ನಾಕುಮುಖ ನಿರ್ದೇಶಕ ಕುಶನ್ ಗೌಡರ ಪ್ರತಿಭೆಯ ನಾನಾ ಮುಖ!

Public TV
3 Min Read
naaku mukha

‘ನಾಕುಮುಖ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಹೊಸಬರೇ ಸೇರಿ ಮಾಡುತ್ತಿರೋ ಈ ಚಿತ್ರ ಅದರ ಮೂಲಕವೇ ಈಗ ಪ್ರೇಕ್ಷಕರನ್ನೆಲ್ಲ ತಲುಪಿಕೊಂಡಿದೆ. ಈಗ ಹೊಸಬರೊಂದು ಚಿತ್ರ ಮಾಡುತ್ತಿದ್ದಾರೆಂದರೆ ಆ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲೊಂದು ಕುತೂಹಲ ಮೂಡಿಕೊಳ್ಳುತ್ತೆ. ಹೊಸಬರು ಹೊಸತನದ ಚಿತ್ರವನ್ನೇ ಸೃಷ್ಟಿಸುತ್ತಾರೆಂಬ ಗಾಢವಾದ ನಂಬಿಕೆಯಲ್ಲದೇ ಅದಕ್ಕೆ ಬೇರ್ಯಾವ ಕಾರಣವೂ ಇಲ್ಲ. ನಾಕುಮುಖ ಚಿತ್ರದ ವಿಚಾರದಲ್ಲಿಯೂ ಅಂಥಾದ್ದೇ ಕಾರಣದಿಂದ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ. ಟ್ರೇಲರ್ ತುಂಬಾ ಅದಕ್ಕೆ ಪೂರಕವಾದ ಅಂಶಗಳೇ ಕಾಣಿಸುವಂತಿರೋ ನಾಕುಮುಖ ಸಸ್ಪೆನ್ಸ್, ಹಾರರ್, ಥ್ರಿಲ್ಲರ್ ಚಿತ್ರ. ಈ ಚಿತ್ರವನ್ನು ನಿರ್ದೇಶನ ಮಾಡಿ ಮುಖ್ಯವಾದೊಂದು ಪಾತ್ರವನ್ನೂ ನಿರ್ವಹಿಸಿರುವವರು ಕುಶನ್ ಗೌಡ. ಈ ಮೂಲವೇ ದಶಕಗಳ ಕಾಲ ಅವರು ಪಟ್ಟ ಕಷ್ಟ, ಕಂಡ ಕನಸು ನಿರ್ಣಾಯಕ ಘಟ್ಟ ತಲುಪಿಕೊಂಡಿದೆ.

Naaku Mukha

ಕುಶನ್ ಗೌಡ ಈವರೆಗೂ ಹಲವಾರು ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಒಂದಷ್ಟು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಂಥಾ ಸಣ್ಣ ಸಣ್ಣ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದಕ್ಕೂ ದೊಡ್ಡಮಟ್ಟದಲ್ಲಿಯೇ ಪಡಿಪಾಟಲು ಪಟ್ಟಿರೋ ಕುಶನ್ ಆ ಹಂತದಲ್ಲಿ ಒಂದು ಸಿನಿಮಾದಲ್ಲಿ ಅವಕಾಶ ಸಿಕ್ಕರೆ ನಟನೆಯಷ್ಟೇ ನಿರ್ದೇಶನ ವಿಭಾಗಗಳತ್ತಲೂ ಶ್ರದ್ಧೆಯಿಂದ ಗಮನ ಹರಿಸುತ್ತಿದ್ದರಂತೆ. ಹಾಗೆ ದಶಕಗಳ ಕಾಲ ಸಾಗಿ ಬಂದು ಒಂದೊಳ್ಳೆ ಕಥೆಯೊಂದಿಗೆ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಬರವಣಿಗೆಯಲ್ಲಿ ಅಪಾರ ಆಸಕ್ತಿ ಮತ್ತು ಹಿಡಿತ ಹೊಂದಿರೋ ಕುಶನ್ ಹಾಡಲೂ ಸೈ, ನಟಿಸಲೂ ಸಿದ್ಧ. ಯಾವುದೇ ಸಿನಿಮಾ, ಧಾರಾವಾಹಿಗಳಿಗೆ ಸಂಬಂಧಿಸಿದ ಬರವಣಿಗೆಯನ್ನು ಬೆರಗಾಗುವಂತೆ ಮಾಡಬಲ್ಲ ಕುಶನ್ ಬಹುಮುಖ ಪ್ರತಿಭೆ. ಅವರ ಪ್ರತಿಭೆಯ ನಾನಾ ಮುಖಗಳಲ್ಲಿ ನಾಕುಮುಖ ಚಿತ್ರದ ನಿರ್ದೇಶಕನ ಅವತಾರವೂ ಒಂದಾಗಿದೆ!

naaku mukha b

ನಾಕುಮುಖ ಚಿತ್ರಕ್ಕವರು ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಮೂರು ಹಾಡುಗಳನ್ನೂ ಬರೆದಿದ್ದಾರೆ. ಪ್ರಮುಖವಾದ ಪಾತ್ರದಲ್ಲಿಯೂ ನಟಿಸಿದ್ದಾರೆ. ಅವರ ಪ್ರತಿಭೆಗೆ ಇದಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಮೂಲತಃ ಮಡಿಕೇರಿಯ ಐಕೊಳ ಗ್ರಾಮದವರಾದ ಕುಶನ್ ಶಾಲಾ ಕಾಲೇಜು ವ್ಯಾಸಂಗ ಮಾಡಿದ್ದೆಲ್ಲವೂ ಅಲ್ಲಿಯೇ. ಹೀಗೆ ಶಾಲೆ ಮತ್ತು ಕಾಲೇಜು ದಿನಗಳಲ್ಲಿಯೇ ನಾಟಕ ಬರೆಯುವುದು, ನಟಿಸೋದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಈ ಕಾರಣದಿಂದಲೇ ಇಡೀ ಊರಿನ ಗಮನ ಸೆಳೆದುಕೊಂಡಿದ್ದರು. ಅದಾದ ನಂತರದಲ್ಲಿ ಸಿನಿಮಾ ನಟನಾಗಬೇಕೆಂಬ ಹಂಬಲ ಅವರನ್ನಾವರಿಸಿಕೊಂಡಿತ್ತು. ಅದಕ್ಕೆ ಸ್ಫೂರ್ತಿಯಾಗಿದ್ದದ್ದು ಶಂಕರ್ ನಾಗ್ ಮೇಲಿನ ಅಪೂರ್ವ ಅಭಿಮಾನ.

naaku mukha d

ಬಳಿಕ ಕಾಲೇಜು ವ್ಯಾಸಂಗ ಮುಗಿಸಿ ಬೆಂಗಳೂರಿಗೆ ಬಂದಿಳಿದ ಅವರೆದುರಿದ್ದದ್ದೂ ನಟನಾಗಿ ಬೆಳೆಯಬೇಕೆಂಬ ಹಂಬಲವಷ್ಟೇ. ಎಲ್ಲೆಲ್ಲ ಸೀರಿಯಲ್, ಸಿನಿಮಾ ಶೂಟಿಂಗು ನಡೆಯುತ್ತದೆ ಎಂದು ಪತ್ತೆಹಚ್ಚಿ ಹೇಗಾದರೂ ಅಲ್ಲಿಗೆ ನುಗ್ಗಿ ತನ್ನ ಫೋಟೋ ಮತ್ತಿತರ ವಿವರ ಕೊಟ್ಟು ಬರೋದೇ ಅವರ ದಿನನಿತ್ಯದ ಕೆಲಸವಾಗಿತ್ತು. ಹಾಗಂತ ಹೊಟ್ಟೆಪಾಡು ಸುಮ್ಮನಿರಬೇಕಲ್ಲಾ? ಅದಕ್ಕಾಗಿ ಆರಂಭದಲ್ಲಿ ಅವರು ಆರಿಸಿಕೊಂಡಿದ್ದದ್ದು ಪಬ್, ಹೊಟೇಲುಗಳಲ್ಲಿ ಬೌನ್ಸರ್ ಕೆಲಸ. ಸಾಮಾನ್ಯವಾಗಿ ವಾರದ ಕಡೆಯ ಎರಡು ದಿನ ಈ ಕೆಲಸ ಇರುತ್ತಿತ್ತು. ಅಂಥಾ ಕಡೆಗಳಿಗೆ ಸಿನಿಮಾ ಸೀರಿಯಲ್ ಮಂದಿ ಬಂದರೆ ಪರಿಚಯ ಮಾಡಿಕೊಂಡು ಅವಕಾಶ ಕೇಳಬೇಕೆಂಬ ದೂರದ ಆಸೆ ಮತ್ತು ಅದರಿಂದ ಇನ್ನೂರೋ ಮುನ್ನೋರೋ ವಾರದ ಖರ್ಚಿಗೆ ಹುಟ್ಟುತ್ತದೆಂಬ ಅನಿವಾರ್ಯತೆಯಿಂದಲೇ ಕುಶನ್ ಆ ಕೆಲಸಕ್ಕಿಳಿದಿದ್ದರು.

naaku mukha a

ಆದರೆ ಎಷ್ಟೋ ಅವಮಾನಗಳನ್ನು ಸಹಿಸಿಕೊಂಡೇ ಅವರು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಲಾರಂಭಿಸಿದ್ದರು. ಒಂದಷ್ಟಾದರೂ ಗುರುತು ಹಿಡಿಯುವಂಥಾ ಪಾತ್ರಗಳು ಅವರಿಗೆ ಸಿಗಲಾರಂಭಿಸಿದ್ದು ಇತ್ತೀಚಿನ ದಿನಗಳಲ್ಲಿಯಷ್ಟೆ. ಆದರೆ ಸಿಕ್ಕ ಅವಕಾಶವನ್ನೇ ಬಳಸಿಕೊಂಡು ತಾನೋರ್ವ ಪ್ರತಿಭಾವಂತ ನಟ ಅನ್ನೋದನ್ನು ಪ್ರೂವ್ ಮಾಡಿಕೊಂಡಿದ್ದ ಕುಶನ್ ಅದರ ನಡುವೆಯೇ ಕೆಲ ರ್ಯಾಪ್ ಸಾಂಗ್‍ಗಳನ್ನೂ ರೂಪಿಸಿದ್ದರಂತೆ. ಅದರಲ್ಲಿಯೂ ಒಂದು ಮಟ್ಟದ ಯಶ ಕಂಡ ಅವರಲ್ಲಿ ನಿರ್ದೇಶಕನಾಗೋ ಆಸೆ ಚಿಗುರಿಕೊಂಡಿತ್ತು. ಕಡೆಗೂ ಮಧ್ಯರಾತ್ರಿ ಹೊಳೆದ ಚೆಂದದ ಕಥೆಯನ್ನು ಒಪ್ಪ ಓರಣ ಮಾಡಿ ನಾಕುಮುಖದ ಆಕಾರ ಕೊಟ್ಟಿದ್ದಾರೆ.

ಈವರೆಗೂ ಹಲವಾರು ಕಷ್ಟದ ಹಾದಿಯನ್ನು ಕ್ರಮಿಸಿ ಗುರಿಯತ್ತ ಧಾವಿಸಿ ಬಂದಿರುವ ಕುಶನ್ ಗೌಡ ಪಾಲಿಗೆ ನಾಕುಮುಖ ಎಂಬುದು ಬದುಕಿನ ನಿರ್ಣಾಯಕ ಘಟ್ಟದಂಥಾ ಚಿತ್ರ. ಇದರ ಟ್ರೇಲರ್‍ಗೆ ಸಿಗುತ್ತಿರೋ ಅಭೂತಪೂರ್ವ ಮೆಚ್ಚುಗೆಗಳೇ ಗೆಲುವಿನ ಸೂಚನೆಯಂತೆಯೂ ಕಾಣಿಸುತ್ತಿದೆ. ಈ ಮೂಲಕವೇ ತಾನು ನಿರ್ದೇಶಕನಾಗಿಯೂ ನೆಲೆ ಕಂಡುಕೊಳ್ಳೋ ಭರವಸೆ ಕುಶನ್ ಗೌಡರಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *