ಈ ವಾರವೇ ಬಿಡುಗಡೆಗೊಳ್ಳುತ್ತಿರುವ ರೂಪಾ ರಾವ್ ನಿರ್ದೇಶನದ ಚಿತ್ರ ಗಂಟುಮೂಟೆ. ಈಗಾಗಲೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಮತ್ತು ಮೆಚ್ಚುಗೆ ಪಡೆದುಕೊಂಡಿರೋ ಈ ಚಿತ್ರವನ್ನು ಈಗಾಗಲೇ ಚಿತ್ರರಂಗದ ಅನೇಕ ಗಣ್ಯರಿಗೂ ತೋರಿಸಲಾಗಿದೆ. ಹಾಗೆ ನೋಡಿದವರ ಕಣ್ಣುಗಳಲ್ಲಿ ಇದುವರೆಗೂ ನೋಡಿರದಿದ್ದ ಶೈಲಿಯ ಚಿತ್ರವೊಂದನ್ನು ಕಣ್ತುಂಬಿಕೊಂಡ ಖುಷಿಯೇ ಲಾಸ್ಯವಾಡಿದೆ. ಇದನ್ನು ನೋಡಿದ ಕನ್ನಡದ ಕೆಲ ಯಶಸ್ವಿ ನಿರ್ದೇಶಕರಂತೂ ಇಂಥಾ ಕಥೆ ಮತ್ತು ನಿರೂಪಣೆಯ ಚಿತ್ರವನ್ನು ತಾವೆಂದೂ ನೋಡಿಲ್ಲ ಎಂದು ಮನಸಾರೆ ಹೊಗಳಿದ್ದಾರೆ.
Advertisement
ತೀರಾ ನುರಿತ ನಿರ್ದೇಶಕರೇ ಈ ಪಾಟಿ ಮೆಚ್ಚಿಕೊಳ್ಳುತ್ತಾರೆಂದರೆ ಗಂಟುಮೂಟೆಯೊಳಗೆ ಎಂತೆಂಥಾ ತಾಜಾ ಸರಕುಗಳಿರಬಹುದೆಂದು ಯಾರಿಗಾದರೂ ಅಂದಾಜು ಸಿಗುತ್ತದೆ. ಇದೆಲ್ಲವೂ ರೂಪಾ ರಾವ್ ಮತ್ತು ಚಿತ್ರತಂಡಕ್ಕೆ ಗೆಲುವಿನ ಭರವಸೆಯನ್ನೂ ಮೂಡಿಸಿವೆ. ರೂಪಾ ರಾವ್ ಪಾಲಿಗಿದು ಮೊದಲ ಚಿತ್ರ. ಈವರೆಗೆ ನಿರ್ದೇಶನ ವಿಭಾಗದಲ್ಲಿ ಸಾಕಷ್ಟು ಪಳಗಿಕೊಂಡಿರುವ ಇವರು ವೆಬ್ ಸೀರೀಸ್, ಕಿರುಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಗಂಟುಮೂಟೆಯೊಂದಿಗೆ ನಿರ್ದೇಶಕಿಯಾಗಿ ಆಗಮಿಸಿರುವ ಅವರ ಮುಂದೀಗ ಎಲ್ಲ ದಿಕ್ಕಿನಲ್ಲಿಯೂ ಸದಾಭಿಪ್ರಾಯಗಳೇ ಬಂದು ಮುತ್ತಿಕೊಳ್ಳುತ್ತಿವೆ.
Advertisement
Advertisement
ರೂಪಾ ರಾವ್ ಗಂಟುಮೂಟೆಯಲ್ಲಿ ಅಚ್ಚರಿಗೊಳ್ಳುವಂಥಾ ಅಂಶಗಳನ್ನು ಕಟ್ಟಿಟ್ಟಿದ್ದಾರೆಂಬುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಅದರ ಕೆಲ ಚಹರೆಗಳು ಮಾತ್ರವೇ ಟ್ರೇಲರ್ ಮೂಲಕ ಕಾಣಿಸಿದೆ. ಹೈಸ್ಕೂಲು ದಿನಗಳನ್ನು ಹಾದು ಬಂದ ಬಹುತೇಕರ ಎದೆಯಲ್ಲಿ ಒಂದು ನವಿರು ಪ್ರೇಮದ ಭಾವವಿರುತ್ತೆ. ಆ ನೆನಪುಗಳೂ ಇರುತ್ತವೆ. ಇದರಲ್ಲಿ ಘಟಿಸೋ ತೊಂಭತ್ತರ ದಶಕದ ಪ್ರೇಮಕಥೆ ಅದೆಲ್ಲವನ್ನೂ ಬಡಿದೆಬ್ಬಿಸೋದು ಗ್ಯಾರೆಂಟಿ. ಹದಿಹರೆಯದ ಹೊಸ್ತಿಲ ಪ್ರೀತಿ, ಪ್ರೇಮ, ಭ್ರಮೆ, ವಾಸ್ತವಗಳ ಚಿತ್ರಣ ಹೊಂದಿರೋ ಈ ಚಿತ್ರ ಕಮರ್ಶಿಯಲ್ ಫಾರ್ಮುಲಾಗಳನ್ನೂ ಲೇಪಿಸಿಕೊಂಡೇ ತಯಾರಾಗಿದೆ. ಇದು ಈ ವಾರವೇ ತೆರೆಗಾಣುತ್ತಿದೆ.