ಸ್ಯಾಂಡಲ್‍ವುಡ್ ಬೆಳ್ಳಿತೆರೆ ಹಾಗೂ ಕಿರುತೆರೆಯ ಹಲವು ಕಲಾವಿದರು 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಬೆಳ್ಳಿತೆರೆ ಕಲಾವಿದರಿಗಿಂತ ಕಿರುತೆರೆಯ ಕಲಾವಿದರೇ ಹೆಚ್ಚಾಗಿ ಮದುವೆಯಾಗಿದ್ದಾರೆ. ಕೆಲವು ಕಲಾವಿದರು ಬಹುವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳಯ, ಗೆಳತಿಯರನ್ನೇ ಮದುವೆಯಾದರೆ, ಮತ್ತೆ ಕೆಲವು ಕಲಾವಿದರು ಆರೆಂಜ್ಡ್ ಮ್ಯಾರೇಜ್ ಆಗಿದ್ದಾರೆ. 2019ರಲ್ಲಿ ಯಾವೆಲ್ಲಾ ಕಲಾವಿದರು ಮದುವೆಯಾಗಿದ್ದಾರೆ ಎಂಬುದುನ್ನು ಒಮ್ಮೆ ನೋಡಿ
ವಿಜಯ್ ಸೂರ್ಯ: ಗುಳಿಕೆನ್ನೆಯ ಚೆಲುವ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಅವರ ಜೊತೆ ಪ್ರೇಮಿಗಳ ದಿನದಂದೇ ವಿವಾಹವಾಗಿದ್ದರು. ಮನೆಯವರೆಲ್ಲ ಮೆಚ್ಚಿದ ಚೈತ್ರಾ ಅವರ ಜೊತೆ ವಿಜಯ್ ಸಪ್ತಪದಿ ತುಳಿದಿದ್ದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕವೇ ನಟ ವಿಜಯ್ ಸೂರ್ಯ ಜನಪ್ರಿಯತೆ ಪಡೆದವರು. ಚೈತ್ರಾ ಸಾಫ್ಟ್‍ವೇರ್ ಉದ್ಯೋಗಿಯಾಗಿದ್ದಾರೆ.
ನೇಹಾ ಪಾಟೀಲ್: ಹುಬ್ಬಳ್ಳಿ ಮೂಲದ ನಟಿ ನೇಹಾ ಪಾಟೀಲ್ ಅವರು ಸಿನಿಮಾ ಬಗ್ಗೆ ಆಸಕ್ತಿ ಇರುವ ಬೆಂಗಳೂರಿನ ಎಂಜಿನಿಯರಿಂಗ್ ಹುಡುಗ ಪ್ರಣವ್ ಅವರ ಜೊತೆ ಮದುವೆಯಾಗಿದ್ದರು. ಫೆಬ್ರವರಿ 22ರಂದು ವಿಜಯನಗರದ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಯಜ್ಞಾ ಶೆಟ್ಟಿ: ಬಹುಭಾಷಾ ನಟಿ ಯಜ್ಞಶೆಟ್ಟಿ ಅವರು ಅಕ್ಟೋಬರ್ 10ರಂದು ತುಳು ಸಿನಿರಂಗದ ನಾಯಕ ನಟ ಸಂದೀಪ್ ಶೆಟ್ಟಿ ಅವರೊಂದಿಗೆ ಮಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕುಟುಂಬ ಸದಸ್ಯರು ಸೇರಿದಂತೆ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮಂಗಳೂರಿನಲ್ಲಿ ಮದುವೆ ನಡೆದಿತ್ತು. ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವದಂಪತಿಗೆ ಶುಭಕೋರಿದ್ದರು.
ಗುರು ರಾಜ್ ಕುಮಾರ್: ರಾಜ್ ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಎರಡನೇ ಪುತ್ರ ಯುವರಾಜ್ ಕುಮಾರ್ ಅವರು ಮೈಸೂರಿನ ಶ್ರೀದೇವಿಯನ್ನು ಮೇ 26ರಂದು ಮದುವೆಯಾಗಿದ್ದರು. ಇವರಿಬ್ಬರ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿತ್ತು. ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಇಬ್ಬರು ಸ್ನೇಹಿತರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಎರಡು ಕುಟುಂಬದವರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು.
ಇಶಿತಾ ವರ್ಷ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿ ಇಶಿತಾವರ್ಷ ನವೆಂಬರ್ 10ರಂದು ತಮ್ಮ ಬಹುಕಾಲದ ಗೆಳೆಯ ಮುರುಗಾನಂದ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಾಯಾ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವ ಜೋಡಿಗೆ ಶುಭಾಶಯವನ್ನು ತಿಳಿಸಿದ್ದರು.
ರಿಷಿ: `ಅಪರೇಷನ್ ಅಲಮೇಲಮ್ಮ’ ಮತ್ತು `ಕವಲುದಾರಿ’ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವ ನಟ ರಿಷಿ ಅವರು ಕೂಡ ನವೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಿಷಿ ಅವರು ಬರಹಗಾರ್ತಿ ಸ್ವಾತಿ ಅವರೊಂದಿಗೆ ಚೆನ್ನೈನಲ್ಲಿ ಮದುವೆಯಾಗಿದ್ದರು. ವಿವಾಹವಾದ ನಂತರ ನವೆಂವರ್ 20ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.
ಹಿತಾ ಚಂದ್ರಶೇಖರ್: ಡಿಸೆಂಬರ್ 1ರಂದು ಹಿತಾ ಚಂದ್ರಶೇಖರ್ ತಮ್ಮ ಗೆಳೆಯ ಕಿರಣ್ ಶ್ರೀನಿವಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಿರಣ್ ಶ್ರೀನಿವಾಸ್ ಗುರು-ಹಿರಿಯರು ನಿಶ್ಚಯ ಮಾಡಿದ್ದ ಶುಭ ಮುಹೂರ್ತದಲ್ಲಿ ಹಿತಾ ಚಂದ್ರಶೇಖರ್‍ಗೆ ಮಾಂಗಲ್ಯಧಾರಣೆ ಮಾಡಿದ್ದರು. ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ನಡೆದಿತ್ತು. ಕಿರಣ್ ಮತ್ತು ಹಿತಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಮೇ ತಿಂಗಳಲ್ಲಿ ಕಿರಣ್ ಹಾಗೂ ಹಿತಾ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಚಂದನ್ ಶೆಟ್ಟಿ- ನಿವೇದಿತಾ ಗೌಡ: ಅಕ್ಟೋಬರ್ 21ರಂದು ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು.
ಅರ್ಚನಾ: ಸ್ಯಾಂಡಲ್‍ವುಡ್‍ನ `ಆ ದಿನಗಳು’ ಸಿನಿಮಾ ಖ್ಯಾತಿಯ ಅರ್ಚನಾ ವೇದಾ ತಮ್ಮ ಪ್ರಿಯಕರನೊಂದಿಗೆ ನವೆಂಬರ್ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅರ್ಚನಾ ವೇದಾ ತಮ್ಮ ಗೆಳೆಯ ಜಗದೀಶ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹೈದರಾಬಾದಿನಲ್ಲಿ ಗುರು-ಹಿರಿಯರ ನಿಶ್ಚಯಿಸಿದ್ದ ಮೂಹೂರ್ತದಲ್ಲಿ ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ನಡೆದಿತ್ತು.
ಧ್ರುವ ಸರ್ಜಾ: ನವೆಂಬರ್ 24ರಂದು ಧ್ರುವ ಶುಭ ಮುಹೂರ್ತದಲ್ಲಿ ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಅವರನ್ನು ವರಿಸಿದ್ದರು. ಜೆ.ಪಿ.ನಗರದ ಸಂಸ್ಕೃತ ಬೃಂದಾವನ ಕನ್ವೆನ್ಷನ್ ಹಾಲ್‍ನಲ್ಲಿ ಇವರ ವಿವಾಹ ಮಹೋತ್ಸವ ನಡೆದಿದ್ದು, ಅಂದು ಸಂಜೆಯೇ ಸಿನಿಮಾ ಕಲಾವಿದರಿಗಾಗಿ ಅದ್ಧೂರಿಯಾಗಿ ರಿಸೆಪ್ಶನ್ ಏರ್ಪಡಿಸಲಾಗಿತ್ತು. ಮರುದಿನ ಎಂದರೆ 25 ರಂದು ಅಭಿಮಾನಿಗಳಿಗಾಗಿ ವಿಶೇಷ ಆರತಕ್ಷತೆಯನ್ನು ಆಯೋಜೆ ಮಾಡಲಾಗಿತ್ತು.
ಮನೀಶ್ ಪಾಂಡೆ- ಆಶ್ರಿತಾ ಶೆಟ್ಟಿ: ಭಾರತದ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಡಿಸೆಂಬರ್ 2ರಂದು ತುಳು ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮನೀಶ್ ಪಾಂಡೆ ಅವರು ತುಳು ಹಾಗೂ ದಕ್ಷಿಣ ಭಾರತದ ನಟಿಯಾಗಿರುವ ಆಶ್ರಿತಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದರು. ಇವರ ಮದುವೆಯಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದರು.
ನಿತ್ಯಾ ರಾಮ್: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಿತ್ಯ ರಾಮ್ ಅವರು ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಅವರ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದರು. ಮದುವೆಗೆ ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವಜೋಡಿಗೆ ಶುಭಾಶಯ ತಿಳಿಸಿದ್ದರು.
ದೀಪಿಕಾ (ಧನ್ಯಾ): ದೀಪಿಕಾ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅಕ್ಕು ಆಕರ್ಶ್ ಜೊತೆ ನವೆಂಬರ್ 15ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದೀಪಿಕಾ ಮತ್ತು ಆಕರ್ಶ್ ವಿವಾಹ ಸಾಂಪ್ರದಾಯಿಕವಾಗಿ ನಡೆದಿತ್ತು. ಇವರಿಬ್ಬರು ಪರಸ್ಪರ ಬಹು ದಿನಗಳಿಂದ ಪ್ರೀತಿಸುತ್ತಿದ್ದರು. ನಂತರ ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದಾರೆ. ಎರಡು ಕುಟುಂಬದವರು ಇವರ ಪ್ರೀತಿಯನ್ನು ಖುಷಿಯಿಂದ ಒಪ್ಪಿಕೊಂಡು ಕೆಲ ತಿಂಗಳ ಹಿಂದೆ ಇಬ್ಬರ ನಿಶ್ಚಿತಾರ್ಥ ಮಾಡಿದ್ದರು.
ಭವಾನಿ ಸಿಂಗ್: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಯಲ್ಲಿ ಈ ಹಿಂದೆ ನಟಿಸುತ್ತಿದ್ದ ನಟ ಭವಾನಿ ಸಿಂಗ್ ತಮ್ಮ ಬಹುದಿನದ ಗೆಳತಿ ಪಂಕಜಾ ಶಿವಣ್ಣ ಅವರ ಜೊತೆ ನವೆಂಬರ್ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಭವಾನಿ ಹಾಗೂ ಪಂಕಜಾ ಎರಡು ವರ್ಷದಿಂದ ಸ್ನೇಹಿತರಾಗಿದ್ದರು. ಬಳಿಕ ಭವಾನಿ ಅವರು ಪಂಕಜಾ ಅವರನ್ನು ಪ್ರಪೋಸ್ ಮಾಡಿದ್ದು, ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಈಗ ಮದುವೆಯಾಗಿದ್ದರು.