ಚಿಕ್ಕಮಗಳೂರು: ತರಿಕೆರೆಯ (Tarikere) ಶ್ರೀಗಂಧ (Sandalwood) ಬೆಳೆಗಾರನೋರ್ವ (Farmer) ಸರ್ಕಾರಿ ವ್ಯವಸ್ಥೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ತಾನು ಬದುಕಿದ್ದಾಗಲೇ ತನ್ನ ವೈಕುಂಠ ಸಮಾರಾಧನೆಗೆ ಅಧಿಕಾರಿಗಳಿಗೆ ಆಹ್ವಾನ ನೀಡಿದ್ದಾರೆ.
ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದ ಶ್ರೀಗಂಧದ ಬೆಳೆಗಾರ ವಿಷುಕುಮಾರ್ ಅವರು ಬದುಕಿದ್ದಾಗಲೇ ತಮ್ಮದೇ ವೈಕುಂಠ ಸಮಾರಾಧನೆಗೆ ಅಧಿಕಾರಿಗಳನ್ನು ಆಹ್ವಾನಿಸುವ ಮೂಲಕ ವ್ಯವಸ್ಥೆಯ ವಿರುದ್ಧ ಅಣಕವಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ಜಮೀನು ಕಳೆದುಕೊಂಡಿರುವ ಇವರು, ಫೆ.9ರ ಬೆಳಗ್ಗೆ 10 ಗಂಟೆಗೆ ಸಂತಾಪ ಸಭೆ ಹಾಗೂ ಮಧ್ಯಾಹ್ನ 1 ಗಂಟೆಗೆ ತಿಥಿ ಊಟವನ್ನು ಏರ್ಪಡಿಸಿ ಅದಕ್ಕೆ ಅಧಿಕಾರಿಗಳಿಗೆ ಆಹ್ವಾನ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಇವರ ಫಲವತ್ತಾದ ಕೃಷಿ ಭೂಮಿ ಹಾಗೂ ಬೆಲೆ ಬಾಳುವ ಶ್ರೀಗಂಧದ ಮರಗಳು ಸ್ವಾಧೀನಕ್ಕೆ ಒಳಗಾಗಿವೆ. ಅರಣ್ಯಾಧಿಕಾರಿಗಳು ಒಂದು ಮಾವಿನ ಮರಕ್ಕೆ 63 ಸಾವಿರ ರೂ. ತೆಂಗಿಗೆ 37 ಸಾವಿರ ರೂ. ನಿಂಬೆಗೆ 3,480 ರೂ. ಮತ್ತು ಬೇವಿಗೆ 2,200 ರೂ. ಪರಿಹಾರ ನೀಡಿದ್ದಾರೆ. ಅತ್ಯಂತ ದುಬಾರಿಯಾದ ಶ್ರೀಗಂಧದ ಮರಕ್ಕೆ ಕೇವಲ 420 ರೂ. ನಿಗದಿಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತ ಈ ರೀತಿ ವಿನೂತನವಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ನ್ಯಾಯಾಲಯವು ಒಂದು ಮರಕ್ಕೆ ಕನಿಷ್ಠ 25,000 ರೂ. ನೀಡಿ ವೈಜ್ಞಾನಿಕ ದರ ನೀಡುವಂತೆ ಸೂಚಿಸಿದ್ದರೂ ಕೂಡ ಅಧಿಕಾರಿಗಳು ಮಾತ್ರ ಈ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ಬೆಳೆಗಾರ ವಿಷುಕುಮಾರ್ ಆರೋಪಿಸಿದ್ದಾರೆ. 4-5 ವರ್ಷಗಳಿಂದ ನ್ಯಾಯಕ್ಕಾಗಿ ಕಚೇರಿಗಳಿಗೆ ಅಲೆದು ಸುಸ್ತಾಗಿರುವ ವಿಷುಕುಮಾರ್, ವಾರದ ಹಿಂದೆಯಷ್ಟೇ ಸರ್ಕಾರಕ್ಕೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ತಮ್ಮನ್ನು ಸಿಸಿಎಫ್ ಅಧಿಕಾರಿಗಳ ಬಳಿ ಭೇಟಿ ಮಾಡಿಸದಿದ್ದರೆ ಶಿವಮೊಗ್ಗದ ಸಿಸಿಎಫ್ ಕಚೇರಿ ಎದುರೇ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದ್ದರು. ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತಿರುವ ಇವರು, ಈಗ ತಮ್ಮ ಹೋರಾಟವನ್ನು ವಿಭಿನ್ನ ಹಂತಕ್ಕೆ ಕೊಂಡೊಯ್ದಿದ್ದಾರೆ.

