ಸಿಎಂ ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ರು ಹ್ಯಾಟ್ರಿಕ್ ಹೀರೋ ದಂಪತಿ!

Public TV
2 Min Read
kumaraswany shivaraj kumar gita 1

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಇಂದು ಭೇಟಿ ಮಾಡಿದ್ದಾರೆ.

ಎಚ್ ಡಿಕೆ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಸಿಎಂ ಆದ ನಂತರ ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದೇವೆ. ಸಿನಿಮಾ ಹಾಗೂ ಪ್ರೊಡಕ್ಷನ್ ಇಂಡಸ್ಟ್ರಿಯಿಂದ ಬಂದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ನಾವು ಹಾಗೂ ದೇವೆಗೌಡರ ಕುಟುಂಬದವರು ಹೆಚ್ಚು ಆತ್ಮೀಯರು ಎಂದು ಹೇಳಿದರು.

ಮುಂದಿನ ಲೋಕಸಭೆಗೆ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಗೆ ಇನ್ನೂ ಸಮಯವಿದೆ. ಪತ್ನಿ ಗೀತಾ ಈ ಬಾರಿ ಜೆಡಿಎಸ್ ಪರ ಪ್ರಚಾರ ಮಾಡಿದ್ದಾರೆ ಅಂದ್ರು. ಇನ್ನು ವಿಷ್ಣುವರ್ಧನ್ ಸಮಾಧಿ ಮೈಸೂರಿಗೆ ಸ್ಥಳಾಂತರ ಮಾಡುವ ವಿಚಾರದ ಬಗ್ಗೆ ಮಾತನಾಡಿಲ್ಲ, ಹಿರಿಯ ನಟ ಅಂಬರೀಶ್ ಅವರು ಬಂದು ಮಾತನಾಡುತ್ತಾರೆ. ನಾನು ಈಗಲೇ ಏನೂ ಹೇಳಕ್ಕೆ ಆಗೊಲ್ಲ ಅಂತ ತಿಳಿಸಿದ್ರು.

shivaraj kumar

ಶಿವರಾಜ್ ಕುಮಾರ್ ಭೇಟಿ ಬಳಿಕ ಮಾತನಾಡಿದ ಸಿಎಂ, ಇದು ಸೌಜನ್ಯದ ಭೇಟಿ ಅಷ್ಟೇ, ಅನುಮಾನ ಬೇಡ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರಿಂದ ಬಂದು ಶುಭಕೋರಿದ್ದಾರೆ ಎಂದು ಸ್ಪಷ್ಟಪಡಿಸಿದ್ರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಸಾಮರಸ್ಯ, ಪರಸ್ಪರ ವಿಶ್ವಾಸ ಅಗತ್ಯವಾಗಿದ್ದು, ನಾಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಗೆ ನಿರ್ಧಾರ ಕೈಗೊಂಡಿರುವೆ. ಇದು ಸೌಜನ್ಯದ ಭೇಟಿ ಅಷ್ಟೇ ಎಂದು ಅವರು ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದ ನನಗೆ ಯಾವುದೇ ಬುಲಾವ್ ಬಂದಿಲ್ಲ. ಯಾರೂ ಅಪಾರ್ಥ ಮಾಡಕ್ಕೋಬಾರದು. ರಾಹುಲ್ ಗಾಂಧಿ ಕರೆದ್ರೂ ಕುಮಾರಸ್ವಾಮಿ ಹೋಗಲಿಲ್ಲ ಎಂದು ರಾಜಕೀಯ ಬಣ್ಣ ಕಟ್ಟಿಬಿಡ್ತಾರೆ. ಶನಿವಾರ ರಾತ್ರಿ ದೂರವಾಣಿ ಕರೆ ಮಾಡಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿದ್ದೇನೆ. ರಾಹುಲ್ ವಿದೇಶಕ್ಕೆ ಹೊರಟಿದ್ದಾರೆ ಎಂದು ಗೊತ್ತಾಗಿ ಶುಭಕೋರಿದ್ದೇನೆ ಎಂದು ಅವರು ಹೇಳಿದ್ದಾರೆ.

ಬಹುಮತ ಇಲ್ಲದಿದ್ದರೂ ಸಾಲಮನ್ನಾ ನಿರ್ಧಾರದಿಂದ ಹಿಂದೆ ಸರಿಯಲ್ಲ. ಶನಿವಾರ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಗಮನಕ್ಕೆ ಬಂದಿದೆ. ದಯವಿಟ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

Share This Article