ಬೆಂಗಳೂರು:ಶಿವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಉಡುಂಬಾ ಇದೇ ತಿಂಗಳ ಇಪ್ಪತ್ಮೂರನೇ ತಾರೀಕಿನಂದು ಬಿಡುಗಡೆಗೆ ರೆಡಿಯಾಗಿದೆ. ಈ ಹಿಂದೆ ಗೂಳಿಹಟ್ಟಿ ಚಿತ್ರದಲ್ಲಿ ಅಬ್ಬರದ ನಟನೆ ನೀಡಿ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದ ಪವನ್ ಶೌರ್ಯ ಈಗ ಉಡುಂಬಾನಾಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಇದೇ ತಿಂಗಳ 23ರಂದು ಬಿಡುಗಡೆಯಾಗಲಿರೋ ಈ ಚಿತ್ರದಲ್ಲಿನ ಪವನ್ ನಟನೆ ಟ್ರೇಲರ್ ಮೂಲಕವೇ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಉಡುಂಬನಾಗಲು ಪವನ್ ಮಾಡಿರೋ ಕಸರತ್ತುಗಳೇ ಅಂಥಾದ್ದಿವೆ.
ಪವನ್ ಶೌರ್ಯ ಮೊದಲ ಚಿತ್ರ ಗೂಳಿಹಟ್ಟಿಗಾಗಿಯೂ ಇಂಥಾದ್ದೇ ತಯಾರಿಯೊಂದಿಗೆ ಅಖಾಡಕ್ಕಿಳಿದಿದ್ದರು. ಅದರಲ್ಲಿಯೂ ಉಡುಂಬಾ ಚಿತ್ರದ ಕಥೆಯಲ್ಲಿ ನಾಯಕನ ಪಾತ್ರ ದೈಹಿಕವಾಗಿಯೂ ಹಲವಾರು ರೂಪಾಂತರಗಳನ್ನು ಬೇಡುವಂಥಾದ್ದು. ಆದರೆ ಅದಕ್ಕೆ ಇಡೀ ಚಿತ್ರತಂಡವೇ ಬೆರಗಾಗುವಂತೆ ಪವನ್ ಶೌರ್ಯ ಜೀವ ತುಂಬಿದ್ದಾರೆ. ಅದರಲ್ಲಿಯೂ ವ್ರತ ಹಿಡಿದಿದ್ದ ಸಂದರ್ಭದಲ್ಲಿ ಬರೀ ವೆಜ್ ಆಹಾರ ಪದ್ಧತಿಯಲ್ಲಿಯೇ ಅವರು ಸಿಕ್ಸ್ ಪ್ಯಾಕ್ ತಮ್ಮದಾಗಿಸಿಕೊಂಡಿದ್ದೊಂದು ಸಾಹಸ!
ಚಿತ್ರೀಕರಣ ಆರಂಭವಾದಾಗ ನಿರ್ದೇಶಕರು ಕಥೆಗೆ ಪೂರಪಕವಾಗಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಬೇಕೆಂಬ ಬೇಡಿಕೆ ಇಟ್ಟಿದ್ದರಂತೆ. ಆದರೆ ಆ ಸಂದರ್ಭದಲ್ಲಿ ಮನೆಮಂದಿ ಅದ್ಯಾವುದೋ ವ್ರತ ಹಿಡಿದಿದ್ದರಿಂದ ಪವನ್ ಪಾಲಿಗೂ ನಾನ್‍ವೆಜ್ ಮರೀಚಿಕೆಯಾಗಿತ್ತು. ಆದರೂ ಅದನ್ನೇ ಸವಾಲಾಗಿ ಸ್ವೀಕರಿಸಿದ ಪವನ್ ದಿನಾ ಎರಡು ಹೊತ್ತು ತಲಾ ಮೂರು ಗಂಟೆಗಳ ಕಾಲ ಬೆವರಿಳಿಸಿ ಕೇವಲ ಎರಡೇ ತಿಂಗಳಲ್ಲಿ ಸಿಕ್ಸ್ ಪ್ಯಾಕನ್ನು ತಮ್ಮದಾಗಿಸಿಕೊಂಡಿದ್ದರಂತೆ.
ಅಷ್ಟಕ್ಕೂ ಬಾಡಿ ಫಿಟ್ನೆಸ್ ಪವನ್ ಅವರಿಗೇನೂ ಹೊಸತಲ್ಲ. ಅವರು ಬೆಂಗಳೂರಿನ ಕೆಂಗೇರಿಯಲ್ಲಿ ಸ್ವಂತದ ಜಿಮ್ ಸೆಂಟರ್ ಅನ್ನೂ ಹೊಂದಿದ್ದಾರೆ. ಆ ಭಾಗದಲ್ಲಿ ಅವರು ಜಿಮ್ ಪವನ್ ಎಂದೇ ಫೇಮಸ್. ಆ ಜಿಮ್ ಸಾಹಚರ್ಯವನ್ನವರು ಸಿನಿಮಾಗಳಿಗೂ ಪೂರಕವಾಗಿ ಬಳಸಿಕೊಳ್ಳಲಿದ್ದಾರೆ. ಹೀಗೆ ಹಲವಾರು ದೈಹಿಕ ಕಸರತ್ತುಗಳನ್ನು ನಡೆಸಿರೋ ಈ ವೆಜೆಟೆಬಲ್ ಸಿಕ್ಸ್ ಪ್ಯಾಕ್ ಉಡುಂಬಾನನ್ನು ಕಣ್ತುಂಬಿಕೊಳ್ಳೋ ಕ್ಷಣಗಳು ಹತ್ತಿರಾಗಿವೆ.