ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಕೆಲ ದಿನಗಳ ಹಿಂದೆ ಸತ್ಯಜಿತ್ ಅವರಿಗೆ ಜಾಂಡೀಸ್ ಆಗಿತ್ತು. ಈ ಬೆನ್ನಲ್ಲೇ ಕಳೆದ ಶುಕ್ರವಾರ ಹೃದಯಾಘಾತ ಕೂಡ ಸಂಭವಿಸಿತ್ತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು.
ಎರಡು ದಿನಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಸದ್ಯ ನಟನ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ಬೌರಿಂಗ್ ಭಾನುವಾರ ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿದೆ. ಇದನ್ನೂ ಓದಿ: ಹುಟ್ಟಿದಾಗಲೇ ಮಗಳು ಸತ್ತೋಗಿದ್ರೆ ಚೆನ್ನಾಗಿತ್ತು ಅನ್ನಿಸುತ್ತಿದೆ: ಸತ್ಯಜಿತ್
ಈಗಾಗಲೇ ಗ್ಯಾಂಗ್ರಿನ್ ನಿಂದ ಎಡಗಾಲು ತೆಗೆಯಲಾಗಿದೆ. ಗ್ಯಾಂಗ್ರಿನ್ ಬಲಗಾಲಿಗೂ ಸ್ಪ್ರೆಡ್ ಆಗುತ್ತಿದ್ದು ತಕ್ಷಣ ಐಸಿಯುನಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಬಿಪಿ ಮತ್ತು ಶುಗರ್ ಏರುಪೇರಾಗುತ್ತಿದ್ದು, ವಯಸ್ಸು 70 ದಾಟಿರುವ ಕಾರಣ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಆದರೆ ವೈದ್ಯರು ಪ್ರಯತ್ನವನ್ನು ಮುಂದುವರಿಸಿದ್ದಾರೆ ಎಂದು ಪುತ್ರ ಆಕಾಶ್ ಜಿತ್ ಮಾಹಿತಿ ನಿಡಿದ್ದಾರೆ.
ಇದೇ ವೇಳೆ ಕಳೆದ ಕೆಲ ವರ್ಷಗಳಿಂದ ಗ್ಯಾಂಗ್ರಿನ್ ನಿಂದ ಬಳಲುತ್ತಿರುವ ಕಾರಣ ಹಣದ ಸಮಸ್ಯೆ ಇರುವುದು ನಿಜ. ಆದರೆ ಜನರಿಂದ ಹಣ ಪಡೆಯುವುದು ಇಷ್ಟವಿಲ್ಲ. ಫಿಲ್ಮ್ ಚೇಂಬರ್, ಸರ್ಕಾರ ಅಥವಾ ಇನ್ಶೂರೆನ್ಸ್ ಕಡೆಯಿಂದ ಹಣ ಕೊಟ್ಟರೆ ಚಿಕಿತ್ಸೆಗೆ ಸಹಾಯವಾಗುತ್ತದೆ ಎಂದು ಆಕಾಶ್ ಅಳಲು ತೋಡಿಕೊಂಡಿದ್ದಾರೆ.