ಟೈಟಲ್ ಮೂಲಕವೇ ಚಂದನವನದಲ್ಲೊಂದು ನಿರೀಕ್ಷೆಯನ್ನ ಹುಟ್ಟುಹಾಕಿರುವ ಚಿತ್ರ ವೆಡ್ಡಿಂಗ್ ಗಿಫ್ಟ್. ಈ ಚಂದದ ಕ್ಯಾಚಿ ಹೆಸರನ್ನ ಕೇಳಿದಾಕ್ಷಣ ಇದ್ಯಾವ ಗಿಫ್ಟ್ ಕೊಡ್ತಿದ್ದಾರೆ ನಿರ್ದೇಶಕ ವಿಕ್ರಂ ಪ್ರಭು ಅಂತ ಕೇಳಿದ್ದ ಪ್ರೇಕ್ಷಕರಿಗೆ ಉತ್ತರವಾಗಿ ಟೀಸರ್ ಮತ್ತು ಟ್ರೈಲರ್ ಗಿಫ್ಟ್ ಕೊಟ್ಟು ಕಥೆಯ ಜಾಡಿನ ಬಗ್ಗೆ ಸುಳಿವು ಕೊಟ್ಟಿದ್ದರು.
ಅದರಂತೆ ಹೇಳೋದಾದ್ರೆ, ಕಾನೂನಿನಲ್ಲಿ ಎಲ್ಲದಕ್ಕೂ ಕಾಯ್ದೆಗಳಿದೆ. ಆದ್ರೆ ಕಾಯ್ದೆ ಕಾನೂನುಗಳೇ ಕೆಲವರ ದುರ್ಬಳಕೆಗೆ ಒಳಗಾಗಿ ಅದರಿಂದ ನೊವುಂಡವರು ಹಲವರಿದ್ದಾರೆ. ಕಾನೂನಿನ ಕಣ್ಣಿಗೆ ಮಣ್ಣೆರಚಿದ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಆದ್ರೆ ವೆಡ್ಡಿಂಗ್ ಗಿಫ್ಟ್‌ನಲ್ಲಿ ಸೆಕ್ಷನ್ 498 Aನ ದುರ್ಬಳಕೆ ಬಗ್ಗೆ ಹೇಳಲಾಗಿದೆ. ಹೆಣ್ಣುಮಕ್ಕಳ ರಕ್ಷಣೆ ವಿಚಾರವಾಗಿ ಇರುವ ಈ ಕಾಯ್ದೆ ಹೆಣ್ಣೊಬ್ಬಳು ಜಿದ್ದಿಗೆ ಬಿದ್ದು ಮುಗ್ದ ಗಂಡನ ಮೇಲೆ ಕಾನೂನಾತ್ಮಕವಾಗಿ ಎಸಗುವ ದೌರ್ಜನ್ಯದ ಬಗ್ಗೆ ವೆಡ್ಡಿಂಗ್ ಗಿಫ್ಟ್ ಹೇಳಹೊರಟಿದ್ದು, ಈ ಮೂಲಕ ಸಮಾಜಕ್ಕೊಂದು ಸಂದೇಶದೊಂದಿಗೆ ಅರಿವು, ಜಾಗೃತಿ ಮೂಡಿಸುವ ಕೆಲಸಕ್ಕೆ ವಿಕ್ರಂ ಪ್ರಭು ನಿಂತಿದ್ದಾರೆ. ಸೀರಿಯಸ್ ವಿಚಾರಗಳನ್ನ ಚಿತ್ರ ಹೊತ್ತಿದೆಯಾದ್ರೂ, ಕಮರ್ಷಿಯಲ್ ಎಳೆಯೊಂದಿಗೆ, ಮನರಂಜನಾ ಅಂಶವನ್ನು ಹೊಂದಿದೆ.
ಪ್ರೀತಿ, ಮದುವೆ, ಸಾವಿರ ಕನಸುಗಳು, ಯಾವುದೋ ವೈಮನಸ್ಸು, ಪ್ರೀತಿ ಇರಬೇಕಾದ ಕಡೆ ಜಗಳ-ದ್ವೇಷ, ಕಡೆಗೆ ಇವೆಲ್ಲಕ್ಕಿಂತಲೂ ಹಣ ಮುಖ್ಯವಾಗಿ, ಮಾಡದ ತಪ್ಪಿಗೆ ಗಂಡನಾದವನನ್ನು ಜೈಲಿಗಟ್ಟುವ ಹೆಣ್ಣೊಬ್ಬಳ ಗುರಿ ಈ ಚಿತ್ರದಲ್ಲಿ ಗರಿ ಬಿಚ್ಚತ್ತೆ. ಇದರಂತೆ, ಸುಳ್ಳಿನ ಸರಮಾಲೆಗಳ ಪರ ವಾದಿಸುವ ವಕೀಲರು, ಸತ್ಯಕ್ಕೆ ತಡವಾಗಿ ಆದರೂ ಜಯ ಲಭಿಸತ್ತೋ ಇಲ್ಲವೋ ಎಂಬಿತ್ಯಾದಿ ಪ್ರಶ್ನೆ. ಅಷ್ಟಕ್ಕೂ ಚಂದದ ಸಂಸಾರದಲ್ಲಿ ಈ ಹುಳುಕಿಗೆ ಕಾರಣವಾದ ಅಂಶದ ಹುಡುಕಾಟ ಇವೆಲ್ಲವೂ ಟ್ರೈಲರ್ ತುಣುಕಲ್ಲಿ ಕಂಡಿದೆಯಾದ್ರೂ, ನಿರ್ದೇಶಕರು ಮಾತ್ರ ಚಿತ್ರ ರಿಲೀಸ್ ನಂತ್ರವೇ ಇವೆಲ್ಲಕ್ಕೂ ಉತ್ತರ ಅನ್ನೋದನ್ನ ಜಾಣ್ಮೆಯಿಂದ ಕಾಪಾಡಿಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಮೂಲದ ಬೆಡಗಿಗೆ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ – ಯಾರು ಈ ಸಿನಿ ಶೆಟ್ಟಿ?
ಗಾಂಧಿನಗರದ ಹಲವು ಪ್ರತಿಭಾವಂತ ನಿರ್ದೇಶಕರ ಬಳಿ ಪಳಗಿರುವ ವಿಕ್ರಂ ಪ್ರಭು ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಿನಿಮಾ ನಿರ್ಮಾಣದ ಜವಬ್ದಾರಿಯನ್ನು ಹೊತ್ತಿದ್ದು, ವಿಕ್ರಂ ಪ್ರಭು ಫಿಲಂಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ನಾಯಕಿಯಾಗಿ ಸೋನುಗೌಡ, ನಿಶಾನ್ ನಾಯಕನಾಗಿ ನಟಿಸಿದರೆ, ಹಿರಿಯ ನಟಿ ಪ್ರೇಮಾ ಲಾಯರ್ ಆಗಿ ಈ ಚಿತ್ರದಲ್ಲಿ ಸತ್ಯದ ಪರ ವಾದ ಮಾಡುವ ಪಾತ್ರದಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಅಚ್ಯುತ ಕುಮಾರ್ ಸುಳ್ಳಿನ ಪರ ವಾದ ಮಂಡಿಸುವ ವಕೀಲರಾಗಿ ಗಮನ ಸೆಳೆಯಲಿದ್ದು, ಪವಿತ್ರ ಲೋಕೇಶ್ ಸೇರಿದಂತೆ ಹಲವರು ನುರಿತ ಕಲಾವಿದರ ಬಳಗ ವೆಡ್ಡಿಂಗ್ ಗಿಫ್ಟ್‌ನ ಭಾಗವಾಗಿದ್ದಾರೆ. ಇದನ್ನೂ ಓದಿ: ಸುದೀಪ್‌ಗೆ ಅವಹೇಳನ ಮಾಡಿದವನಿಗೆ ನಂದಕಿಶೋರ್ ತರಾಟೆ – ನೀನು ಗಂಡಸಾಗಿದ್ರೆ ಸಾಕ್ಷಿ ಸಮೇತ ಪ್ರೂವ್ ಮಾಡು ಎಂದ ನಿರ್ದೇಶಕ
ಇನ್ನುಳಿದಂತೆ ಉದಯ್‌ಲೀಲಾ ಛಾಯಾಗ್ರಹಣ, ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ ವೆಡ್ಡಿಂಗ್ ಗಿಫ್ಟ್ ಚಿತ್ರಕ್ಕಿದ್ದು, ನೈಜ ಘಟನಾವಳಿಗಳ ಸುತ್ತ ಸುಳಿದು, ಸಂದೇಶ ಸಾರುವ ವೆಡ್ಡಿಂಗ್ ಗಿಫ್ಟ್ ಜುಲೈ 8ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ.