Connect with us

Bengaluru City

ನಿರ್ದೇಶಕ ಎಸ್ ನಾರಾಯಣ್‍ಗೆ 43 ಲಕ್ಷ ರೂ. ದೋಖಾ

Published

on

ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅವರಿಗೆ ಸಾಲ ಕೊಡಿಸುವುದಾಗಿ ನಂಬಿಸಿ 43 ಲಕ್ಷ ರೂ. ಗಳನ್ನು ವಂಚನೆ ಮಾಡಲಾಗಿದೆ.

ಸಿನಿಮಾ ಒಂದರ ಕುರಿತು ಬ್ಯಾಂಕ್‍ನಲ್ಲಿ ಸಾಲ ಪಡೆಯಲು ತೆರಳಿದ್ದ ವೇಳೆ ಪರಿಚಯವಾಗಿದ್ದ ವ್ಯಕ್ತಿಗಳು ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ಹೇಳಿ ಎಸ್ ನಾರಾಯಣ್ ಅವರಿಗೆ 43 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ನಾರಾಯಣ್ ಅವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್, ವಿಜಯಕುಮಾರ್ ಮತ್ತು ಸಾಮೀಜಿ ಸಂತಾನ ಕೃಷ್ಣ ಎಂಬವರನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಸಿನಿಮಾಗಾಗಿ ಸುಮಾರು 50 ಕೋಟಿ ರೂ. ಸಾಲ ಪಡೆಯಲು ನಿರ್ಧರಿಸಿದ್ದ ನಿರ್ದೇಶಕರು ಬ್ಯಾಂಕ್ ಗಳಲ್ಲಿ ಈ ಕುರಿತು ವಿಚಾರಣೆ ನಡೆಸಿದ್ದರು. ಈ ವೇಳೆ ತಮಿಳುನಾಡಿನ ಮಂದಾರ ಮೂರ್ತಿ ಎಂಬಾತನ ಪರಿಚಯವಾಗಿದ್ದು, ಕಡಿಮೆ ಬಡ್ಡಿಗೆ ಸುಮಾರು 70 ಲಕ್ಷ ರೂ. ಸಾಲ ಕೊಡಿಸುವ ಆಶ್ವಾಸನೆ ನೀಡಿದ್ದಾನೆ. ಈ ವೇಳೆ ಕಡಿಮೆ ಬಡ್ಡಿ ದರದ ಆಸೆಗೆ ಬಿದ್ದ ಎಸ್ ನಾರಾಯಣ್ ಅವರು ಆರೋಪಿಯ ಮಾತು ನಂಬಿದ್ದಾರೆ. ಬಳಿಕ ಸಾಲ ಪಡೆಯಲು ಪ್ರೊಸೆಸಿಂಗ್ ಶುಲ್ಕವಾಗಿ ಆರೋಪಿ ಮಂದಾರ ಮೂರ್ತಿ 43 ಲಕ್ಷ ರೂ. ಹಣ ಪಡೆದಿದ್ದಾನೆ.

ಮೊದಲು ಆರೋಪಿ ಮಾತು ನಂಬಿದ್ದ ಎಸ್ ನಾರಾಯಣ್ ಅವರು, ತಮಿಳುನಾಡಿನ ಕೊಯಮುತ್ತೂರು ವೀರಭದ್ರ ಸ್ವಾಮಿ ಮಠದಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ಮಠದ ಸ್ವಾಮೀಜಿ ಸಂತಾನ ಕೃಷ್ಣ ಎಂಬವರು 43 ಲಕ್ಷ ರೂ. ನೀಡಿದರೆ 70 ಕೋಟಿ ರೂ. ಸಾಲ ನೀಡುವುದಾಗಿ ಹೇಳಿದ್ದರು. ಈ ವೇಳೆ ಎಸ್ ನಾರಾಯಣ್ 43 ಲಕ್ಷ ರೂ. ಹಣ ನೀಡಿ 70 ಕೋಟಿ ರೂ. ಸಾಲಕ್ಕಾಗಿ ಆಸ್ತಿ ಪತ್ರ ಅಡಮಾನ ಇಡಲು ಮುಂದಾಗಿದ್ದರು.

ಅಂದಹಾಗೇ ಎಸ್ ನಾರಾಯಣ್ ಅವರಿಗೆ ವಂಚನೆ ಮಾಡಿರುವ ಮಂದಾರ ಮೂರ್ತಿ ತಮಿಳುನಾಡಿನ ಪ್ರಖ್ಯಾತ ಜನಾಂಗ ಒಂದರ ನಾಯಕರಾಗಿದ್ದು, ತಮಿಳುನಾಡಿನ ಕೊಯಮುತ್ತೂರು ವೀರಭದ್ರ ಸ್ವಾಮಿ ಮಠದ ಸ್ವಾಮೀಜಿ ಸಂತಾನ ಕೃಷ್ಣ ಜೊತೆ ಸೇರಿಕೊಂಡು ವಂಚನೆ ಮಾಡಿದ್ದಾರೆ. ಮುಂಗಡವಾಗಿ 40 ಲಕ್ಷ ರೂ. ಪಡೆದ ಆರೋಪಿಗಳು ಸಾಲ ನೀಡದೇ ಮುಂಗಡ ಹಣವನ್ನೂ ನೀಡದೇ ಸತಾಯಿಸಿದ್ದಾರೆ. ಬಳಿಕ ಆರೋಪಿಗಳ ವಂಚನೆ ಜಾಲ ತಿಳಿದ ಎಸ್ ನಾರಾಯಣ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ಕುರಿತು ಇಂದು ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಆಗಮಿಸಿದ್ದ ನಿರ್ದೇಶಕ ಎಸ್ ನಾರಾಯಣ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕೆಲವೊಂದು ಸಿನಿಮಾ ಪ್ರಾಜೆಕ್ಟ್‍ಗಾಗಿ 50 ಕೋಟಿ ರೂ. ಸಾಲ ಪಡೆಯಲು ಯತ್ನಿಸಿದ್ದೆ. 2016 ರಲ್ಲಿ ಸಾಲಕ್ಕಾಗಿ ತೆರಳಿದ್ದ ವೇಳೆ ಆರೋಪಿ ಪರಿಚಯವಾಗಿತ್ತು. ಪರಿಚಯದ ಬಳಿಕ ತಮಿಳುನಾಡಿಗೆ ಕರೆದುಕೊಂಡು ಹೋಗಿ ಮಂದಾರ ಮೂರ್ತಿ ಎಂಬಾತನನ್ನು ಪರಿಚಯಿಸಿದ್ದರು. ಈ ವೇಳೆ ಬೇರೆಡೆ ಸಾಲ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ ಮುಂಗಡ ಹಣ 43 ಲಕ್ಷ ರೂ. ಪಡೆದಿದ್ದ. ಅಲ್ಲದೇ ಸಾಲ ನೀಡುವ ನೆಪದಲ್ಲಿ 50 ಕೋಟಿ ರೂ. ಮೌಲ್ಯದ ಡಿಡಿ ಯನ್ನು ನನ್ನ ಹೆಸರಿಗೆ ನೀಡಿದ್ದ. ಆದರೆ ದಿನ ಕಳೆದ ನಂತರ ಬ್ಯಾಂಕ್ ನಲ್ಲಿ ಹಣ ಸಿಗಲಿಲ್ಲ. ಈ ವೇಳೆ ಆರೋಪಿಗಳು ನೀಡಿದ್ದ ಡಿಡಿ ನಕಲಿ ಎಂದು ತಿಳಿಯಿತು. ಬಳಿಕ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಯಿತು. ಆದರೆ ಆರೋಪಿಗಳು ಸಂಪರ್ಕಕ್ಕೆ ಸಿಗಲಿಲ್ಲ. ಇದರಿಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಗಿ ಮಾಹಿತಿ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Click to comment

Leave a Reply

Your email address will not be published. Required fields are marked *