Connect with us

Cinema

ಹಿರಿಯ ನಟ ಲೋಕನಾಥ್ ನಿಧನ – ಗಣ್ಯರು, ಸ್ಟಾರ್ ನಟರಿಂದ ಕಂಬನಿ

Published

on

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್(90) ಇಂದು ಬೆಳಗಿನ ಜಾವ ನಿಧನರಾಗಿದ್ದು, ಗಣ್ಯರು ಮತ್ತು ಸಿನಿಮಾ ಕಲಾವಿದರು ಕಂಬನಿ ಮಿಡಿದಿದ್ದಾರೆ.

35 ವರ್ಷದಿಂದ ವೈಯಕ್ತಿಕವಾಗಿ ಬಲ್ಲೆ ಈ ಶಿಸ್ತಿನ ಕಲಾಬಂಧುವನ್ನ. ಅಂಬರೀಶ್ ಅವರ ಸ್ಮರಣಾರ್ಥ ಸಂದರ್ಭದಲ್ಲಿ ನನ್ನ ಪಕ್ಕ ಕೂತು ಆತ್ಮೀಯವಾಗಿ ಮಾತಾಡಿಸಿದ್ದರು. ಪೂರ್ಣ ಆಯುಷ್ಯ ಶ್ರೇಷ್ಠವಾಗಿ ಬದುಕಿ ನಿರ್ಗಮಿಸಿದ ಶ್ರೇಷ್ಠ ಮನುಜ. ಅವರಲ್ಲಿ ತಂದೆ, ತಾತ, ಬಂಧುವನ್ನು ಕಾಣುತ್ತಿದ್ದೆ. ಅಲ್ಲಿತ್ತು ಅವರ ಮನೆ ಬಂದಿದ್ದರು ಸುಮ್ಮನೆ. ಹೋದರು ಮತ್ತೆ ಅವರ ಮನೆಗೆ. ಓಂ ಶಾಂತಿ ಎಂದು ನವರಸನಾಯಕ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಲೋಕನಾಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗಕ್ಕಾಗಿ 5 ದಶಕಗಳಿಂದ ದುಡಿದ ಹಿರಿಯ ನಟರಾದ ಉಪ್ಪಿನಕಾಯಿ ಲೋಕನಾಥ್ ಅಂಕಲ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅವರೊಡನೆ ನನಗೂ ಸಹ ಕೆಲ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೆಂದು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ನಾನು ನೋಡಿದ ವ್ಯಕ್ತಿಗಳಲ್ಲಿ ಲೋಕನಾಥ್ ಅವರು ಸರಳವಾಗಿದ್ದರು. ತಮ್ಮ ಜೀವನವನ್ನು ಶಿಸ್ತು ಹಾಗೂ ನೈತಿಕತೆಯಿಂದ ನಡೆಸಿದ್ದಾರೆ. ಇವರು ನಮಗೆ ಬ್ಲಾಕ್ ಆಂಡ್ ವೈಟ್ ಕಾಲದಿಂದ ಈ ಕಾಲದವರೆಗೂ ಎಲ್ಲರನ್ನೂ ಮನರಂಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ಲೋಕನಾಥ್ ಅವರ ಫೋಟೋ ಹಾಕಿ ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ನಿಧನ ದುಃಖ ಉಂಟು ಮಾಡಿದೆ. ಪೋಷಕ ಪಾತ್ರಗಳಿಗೆ ಜೀವ ತುಂಬಿದ ನಟ ಲೋಕನಾಥ್ ಅವರ ಭೂತಯ್ಯನ ಮಗ ಅಯ್ಯು ಚಿತ್ರದ ಪಾತ್ರ ಜನಮನದಲ್ಲಿ ಸದಾ ಹಸಿರಾಗಿ ಉಳಿದಿದೆ. ಚಿತ್ರರಂಗ, ರಂಗಭೂಮಿ ಎರಡರಲ್ಲೂ ಅವರ ಕೊಡುಗೆ ಸ್ಮರಣೀಯ. ಲೋಕನಾಥ್ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಟ್ವೀಟ್ ಮಾಡಿದ್ದಾರೆ.

ಚಿತ್ರರಂಗದ ಹಿರಿಯ ನಟ ಲೋಕನಾಥ ಅವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. 650ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಇವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ, ಬಂಧುಮಿತ್ರರಿಗೆ, ಅಭಿಮಾನಿಗಳಿಗೆ ದೇವರು ನೀಡಲಿ. ಇವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದಾರೆ.

ಲೋಕನಾಥ್ ಅವರು ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸಿದ್ದು, 5 ದಶಕಗಳ ಕಾಲ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಲೋಕನಾಥ್ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿ ಬಾರದ ಲೋಕಕ್ಕೆ ಲೋಕನಾಥ್ ಪಯಣ ಬೆಳೆಸಿದ್ದಾರೆ. ಭೂತಯ್ಯನ ಮಗ ಅಯ್ಯು, ನಾಗರಹಾವು, ಶರಪಂಜರ, ಮಿಂಚಿನ ಓಟ, ಬಂಗಾರದ ಪಂಜರ, ಕಾಕನಕೋಟೆ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *