ಲೀಲಾವತಿ (Leelavathi) ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ನಟಿ ತಾರಾ (Tara), ಸುಧಾರಾಣಿ, ಶ್ರುತಿ (Shruthi), ಮಾಳವಿಕಾ, ಭವ್ಯ (Bhavya) ಅವರು ಲೀಲಾವತಿ ಅಂತಿಮ ದರ್ಶನ ಪಡೆದಿದ್ದಾರೆ. ಲೀಲಾವತಿ ಜೊತೆಗಿನ ಬಾಂಧವ್ಯದ ಬಗ್ಗೆ ನಟಿಯರು ಮಾತನಾಡಿದ್ದಾರೆ. ಇದನ್ನೂ ಓದಿ:ಬೆಂಗಳೂರಿನಿಂದ ಹೊರಟ ಲೀಲಾವತಿ ಪಾರ್ಥೀವ ಶರೀರ
Advertisement
ಲೀಲಾವತಿಯವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಜೊತೆಗೆ ನಾನು ಹೆಚ್ಚು ಒಡನಾಟ ಇಲ್ಲ. ಅವರ ಜೊತೆ ಹೆಚ್ಚು ಆಕ್ಟ್ ಮಾಡೋದಕ್ಕೆ ನನಗೆ ಸನ್ನಿವೇಶ ಇರಲಿಲ್ಲ. ಆದರೆ ವಿನೋದ್ ರಾಜ್ ಜೊತೆ ನಾನು ಆಕ್ಟ್ ಮಾಡಿದ್ದೇನೆ ಎಂದು ತಾರಾ ಮಾತನಾಡಿದ್ದಾರೆ. ವಿನೋದ್ ರಾಜ್ ಮಾತ್ರ ತಾಯಿ ಬಿಟ್ಟು ಬಂದಿರೋದನ್ನು ಎಲ್ಲೂ ನೋಡಿಲ್ಲ. ಹೀಗಾಗಿ ಅವರ ಬಗ್ಗೆ ನನಗೆ ನೋವು ಆಗುತ್ತಿದೆ. ಲೀಲಾವತಿ ಅವರು ಆದರ್ಶ ಜೀವನ ನಡೆಸಿದ್ದಾರೆ. ಅವರ ಕುಟುಂಬಕ್ಕೆ ಮುಖ್ಯವಾಗಿ ವಿನೋದ್ ರಾಜ್‌ಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಾರಾ (Tara) ಮಾತನಾಡಿದ್ದಾರೆ.
Advertisement
ನಾನು ನಟಿಸಿದ ಮೊದಲ ಚಿತ್ರದಲ್ಲೇ ಲೀಲಾವತಿ ಅವರ ಜೊತೆ ನಟಿಸುವ ಚಾನ್ಸ್ ಸಿಕ್ಕಿತ್ತು. ಕಳೆದ ಒಂದೂವರೆ ತಿಂಗಳ ಹಿಂದೆ ಅವರನ್ನ ಭೇಟಿಯಾಗಿದ್ದೆ, ಇದೀಗ ನಾನು ನಟಿಸುತ್ತಿರೋ ಧಾರಾವಾಹಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನನಗೆ ವೈಯಕ್ತಿಕವಾಗಿ ಲೀಲಾವತಿ ಅವರು ರೋಲ್ ಮಾಡೆಲ್ ಆಗಿದ್ದರು. ನಟಿ, ತಾಯಿಯಾಗಿ ಮಾತ್ರವಲ್ಲ ಪರಿಸರ ಪ್ರೇಮಿಯಾಗಿ, ಸಮಾಜಮುಖಿ ಕಾರ್ಯಗಳ ಮೂಲಕ ಲೀಲಾವತಿ ಆದರ್ಶ ವ್ಯಕ್ತಿಯಾಗಿದ್ದರು. ಲೀಲಾವತಿ ನಿಧನದಿಂದ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟ ಆಗಿದೆ ಎಂದು ಸುಧಾರಾಣಿ (Sudharani) ಮಾತನಾಡಿದ್ದಾರೆ.
Advertisement
Advertisement
ಅಭಿನಯ, ಹಲವು ದಶಕಗಳ ಪಯಣ ಎಲ್ಲವೂ ನಮಗೆ ಪ್ರೇರಣೆ. ಕಲಾವಿದೆಯಾಗಿ ಅವರಿಗೆ ಅವರೇ ಸಾಟಿ ಎಂದು ಲೀಲಾವತಿ ಅವರನ್ನ ಬಣ್ಣಿಸಿದ್ದಾರೆ ನಟಿ ಮಾಳವಿಕಾ. ಹಿರಿಯ ಕಲಾವಿದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸಾರ್ಥಕ ಬದುಕನ್ನು ಲೀಲಾವತಿ ಅಮ್ಮ ಕಟ್ಟಿಕೊಂಡಿದ್ದಾರೆ. ಎಲ್ಲರಿಗೂ ಕಷ್ಟ ಬರುತ್ತೆ, ಆದರೆ ತುಂಬಾ ಧೈರ್ಯದಿಂದ ದಿಟ್ಟ ಮಹಿಳೆಯಾಗಿ ನಿಭಾಯಿಸಿದ್ದಾರೆ. ಅಮ್ಮ ಸಿಂಗಲ್ ಪೇರೆಂಟ್ ಆಗಿ ಒಳ್ಳೆಯ ವ್ಯಕ್ತಿಯನ್ನಾಗಿ ಮಗನನ್ನು ಬೆಳೆಸಿದ್ದರು. ಭಗವಂತ ಕೊಟ್ಟ ಆಯಸ್ಸಿನಲ್ಲಿ ಆದರ್ಶವಾಗಿ ಬೆಳೆದಿದ್ದರು. ನಮ್ಮಂತಹ ಅನೇಕ ಕಲಾವಿದರಿಗೆ ಆದರ್ಶರಾಗಿದ್ದಾರೆ. ಅಮ್ಮ, ಮಗ ಬೆಳೆದ ರೀತಿ ಆಶ್ಚರ್ಯ ಆಗುತ್ತಿದೆ. ತಾಯಿಯನ್ನು ಕಳೆದುಕೊಂಡು ವಿನೋದ್ ರಾಜ್ ಹೇಗಿರ್ತಾರೋ ಅನಿಸುತ್ತಿದೆ. ಎಲ್ಲರ ಆಶೀರ್ವಾದದಿಂದ ವಿನೋದ್ ರಾಜ್ ಚೆನ್ನಾಗಿರಲಿ ಎಂದು ನಟಿ ಶ್ರುತಿ (Shruthi) ಮಾತನಾಡಿದ್ದಾರೆ.
ಚಿತ್ರರಂಗದಲ್ಲಿ ಲೀಲಾವತಿ ಅಮ್ಮನ ಸಾಧನೆ ಅಪಾರವಾದದ್ದು, ಪ್ರೀತಿಯ ಅಮ್ಮ ನಮ್ಮನ್ನೆಲ್ಲ ಅಗಲಿದ್ದಾರೆ. ಲೀಲಾವತಿ ಅವರ ತಾಳ್ಮೆಯ ಮೂರ್ತಿಯಾಗಿದ್ದರು. ನಿಸರ್ಗಕ್ಕೆ ಹತ್ತಿರವಾಗಿ ಜೀವನ ಮಾಡುತ್ತಿದ್ದರು. ವಿನೋದ್, ಲೀಲಾವತಿ ಬಾಂಧವ್ಯ ಅಪರೂಪದ್ದು ಎಂದು ಹಿರಿಯ ನಟಿ ಭವ್ಯ ಹೇಳಿದ್ದಾರೆ. ‘ಹೊಸಬಾಳು’ ಸಿನಿಮಾದಲ್ಲಿ ಲೀಲಾವತಿ ಜೊತೆ ತೆರೆಹಂಚಿಕೊಂಡಿದ್ದರ ಬಗ್ಗೆ ಭವ್ಯ ಸ್ಮರಿಸಿದ್ದಾರೆ.
ದಶಕಗಳ ಕಾಲ ಕನ್ನಡ ಸಿನಿಮಾದಲ್ಲಿ ನಟಿಸಿ ಕೋಟಿ ಕೋಟಿ ಅಭಿಮಾನಿಗಳಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ. ಲೀಲಕ್ಕ ಮಾತೃ ಸ್ಥಾನದಲ್ಲಿದ್ದಾರೆ. ಕನ್ನಡ ಚಿತ್ರರಂಗ ಪ್ರಖ್ಯಾತಿ ಹೊಂದಲು ಅವರ ಕೊಡುಗೆ ಅಪಾರ. ನಮ್ಮ ಕುಟುಂಬದಲ್ಲಿ ಹಿರಿಯರನ್ನ ಕಳೆದುಕೊಳ್ಳುತ್ತಲೇ ಇದ್ದೇವೆ. ಅದಕ್ಕಿಂತಲೂ ಹೆಚ್ಚಾಗಿ ತಾಯಿಗೆ ಮಗ – ಮಗನಿಗೆ ತಾಯಿ ಹೀಗೆ ಅವರಿಬ್ಬರ ಬಾಂಧವ್ಯ ಬಹಳ ವಿಶೇಷ. ಕಷ್ಟಕೋಟಲೆಗಳ ಮಧ್ಯೆ ದೃತಿಗೆಡದೆ ಎದ್ದು ನಿಂತ ಮಹಿಳೆ. ಬಡವರಿಗೆ ಸಹಾಯ ಮಾಡುತ್ತಿದ್ದರು. ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಹೀಗೆ ಸಾರ್ಥಕ ಜೀವನ ನಡೆಸಿದ್ದಾರೆ. ಅವರ ಮಗನಿಗೆ ದುಃಖ ಬರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಹಿರಿಯ ನಟ ರಮೇಶ್ ಭಟ್ ಕಂಬನಿ ಮಿಡಿದಿದ್ದಾರೆ.
ಅವರ ಜೊತೆಗೆ ಕಾಲ ಕಳೆಯುವ ಅದ್ಭುತ ಅವಕಾಶ ಸಿಕ್ಕಿತು. ಅವರು ಕೊಟ್ಟ ಊಟ ಮಾಡಿದ್ದೆ. ನಾನು ಸಹ ನಿರ್ದೇಶಕನಿದ್ದಾಗಿನಿಂದಲೂ ಲೀಲಾವತಿ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದೇನೆ. ಅವರ ಸಂಸ್ಥೆಯ 2 ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ವಿನೋದ್ ರಾಜ್ ಅವರ 4 ಚಿತ್ರಗಳಿಗೆ ನಿರ್ದೇಶನ ಮಾಡಿದ್ದೇನೆ. ನಮ್ಮ ಒಡನಾಟ ಹೇಳಿಕೊಳ್ಳಲಾಗದು. ಬಹಳ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದಾರೆ. ನನ್ನ ತಾಯಿ ಕಳೆದುಕೊಂಡಷ್ಟೇ ದುಃಖವಾಗುತ್ತಿದೆ. ಇನ್ನೂ ವಿಶೇಷವಾಗಿ ನಮಗೆ ಕಾಣುವುದು ತಾಯಿ-ಮಗನ ಬಾಂಧವ್ಯ. ಮಗನನ್ನು ಬೆಳೆಸಿದ ರೀತಿ, ಕಲಿಸಿದ ಸಂಸ್ಕೃತಿಯಲ್ಲಿ ತಾಯಿ ಮಾರ್ಗದರ್ಶಕರಾದರೆ, ಕೆಲವೊಂದು ಸಂದರ್ಭದಲ್ಲಿ ಮಗನೇ ತಾಯಿಗೇ ಗುರುವಾಗಿದ್ದರು. ವಿನೋದ್ ರಾಜ್ ಅವರಂತಹ ಮಗನಿಗೆ ಜನ್ಮ ಕೊಡದೇ ಇದ್ದಿದ್ದರೆ 30 ವರ್ಷಗಳ ಮುಂಚೆಯೇ ನಮ್ಮನ್ನು ಬಿಟ್ಟು ಹೋಗಿಬಿಡುತ್ತಿದ್ದರು. ಏಕೆಂದರೆ ವಿನೋದ್ ತಾಯಿಗೆ ಆಕ್ಸಿಜನ್ ಆಗಿದ್ದರು. ಒಬ್ಬರಿಗೊಬ್ಬರು ಗುರುವಾಗಿ ಬದುಕಿದ್ದಾರೆ. ಈಗ ತಾಯಿ ಇಲ್ಲದ ಪ್ರಪಂಚವನ್ನು ವಿನೋದ್ ರಾಜ್ ಹೇಗೆ ನೋಡುತ್ತಾರೆ ಅನ್ನೋದು ಚಿಂತೆಯಾಗಿದೆ ಎಂದು ಎಸ್. ನಾರಾಯಣ್ ಭಾವುಕ ನುಡಿಗಳನ್ನಾಡಿದ್ದಾರೆ.
ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.