ಬೆಂಗಳೂರು: ಇದೀಗ ಖನನ ಎಂಬ ವಿಶಿಷ್ಟವಾದ ಟೈಟಲ್ ಹೊಂದಿರೋ ಚಿತ್ರವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ಹೆಸರು ಕೇಳಿದಾಕ್ಷಣವೇ ಇದು ಯಾವ ಬಗೆಯ ಚಿತ್ರ, ಆರ್ಟ್ ಮೂವಿಯಾ ಅಂತೆಲ್ಲ ನಾನಾ ಪ್ರಶ್ನೆಗಳಿಗೆ ಕಾರಣವಾಗೋ ಖನನ ಅಪ್ಪಟ ಕಮರ್ಶಿಯಲ್ ಸೂತ್ರಗಳೊಂದಿಗೆ ಬಿಡುಗಡೆಗೆ ಸಜ್ಜಾಗಿರೋ ಚಿತ್ರ. ಇದೇ ಮೇ ತಿಂಗಳಲ್ಲಿ ರಿಲೀಸ್ ಆಗಲಿರುವ ಖನನ ತನ್ನೊಳಗೆ ಅನೇಕ ನಿಗೂಢಗಳನ್ನು ಬಚ್ಚಿಟ್ಟುಕೊಂಡಿದೆ.
ರಾಧಾ ನಿರ್ದೇಶನ ಮಾಡಿರೋ ಖನನ ಮೂಲಕ ಹೀರೋ ಆಗಿ ಎಂಟ್ರಿ ಕೊಡಲು ಆರ್ಯವರ್ಧನ್ ಸಜ್ಜಾಗಿದ್ದಾರೆ. ಈಗಾಗಲೇ ಮಾರ್ಚ್ 22 ಚಿತ್ರದ ಸಲ್ಮಾನ್ ಎಂಬ ಪಾತ್ರದ ಮೂಲಕ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿರೋ ಆರ್ಯವರ್ಧನ್ ಪಾಲಿಗೆ ಹೀರೋ ಆಗಿ ಇದು ಮೊದಲ ಚಿತ್ರ. ತಾನು ಹೀರೋ ಆಗಿ ಲಾಂಚ್ ಆಗೋ ಚಿತ್ರ ವಿಶೇಷ ಕಥೆ ಹೊಂದಿರಬೇಕು ಮತ್ತು ಅದು ಸಂದೇಶವನ್ನೂ ಕೂಡಾ ರವಾನಿಸುವಂತಿರಬೇಕು ಅನ್ನೋದು ಆರ್ಯವರ್ಧನ್ ಅವರ ಆಳದ ಕನಸು. ಅದಕ್ಕೆ ತಕ್ಕುದಾದ ಕಥೆಯನ್ನು ಖನನ ಒಳಗೊಂಡಿದೆಯಂತೆ.
ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ನೋಡಿದವರನ್ನೆಲ್ಲ ಅಚ್ಚರಿಗೀಡು ಮಾಡಲಿರೋ ಇದರಲ್ಲಿ ಆರ್ಯವರ್ಧನ್ ಹಲವಾರು ಶೇಡುಗಳಿರೋ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರವೇ ಎಲ್ಲರಿಗೂ ಬದುಕಿನ ಕೆಲ ಗುಟ್ಟುಗಳನ್ನು ಹೇಳುವಂತಿದೆ. ಪ್ರತಿಕ್ಷಣವೂ ಕುತೂಹಲ ಆಚೀಚೆ ಆಗದಂತೆ ಬಿಚ್ಚಿಕೊಳ್ಳುತ್ತಾ ಸಾಗಲಿರೋ ಈ ಚಿತ್ರದಲ್ಲಿ ಹೀರೋ ಪ್ರೇಕ್ಷಕರೊಂದಿಗೆ ನೇರಾ ನೇರ ಕನೆಕ್ಟ್ ಆಗುತ್ತಾನೆ. ಅದೇ ಹೊತ್ತಲ್ಲಿ ಪ್ರೇಕ್ಷಕರಿಗೇನೋ ಹೇಳಲಿದ್ದಾನೆ. ಆ ರೋಚಕ ವಿಚಾರವೇನು ಅನ್ನೋದು ಇದೇ ಮೇ 10ರಂದು ಜಾಹೀರಾಗಲಿದೆ.