ಸಂಡೂರು| ಅಭ್ಯರ್ಥಿ ಪರ ಪ್ರಚಾರದಿಂದ ಕಾಂಗ್ರೆಸ್‌ ಶಾಸಕರು ದೂರ ದೂರ

Public TV
2 Min Read
Sandur By Electio Congress MLAs not interested in election campaign Annapurna Tukaram 2

ಬಳ್ಳಾರಿ: ಸಂಡೂರು ಉಪಚುನಾವಣೆ (Sandur By Election) ಅಖಾಡ ರಂಗೇರಿದೆ. ಈಗಾಗಲೇ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ (Bangaru Hanumantha) ಪರ ಜನಾರ್ದನ ರೆಡ್ಡಿ-ರಾಮುಲು ಭರ್ಜರಿ ಮತ ಬೇಟೆ ಆರಂಭಿಸಿದ್ದಾರೆ. ಆದರೆ ಕಾಂಗ್ರೆಸ್ (Congress) ನಾಯಕರು ಮಾತ್ರ ಇದುವರೆಗೂ ಪ್ರಚಾರದ ಭರಾಟೆಯಿಂದ ದೂರವೇ ಉಳಿದಿದ್ದಾರೆ. ಸಂಸದ ತುಕಾರಾಂ ಹಾಗೂ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ (Annapurna Tukaram) ಮಾತ್ರ ಪ್ರಚಾರ ನಡೆಸುತ್ತಿದ್ದಾರೆ.

ತಮ್ಮದೇ ಉಸ್ತುವಾರಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದರೂ ಕೇವಲ ನಾಮಪತ್ರ ಸಲ್ಲಿಕೆಯ ದಿನ ಮಾತ್ರ ಬಂದಿದ್ದ ಜಮೀರ್ ಅಹಮ್ಮದ್ (Zameer Ahmed) ಸಂಡೂರು ಉಪಚುನಾವಣೆ ಬಗ್ಗೆ ಆಸಕ್ತಿಯನ್ನೇ ತೋರುತ್ತಿಲ್ಲ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಹೊಂದಿರುವ ಸಚಿವ ಸಂತೋಷ್ ಲಾಡ್ (Santosh Lad) ಉಸ್ತುವಾರಿ ತೆಗೆದುಕೊಳ್ಳುತ್ತಾರೆ ಎನ್ನಲಾಗಿದ್ದು ಅವರು ಪ್ರಚಾರ ಕಾರ್ಯ ಆರಂಭಿಸಿಲ್ಲ.

Sandur By Electio Congress MLAs not interested in election campaign Annapurna Tukaram 1

2023ರ ಚುನಾವಣೆಯಲ್ಲಿ ಬಳ್ಳಾರಿ (Ballari) ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಇದೀಗ ತುಕಾರಾಂ ಸಂಸದರಾಗಿರುವುದರಿಂದ ಸದ್ಯ ನಾಲ್ಕು ಶಾಸಕರು ಇದ್ದಾರೆ. ಆದರೆ ತಮ್ಮದೇ ಪಕ್ಷದ ಅಭ್ಯರ್ಥಿ ಪರವಾಗಿ ಜಿಲ್ಲೆಯ ನಾಲ್ಕೂ ಶಾಸಕರು ಇದುವರೆಗೂ ಪ್ರಚಾರ ಕಾರ್ಯದಿಂದ ದೂರವೇ ಉಳಿದಿದ್ದಾರೆ. ಕೇವಲ ಸಂಸದ ತುಕಾರಾಂ ಹಾಗೂ ಅನ್ನಪೂರ್ಣ ತುಕಾರಾಂ ಮಾತ್ರ ಪ್ರಚಾರ ಮಾಡ್ತಿದ್ದಾರೆ.  ಇದನ್ನೂ ಓದಿ: MUDA SCAM| ಇಡಿ ದಾಳಿ ಬೆನ್ನಲ್ಲೇ ವಾಕಿಂಗ್‌ ಮಾಡುತ್ತಿದ್ದ ಮುಡಾ ಮಾಜಿ ಆಯುಕ್ತ ಪರಾರಿ

ನಾಮಪತ್ರ ಸಲ್ಲಿಕೆ ದಿನ ಮಾತ್ರ ಬಂದು ಹೋಗಿರುವ ಸಚಿವರಾದ ಜಮೀರ್ ಅಹ್ಮದ್, ಸಂತೋಷ್ ಲಾಡ್ ಹಾಗೂ ನಾಗೇಂದ್ರ ಅವರೂ ನಾಪತ್ತೆಯಾಗಿದ್ದಾರೆ. ಸಂಡೂರು ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಇಲ್ಲಿಯವರೆಗೆ ಸೋತಿಲ್ಲ. ಇಲ್ಲಿ ನಾವೇ ಗೆಲ್ಲುತ್ತವೇ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರು ಇದ್ದಂತೆ ಕಾಣುತ್ತಿದೆ.

janardhan reddy sriramulu sandur by election

ಈ ಬಾರಿ ಕಾಂಗ್ರೆಸ್‌ ಭದ್ರಕೋಟೆಯನ್ನು ಛಿದ್ರ ಮಾಡಲು ಬಿಜೆಪಿ ನಾಯಕರು ಭಿನ್ನಮತ ಬದಿಗೊತ್ತಿ ಜಂಟಿ ಪ್ರಚಾರ ಕೈಗೊಂಡಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಆ ರೀತಿಯ ಪ್ರಚಾರದ ಹುಮ್ಮಸ್ಸು, ಉತ್ಸಾಹ ಕಾಣಿಸ್ತಿಲ್ಲ. ಜಿಲ್ಲೆ ಕಾಂಗ್ರೆಸ್ ನಾಯಕರಲ್ಲಿನ ಭಿನ್ನಮತದಿಂದಲೇ ಶಾಸಕರು ಪ್ರಚಾರದಲ್ಲಿ ಭಾಗಿಯಾಗಿಲ್ಲ ಎನ್ನಲಾಗುತ್ತಿದೆ.

ನಾಮಪತ್ರ ಸಲ್ಲಿಕೆ ವೇಳೆಯೂ ಜಿಲ್ಲಾ ಶಾಸಕರ ಅಸಮಾಧಾನ ಬಹಿರಂಗಗೊಂಡಿತ್ತು. ಜಿಲ್ಲೆಯ ನಾಲ್ವರು ಶಾಸಕರ ಪೈಕಿ ನಾಗೇಂದ್ರ ಅವರನ್ನ ಹೊರತುಪಡಿಸಿದ್ರೆ ಯಾವೊಬ್ಬ ಶಾಸಕರೂ ಭಾಗಿಯಾಗಿರಲಿಲ್ಲ. ಇದನ್ನ ಸರಿಪಡಿಸಲು ಉಸ್ತುವಾರಿ ಸಚಿವರು ಸೇರಿ ರಾಜ್ಯದ ನಾಯಕರು ಮುಂದಾಗಿಲ್ಲ. ಇತ್ತ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಬಿಜೆಪಿ ನಾಯಕರು ಇತಿಹಾಸದಲ್ಲಿ ಮೊದಲ ಬಾರಿಗೆ ಕಮಲ ಅರಳಿಸುವ ಆತ್ಮವಿಶ್ವಾಸದಲ್ಲಿದ್ದಾರೆ.

 

Share This Article