ಬೆಂಗಳೂರು: ಬಿಗ್ ಬಾಸ್ ಶೋ ಆದ ನಂತರ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸಿರೋ ಮೊದಲ ಚಿತ್ರ ರಾಂಧವ. ಸುನೀಲ್ ಆಚಾರ್ಯ ನಿರ್ದೇಶನದ ಈ ಚಿತ್ರ ಅಖಂಡ ಎರಡು ವರ್ಷಗಳ ಕಾಲ ಚಿತ್ರೀಕರಣಗೊಂಡಿತ್ತು. ಆ ಹಂತದ ತುಂಬೆಲ್ಲ ತುಂಬು ಭರವಸೆಯನ್ನು ಪ್ರೇಕ್ಷಕರಲ್ಲಿ ತುಂಬುತ್ತಾ ಬಂದಿದ್ದ ಈ ಚಿತ್ರವೀಗ ತೆರೆ ಕಂಡಿದೆ. ಇದರ ವಿಶೇಷವಾದ, ಅಪರೂಪದ ಕಥೆ, ಯಾರೂ ಊಹಿಸಲಾಗದಂಥಾ ತಿರುವುಗಳು ಮತ್ತು ಭುವನ್ ಪೊನ್ನಣ್ಣರ ಮನಸೋರೆಗೊಳ್ಳುವ ಅಭಿನಯದೊಂದಿಗೆ ಪ್ರೇಕ್ಷಕರನ್ನು ಸಂಪೂರ್ಣ ಖುಷಿಯ ಮೂಡಿಗೆ ಜಾರಿಸುವಷ್ಟು ಅದ್ದೂರಿಯಾಗಿಯೇ ರಾಂಧವ ಮೂಡಿ ಬಂದಿದೆ.
Advertisement
ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ನಾಯಕ ಭುವನ್ ಪೊನ್ನಣ್ಣರ ಪಾಲಿಗೂ ಇದು ಮೊದಲ ಚಿತ್ರ. ಆದರೆ ಇದು ಇವರಿಬ್ಬರ ಮೊದ ಚಿತ್ರ ಅನ್ನೋ ಸಣ್ಣ ಸುಳಿವೂ ಕೂಡಾ ಇಡೀ ಚಿತ್ರದಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ. ಸುನೀಲ್ ಪಳಗಿದ ನಿರ್ದೇಶಕನಂತೆ ಕಾರ್ಯ ನಿರ್ವಹಿಸಿದ್ದರೆ, ಭುವನ್ ಅದೆಷ್ಟೋ ವರ್ಷಗಳಿಂದ ನಾಯಕನಾಗಿ ನಟಿಸುತ್ತಾ ಬಂದವರೇನೋ ಎಂಬ ಫೀಲ್ ಹುಟ್ಟಿಸುವಂತೆ ಎಲ್ಲ ಶೇಡುಗಳ ಪಾತ್ರಕ್ಕೂ ಜೀವ ತುಂಬಿದ್ದಾರೆ. ಹೀಗೆ ಹೊಸಬರ ಚಿತ್ರವೆಂದ ಮೇಲೆ ಅಲ್ಲಿ ಹೊಸತನ ಮತ್ತು ಹೊಸಾ ಪ್ರಯೋಗಗಳು ಒಂಚೂರಾದರೂ ಇದ್ದೇ ಇರುತ್ತದೆಂಬ ನಂಬಿಕೆ ಇರುತ್ತದೆ. ಆದರೆ ಇಡೀ ರಾಂಧವ ಚಿತ್ರವೇ ಹೊಸನದೊಂದಿಗೆ, ಹೊಸಾ ಪ್ರಯೋಗಗಳೊಂದಿಗೆ ಮೂಡಿ ಬಂದಿದೆ ಅನ್ನೋದು ನಿಜವಾದ ವಿಶೇಷ. ಅದುವೇ ಈ ಸಿನಿಮಾದ ನಿಜವಾದ ಶಕ್ತಿಯೂ ಹೌದು.
Advertisement
Advertisement
ನಿರೀಕ್ಷೆಯಂತೆಯೇ ಇಲ್ಲಿ ಭುವನ್ ಮೂರು ಶೇಡುಗಳ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಸಿನಿಮಾ ಬಿಚ್ಚಿಕೊಳ್ಳೋದು ರಾಬರ್ಟ್ ಎಂಬ ಪಕ್ಷಿ ಶಾಸ್ತ್ರಜ್ಞನ ಪಾತ್ರದ ಮೂಲಕ. ಮಹಾ ಮೌನ ಧರಿಸಿಕೊಂಡಂತಿರೋ ಈ ಪಾತ್ರ ಪಕ್ಷಿಗಳ ಅಧ್ಯಯನ ನಡೆಸೋದೇ ತನ್ನ ಪರಮ ಗುರಿ, ಅದೇ ಬದುಕೆಂದುಕೊಂಡಿರುವಂಥಾದ್ದು. ಇಂಥಾ ರಾಬರ್ಟ್ ವಿಶೇಷವಾದ ಗೂಬೆಯೊಂದರ ಬಗ್ಗೆ ಅಧ್ಯಯನ ನಡೆಸುವ ಹುಚ್ಚಿಗೆ ಬೀಳುತ್ತಾನೆ. ಆ ಗೂಬೆಯನ್ನು ಬೆಂಬತ್ತಿಕೊಂಡು ಒಡೆಯನ ಸಮುದ್ರ ಎಂಬ ಪ್ರದೇಶದ ದಟ್ಟ ಕಾಡಿನ ಒಂಟಿ ಮನೆ ಸೇರಿಕೊಳ್ಳುತ್ತಾನೆ.
Advertisement
ಹೀಗೆ ಗೂಬೆಯ ಬಗ್ಗೆ ಅಧ್ಯಯನ ಮಾಡಲು ತೆರಳುವ ರಾಬರ್ಟ್ಗೆ ವಿಚಿತ್ರವಾದೊಂದು ಕನಸು ಸದಾ ಕಾಡುತ್ತಿರುತ್ತದೆ. ಆತ ಒಡೆಯನಸಮುದ್ರ ಪ್ರದೇಶಕ್ಕೆ ಹೋದಾಗ ಅಲ್ಲಿ ಆ ಕನಸಿಗೆ ವಾಸ್ತವವೆಂಬಂಥಾ ಲಿಂಕುಗಳು ಬೆಸೆಯುತ್ತಾ ಹೋಗುತ್ತದೆ. ಅಲ್ಲಿಂದಲೇ ಕಥೆ ಕಣ್ಣೆವೆ ಮಿಟುಕಿಸಲೂ ಆಗದಂಥಾ ಕುತೂಹಲದೊಂದಿಗೆ ರೋಚಕವಾಗಿ ಬಿಚ್ಚಿಕೊಳ್ಳುತ್ತದೆ. ಆ ಬಳಿಕವೇ ಭುವನ್ ರಾಜ ರಾಂಧವನಾಗಿ, ರಾಣಾ ಆಗಿ, ಪ್ರೇಮಿಯಾಗಿ ಕಂಗೊಳಿಸುತ್ತಾರೆ. ಆ ಹಾದಿಯಲ್ಲಿ ಯಾರ ಎಣಿಕೆಗೂ ಸಿಗಯದಂಥಾ, ಏನನ್ನೂ ಅಂದಾಜಿಸಲಾಗದಂಥಾ ಟ್ವಿಸ್ಟುಗಳೊಂದಿಗೆ ಕಥೆ ಕದಲುತ್ತದೆ. ಹಾಗಾದರೆ ರಾಬರ್ಟ್ಗೆ ಬೀಳುತ್ತಿದ್ದ ಕನಸೇನು, ಒಡೆಯನ ಸಮುದ್ರದ ಕಾಡಿನಲ್ಲಿ ಆತನೆದುರು ನಿಂತ ವಾಸ್ತವಗಳು ನಿಜವಾದವುಗಳಾ ಅನ್ನೋದರ ಸುತ್ತಾ ಅಪರೂಪದ ಕಥೆ ಚಲಿಸುತ್ತದೆ.
ಇದರ ಕಥೆ ಅದೆಷ್ಟು ಕ್ಲಿಷ್ಟದಾಯಕವಾದದ್ದೆಂದರೆ ಇಲ್ಲಿ ಒಂದೆಳೆ ಮಿಸ್ ಆದರೂ ಇಡೀ ಚಿತ್ರವೇ ಸೂತ್ರ ತಪ್ಪಿದಂತಾಗುತ್ತದೆ. ಆದರೆ ಅದೆಲ್ಲವನ್ನೂ ಸುನೀಲ್ ಆಚಾರ್ಯ ಎಚ್ಚರಿಕೆಯಿಂದ ನಿಭಾಯಿಸಿದ್ದಾರೆ. ತಾನೊಬ್ಬ ಭರವಸೆಯ ನಿರ್ದೇಶಕನಾಗಿ ನೆಲೆ ನಿಲ್ಲಬಲ್ಲ ಪ್ರತಿಭೆ ಅನ್ನೋದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಭುವನ್ ಅವರಂತೂ ಪ್ರತೀ ಫ್ರೇಮಿನಲ್ಲಿಯೂ ಅಚ್ಚರಿದಾಯಕವಾಗಿ ನಟಿಸಿದ್ದಾರೆ. ಎಲ್ಲರ ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದಾರೆ. ಇದು ಕನ್ನಡದ ಪಾಲಿಗೆ ಅತ್ಯಂತ ಅಪರೂಪದ ಚಿತ್ರ. ಸಿದ್ಧಸೂತ್ರಗಳನ್ನು ಮೀರುತ್ತಲೇ ಕಮರ್ಶಿಯಲ್ ಜಾಡನ್ನು ಕಾಪಾಡಿಕೊಂಡಿರೋ ಈ ಚಿತ್ರವನ್ನು ಮಿಸ್ ಮಾಡದೇ ನೋಡಿ.
ರೇಟಿಂಗ್: 3.5/5