ಬೆಂಗಳೂರು: ಕುಚಿಕು ಗೆಳೆಯರಾದ ಜನಾರ್ದನ ರೆಡ್ಡಿ (Janardhana Reddy), ಬಿ ಶ್ರೀರಾಮುಲು (B Sriramulu) ಮಧ್ಯೆ ಬಂಗಾರು ಹನುಮಂತು ಕಿಡಿ ಹೊತ್ತಿಸಿದ್ದು, ಬಿಜೆಪಿಯಲ್ಲಿ ಮತ್ತೊಂದು ಕಲಹಕ್ಕೆ ವೇದಿಕೆ ಸೃಷ್ಟಿಯಾಗಿದೆ.
ಇಲ್ಲಿಯವರೆಗೆ ವಿಜಯೇಂದ್ರ ವರ್ಸಸ್ ಯತ್ನಾಳ್ ಕಚ್ಚಾಟದ ಮಧ್ಯೆ ರೆಡ್ಡಿ ವರ್ಸಸ್ ರಾಮುಲು ಫೈಟ್ ಆರಂಭವಾಗಿದ್ದು ಹೈಕಮಾಂಡ್‌ಗೆ ಹೊಸ ತಲೆನೋವು ಆರಂಭವಾಗಿದೆ. ಒಂದೇ ರಾತ್ರಿಗೆ ಗಂಭೀರ ಹಂತಕ್ಕೆ ರೆಡ್ಡಿ, ರಾಮುಲು ಕಲಹ ಹೋಗಿದ್ದು ಪಕ್ಷದ ಕೋರ್ ಕಮಿಟಿ ಸಭೆಯಲ್ಲೇ ರೆಬೆಲ್ ರಾಮುಲು ಅಸಮಧಾನ ಸ್ಫೋಟವಾಗಿದೆ. ಇದನ್ನೂ ಓದಿ: ಬಿಜೆಪಿ ಕೋರ್ ಕಮಿಟಿ ಸಭೆ – ರಾಮುಲುಗೆ ರಾಧಾಮೋಹನ್ ದಾಸ್ ಕ್ಲಾಸ್!
ಸಂಡೂರು ಉಪಚುನಾವಣೆಯಲ್ಲಿ ನಾನು ಸರಿಯಾಗಿ ಕೆಲಸ ಮಾಡಿದ್ದೇನೆ. ಆದರೆ ಸಂಡೂರು ಸೋಲನ್ನು ನನ್ನ ತಲೆಗೆ ಕಟ್ಟುತ್ತಿದ್ದಾರೆ. ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದು ತ್ಯಾಗ ಮಾಡಿದ ಹಿರಿಯ ನಾಯಕ ನಾನು. ನನಗೆ ಈಗ ಪಕ್ಷದ ವೇದಿಕೆಯಲ್ಲೇ ಅಪಮಾನ ನಡೆದಿದೆ ಎಂದು ಕೆರಳಿರುವ ಶ್ರೀರಾಮುಲು ರಾಜ್ಯ ಉಸ್ತುವಾರಿ ರಾಧಾ ಮೋಹನ ದಾಸ್, ಜನಾರ್ದನ ರೆಡ್ಡಿ ಹಾಗೂ ವಿಜಯೇಂದ್ರ ವಿರುದ್ಧ ಸಂಘಕ್ಕೆ ಮೌಖಿಕ ದೂರು ನೀಡಿದ್ದಾರೆ. ಇದನ್ನೂ ಓದಿ: ಸಭೆಯಲ್ಲಿ ನನಗೆ ಅಪಮಾನ ಮಾಡಿದ್ದಾರೆ – ರಾಧಾಮೋಹನ್ ದಾಸ್ ವಿರುದ್ಧ ಶ್ರೀರಾಮುಲು ಗರಂ
ಜನಾರ್ದನ ರೆಡ್ಡಿ ತಮ್ಮನ್ನು ರಾಜಕೀಯವಾಗಿ ಮುಗಿಸಲು ತಂತ್ರ ಮಾಡುತ್ತಿದ್ದಾರೆ ಎನ್ನುವುದು ರಾಮುಲು ಆರೋಪ. ಹೈಕಮಾಂಡ್ ಮೆಟ್ಟಿಲೇರಲು ರಾಮುಲು ತಯಾರಿ ನಡೆಸಿದ್ದು ಬಿ ಎಲ್ ಸಂತೋಷ್ ಅವರಿಗೂ ದೂರು ಕೊಟ್ಟು ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.
ಈ ಮಧ್ಯೆ ಇಂದು ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ರಾಮುಲು ಮಾಡಿದ ಆರೋಪಗಳಿಗೆ ರೆಡ್ಡಿ ಠಕ್ಕರ್ ನೀಡುವ ಸಾಧ್ಯತೆಯಿದೆ.