನ್ನ ಒಪ್ಪಿಕೊಂಡಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್ ಒಬ್ಬ ಮೋದಿ, ಮಾಧ್ಯಮದವ್ರನ್ನ ಅವಮಾನ ಮಾಡೋ ರೀತಿ ಸ್ಟೇಟಸ್ ಹಾಕಿದ್ದಾನೆ. ಕಾರ್ಟೂನ್ ಒಂದನ್ನ ಸ್ಟೇಟಸ್ ಹಾಕಿದ್ದಾನೆ. ಸ್ಟೇಟಸ್ ಹಾಕಿ ಇಂಡೈರೆಕ್ಟ್ ಆಗಿ ಪ್ರಚಾರ ಮಾಡ್ತಿದ್ದಾನೆ. ಇದು ಅಧಿಕಾರಿಗಳಿಗೆ ಕಾಣಿಸೋದಿಲ್ವಾ? ಎಸ್‌ಪಿ, ಡಿಸಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇನ್ನೊಬ್ಬ ಇನ್ಸ್ಪೆಕ್ಟರ್ 12 ವರ್ಷಗಳಿಂದ ಇಲ್ಲೇ ಇದ್ದಾರೆ. ಸರ್ಕಾರಿ ಯಂತ್ರದ ನೇರ ದುರುಪಯೋಗ ಕಾಂಗ್ರೆಸ್ ಮಾಡಿಕೊಳ್ಳುತ್ತಿದೆ. ಹೀಗಾಗಿ ಇಲ್ಲಿ ನಿಷ್ಪಕ್ಷಪಾತ ಚುನಾವಣೆ ಆಗುತ್ತೆ ಎನ್ನುವ ವಿಶ್ವಾಸ ನನಗಿಲ್ಲ. ಹೀಗಾಗಿ ನಾನು ಚುನಾವಣಾ ಆಯೋಗಕ್ಕೆ 8ನೇ ತಾರೀಖು ಮನವಿ ಕೊಡ್ತೇನೆ. ಕೆಲಸ ಮಾಡುವ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ಕೊಡಲಾಗ್ತಿದೆ. ನಿನ್ನೆ ಎಫ್‌ಐಆರ್ ದಾಖಲು ಮಾಡಿದ್ದಾರೆ. ಹೀಗಾಗಿ ಇಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಯುತ್ತಿದೆ ಎನ್ನುವುದು ಅನುಮಾನ. ಕೂಡಲೇ ಆ ರೀತಿಯ ಅಧಿಕಾರಿಗಳನ್ನ ಎತ್ತಂಗಡಿ ಮಾಡಬೇಕು ಎಂದು ಒತ್ತಾಯಿಸಿದರು.