ಬೆಂಗಳೂರು: ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರೋ ಚಿತ್ರ ಚರಂತಿ. ಮಹೇಶ್ ರಾವಲ್ ನಟಿಸಿ ನಿರ್ದೇಶನ ಮಾಡಿರೋ ಸಿನಿಮಾವನ್ನು ಡಾ. ಪರಶುರಾಮ ರಾವಲ್ ನಿರ್ಮಾಣ ಮಾಡಿದ್ದಾರೆ. ಉತ್ತರ ಕರ್ನಾಟಕದ ಖದರ್ ತುಂಬಿಕೊಂಡಿರೋ ಟ್ರೈಲರ್ ಮತ್ತು ವಿಶಿಷ್ಟವಾದ ಹಾಡುಗಳ ಮೂಲಕ ಸಖತ್ ಸೌಂಡ್ ಮಾಡುತ್ತಿರೋ ಚರಂತಿ ಇದೀಗ ಪ್ರೇಕ್ಷಕರ ಆಕರ್ಷಣೆಗೆ ಕಾರಣವಾಗಿದೆ.
ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮಹೇಶ್ ರಾವಲ್ ಚರಂತಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸೋ ಜೊತೆಗೆ ಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಬನಹಟ್ಟಿಯಲ್ಲಿ ಹುಟ್ಟಿ ಬೆಳೆದು ಬಣ್ಣದ ಕನಸು ಹೊತ್ತು ಬೆಂಗಳೂರಿಗೆ ಬಂದ ಮಹೇಶ್ ಗೆ ನಟ ಮತ್ತು ನಿರ್ದೇಶಕನಾಗೋ ಕನಸಿತ್ತು. ಒಂದಷ್ಟು ಚಿತ್ರಗಳಲ್ಲಿ ಅವರು ಅಭಿನಯವನ್ನೂ ಮಾಡಿದ್ದರು. ಕಡೆಗೂ ನಟ ಮತ್ತು ನಿರ್ದೇಶಕನಾಗಿ ಹೊರ ಹೊಮ್ಮುವ, ನೆಲೆ ನಿಲ್ಲುವ ಕನಸಿನೊಂದಿಗೇ ಅವರು ಉತ್ತರ ಕರ್ನಾಟಕದ ಮಣ್ಣಿನ ಘಮಲಿನ ಪ್ರೇಮ ಕಥಾನಕವೊಂದನ್ನು ರೆಡಿ ಮಾಡಿಕೊಂಡು ಅದೆಷ್ಟು ಪ್ರಯತ್ನಿಸಿದರೂ ನಿರ್ಮಾಪಕರು ಸಿಕ್ಕಿರಲಿಲ್ಲ.
ತಮ್ಮ ಸಹೋದರನ ಸಿನಿಮಾ ಪ್ರೀತಿ, ಅದಕ್ಕಾಗಿ ಅವರು ವಹಿಸುತ್ತಿರುವ ಶ್ರಮವನ್ನೆಲ್ಲ ಹತ್ತಿರದಿಂದ ಕಾಣುತ್ತಾ ಬಂದಿದ್ದವರು ಪರಶುರಾಮ ರಾವಲ್. ಮಹೇಶ್ ಸಹೋದರನಾಗಿರುವ ಪರಶುರಾಮ್ ಬನಹಟ್ಟಿಯಲ್ಲಿ ಜನಮನ ಗೆದ್ದಿರೋ ಖ್ಯಾತ ಪ್ರಸೂತಿ ತಜ್ಞರು. ತಮ್ಮ ವೈದ್ಯ ವೃತ್ತಿಯೊಂದಿಗೇ ಸಿನಿಮಾ ಪ್ರೀತಿಯನ್ನೂ ಹೊಂದಿದ್ದ ಅವರು ತಮ್ಮನ ಕನಸಿಗೆ ಹೆಗಲಾಗಿ ಚರಂತಿ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದರು.
ಈ ಹಾದಿಯಲ್ಲೆದುರಾದದ್ದು ಒಂದೆರಡು ಸಮಸ್ಯೆಗಳಲ್ಲ. ಸಿನಿಮಾ ಪ್ರೀತಿಯಿಂದಲೇ ಚಿತ್ರ ನಿರ್ಮಾಣಕ್ಕೆ ಮುಂದಾಗೋ ಮಂದಿಯನ್ನು ಯಾವ್ಯಾವ ಸಮಸ್ಯೆಗಳು ಕಂಗಾಲಾಗಿಸಬಹುದೋ ಅದೆಲ್ಲವನ್ನೂ ಈ ಸಹೋದರರು ಎದುರುಗೊಂಡಿದ್ದಾರೆ. ಆದರೆ ಅದ್ಯಾವುದಕ್ಕೂ ಎದೆಗುಂದದೆ ಒಂದೊಳ್ಳೆ ಚಿತ್ರ ಮಾಡಿದ ಆತ್ಮತೃಪ್ತಿಯನ್ನೂ ಹೊಂದಿದ್ದಾರೆ. ಇಂಥಾ ಶ್ರಮ ಮತ್ತು ಕನಸಿನಿಂದಲೇ ಅಣಿಗೊಂಡ ಚರಂತಿ ಚಿತ್ರ ಬಿಡುಗಡೆಗೆ ತಯಾರಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv