ಅಗಲಿದ ಖ್ಯಾತ ಸಿನಿಮಾ ನಟಿ ಸರೋಜಾದೇವಿಯವರ (Saroja Devi) ಅಗಲಿಕೆಗೆ ಸ್ಯಾಂಡಲ್‍ವುಡ್ (Saroja Devi) ನಟ ನಟಿಯರು ಸೇರಿದಂತೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಸರೋಜಾದೇವಿಯವರ ಬಗ್ಗೆ ಮಾತಾಡಿರುವ ನಟ ಪ್ರಕಾಶ್ ರೈ (Prakash Raj ) ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಯ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. 160ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸೋದು ಸಾಮಾನ್ಯವಾದ ಮಾತಲ್ಲ. ಅವರ ಜೊತೆ ನಾನು ನಟಿಸದೇ ಹೋದ್ರು, ಸಾಕಷ್ಟು ಬಾರಿ ಮಾತನಾಡಿದ್ದೆ. ಯಾವಾಗ ಸಿಕ್ಕರು ಆತ್ಮೀಯವಾಗಿ ಮಾತನಾಡುತ್ತಿದ್ದರು. ನನಗೆ ಅವಾರ್ಡ್ ಸಿಕ್ಕಾಗ ಕರೆ ಮಾಡಿ, ಮಾತನಾಡಿದ್ರು. ಗಂಭೀರವಾಗಿ ತುಂಬು ಜೀವನ ನಡೆಸಿದ್ದಾರೆ. ಅದ್ಬುತವಾದ ನಟಿ ಅವರು, ಅವರ ಅಗಲಿಕೆ ಚಿತ್ರರಂಗಕ್ಕೆ ಸಾಕಷ್ಟು ನಷ್ಟ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ. ಇದನ್ನೂ ಓದಿ: ಸರೋಜಾದೇವಿಯವ್ರು ತಲೆಮಾರುಗಳಲ್ಲಿ ಅಳಿಸಲಾಗದ ಗುರುತು ಬಿಟ್ಟು ಹೋಗಿದ್ದಾರೆ: ಮೋದಿ ಸಂತಾಪ
ಸಂಗೀತ ನಿರ್ದೇಶಕ ಗುರುಕಿರಣ್ (Prakash Raj) ಪ್ರತಿಕ್ರಿಯಿಸಿ, ಕನ್ನಡ, ದಕ್ಷಿಣ ಭಾರತ ಕಂಡ ಅತ್ಯುತ್ತಮ ನಟಿ ಸರೋಜಾದೇವಿಯವರು. ಅಂತಹ ಸ್ಟಾರ್ ಇನ್ನೂ ಸಿಗಲ್ಲ. ದಕ್ಷಿಣ ಭಾರತ ಆಳಿದವರು. ಹೀರೋಗಳು ಕೂಡ ಇವರ ಡೇಟ್‍ಗಾಗಿ ಕಾಯುತ್ತಿದ್ದರು. ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದಿದ್ದಾರೆ.
ಹಿರಿಯ ನಟ ಶ್ರೀನಿವಾಸ ಮೂರ್ತಿಯವರು ಮಾತನಾಡಿ, ಸರೋಜಾದೇವಿಯವರ ಅಗಲುವಿಕೆ ಕನ್ನಡ ಚಿತ್ರರಂಗ ಮಾತ್ರ ಅಲ್ಲ, ಭಾರತೀಯ ಚಿತ್ರರಂಗಕ್ಕೆ ದುಃಖದ ವಿಚಾರ. ಪಂಚಭಾಷೆ ತಾರೆ ಅಂತ ಹೆಸರು ಪಡೆದವರು. ಎಲ್ಲಾರ ಜೊತೆ ನಟಿಸಿದ್ದವರು. ಹೀರೋಗೆ ಕೊಟ್ಟಷ್ಟೇ ಪ್ರಾಮುಖ್ಯತೆ ಇವರಿಗೂ ಇತ್ತು. ನನ್ನ ಪುಣ್ಯ, ಅವರ ಜೊತೆ ಗಂಡನ ಪಾತ್ರ ಮಾಡಿದ್ದೆ. ಒಂದೂವರೆ ತಿಂಗಳ ಹಿಂದೆ ಮಾತನಾಡಿದ್ದೆ. ಈ ವೇಳೆ, ಅವರ ದಿನಚರಿ ಬಗ್ಗೆಯೂ ಹೇಳಿಕೊಂಡಿದ್ದರು. ಪೂಜೆ, ಸಿನಿಮಾ ನೋಡೋದು. ಕಲಾವಿದರಿಗೆ ಪ್ರೋತ್ಸಾಹ ಮಾಡುತ್ತಿದ್ದರು. ಕನ್ನಡದಷ್ಟೇ ಒಳ್ಳೇಯ ಪಾತ್ರಗಳನ್ನ ಬೇರೆ ಭಾಷೆಯಲ್ಲಿ ಮಾಡಿ ಸಾಧನೆ ಮಾಡಿದ್ದರು. ಹುಟ್ಟಿದ ಮೇಲೆ ಸಾವು ಇರುತ್ತೆ. ಬೆಳಗ್ಗೆ ಪೂಜೆ ಮಾಡಿ ತಿಂಡಿ ಮಾಡಿದ ಕೂಡಲೇ ಸಾವಾಗಿದೆ. ಅವರನ್ನು ಕಳೆದುಕೊಂಡಿದ್ದೇವೆ ದುಃಖವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಪ್ರತಿಕ್ರಿಯಿಸಿ, ಸರೋಜಾದೇವಿಯವರು ಅವರು, ನಮ್ಮ ಕುಟುಂಬಕ್ಕೆ ತುಂಬಾ ಆತ್ಮೀಯವಾಗಿದ್ದರು. ಆಕೆ ಒಬ್ಬ ಮಹಾನ್ ನಟಿ, ಅಚ್ಚಕನ್ನಡ ಮಾತನಾಡುವಂತಹ ಹಿರೋಯಿನ್. ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರವನ್ನು ಅವರಂತೆ ಯಾರು ಮಾಡಲು ಸಾಧ್ಯವಿಲ್ಲ. ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬರಬೇಕು ಅಂತಾ ಪತ್ರ ಬರೆದಿದ್ದೆ. ಪಂಚಭಾಷೆಯಲ್ಲಿ ಅವರು ನಟನೆ ಮಾಡಿದ್ದಾರೆ. ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.
ನಿರ್ಮಾಪಕ ಬಾ.ಮಾ ಹರೀಶ್ ಮಾತನಾಡಿ, ಯಾವುದೇ ಭಾಷೆಯಲ್ಲೂ ಅವರು ನಟನೆ ಮಾಡಿದ್ರೂ ಕನ್ನಡ ಭಾಷೆಗೆ ತುಂಬಾ ಗೌರವ ಕೊಡ್ತಿದ್ರು. ಈ ಹನ್ನೊಂದನೇ ಕ್ರಾಸ್‍ಗೆ ಬಿ ಸರೋಜಾ ದೇವಿ ಹೆಸ್ರು ಇಡಬೇಕು ಅಂತಾ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ವಿ. ಅವರ ನಿಧನದ ನಂತರ ಹೆಸ್ರು ಇಡೋದಾಗಿ ಅಧಿಕಾರಿಗಳು ಹೇಳಿದ್ರು. ಈಗಿನ ಸರ್ಕಾರ ಈ ರಸ್ತೆಗೆ ಅವರ ಹೆಸರು ಇಡಬೇಕು ಎಂದು ಮನವಿ ಮಾಡ್ತೀನಿ ಎಂದಿದ್ದಾರೆ.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿ, ಸರೋಜಾ ದೇವಿಯವರು ಕರ್ನಾಟಕದವರು, ಕನ್ನಡಿಗರು, ಕನ್ನಡ ಚಿತ್ರಕ್ಕಿಂತ ಹೆಚ್ಚಾಗಿ ತಮಿಳು ಚಿತ್ರಗಳಲ್ಲಿ ಭಾರಿ ಪಾತ್ರ ಮಾಡಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ರಾಜ್ಯ ಕಂಡತಂಹ ಸಂಗೀತಗಾರ ಹೊನ್ನಪ್ಪ ಭಾಗವತರ್ ಬಳಿ ಸಂಗೀತ ಕಲಿತಿದ್ದರು. ಹೊನ್ನಪ್ಪ ಭಾಗವತರ್ ಅವರನ್ನು ಸಿನಿಮಾಕ್ಕೆ ಕರೆದುಕೊಂಡು ಬಂದರು. ತಮಿಳಿನಲ್ಲಿ ಎಂ.ಜಿ ರಾಮಚಂದ್ರನ್ ಜೊತೆ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಇವರು ತಮಿಳುನಾಡಿನ ಮುಖ್ಯಮಂತ್ರಿ ಆಗಬೇಕಿತ್ತು. ಅಷ್ಟೋತ್ತಿಗೆ ಜಯಲಲಿತಾ ಬಂದ್ರು. ಇವರ ನಿಧನದಿಂದ ನಮ್ಮ ನಾಡಿಗೆ ಅಪಾರವಾದ ನೋವಾಗಿದೆ. ಸುಮಾರು 3 ವರ್ಷದ ಹಿಂದೆ ನನ್ನ ಜೊತೆ ಮಾತನಾಡಿದ್ದರು ಎಂದು ಹೇಳಿಕೊಂಡಿದ್ದಾರೆ.
ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಸರೋಜ ದೇವಿಯವರು ಸಿನಿಮಾ ಲೆಜೇಂಡ್. ಅವರ ಜೊತೆ ಹಲವು ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದೇನೆ. ಅವರನ್ನ ಈಗ ಮುಟ್ಟಿದಾಗಲೂ ಮೈ ರೋಮಾಂಚನ ಆಯ್ತು. ಇವರಿಗೆಲ್ಲ ಸಾವು ಬರಬಾರದು ಅಂತ ಅನ್ನಿಸುತ್ತೆ. ನಾವೆಲ್ಲ ಸಿನಿಮಾ ರಂಗಕ್ಕೆ ಬರಲು ಇವರೇ ಸ್ಫೂರ್ತಿ. ರಾಣಿ ಹಾಗೇ ಬದುಕಿ ಸಿನಿಮಾ ಮಾಡಿ ಬಿಟ್ಟು ಹೋಗಿದ್ದೀರಾ. ಜಯಮಾಲರ ಮಗಳ ಮದುವೆಯಲ್ಲಿ ಭೇಟಿಯಾಗಿದ್ದೆವು. ಈಗಲೂ ಅವರು ಹಂಸ ನಡಿಗೆಯಲ್ಲೇ ನಡೆಯುತ್ತಿದ್ದರು ಎಂದು ಹೇಳಿದ್ದಾರೆ.
ನಟಿ ಅನುಪ್ರಭಾಕರ್ ಮಾತನಾಡಿ, ಚಿತ್ರರಂಗ ಹಿರಿಯರನ್ನ ಕಳೆದುಕೊಳ್ಳುತ್ತಿದೆ ಅನ್ನೋದು ಬೇಸರದ ವಿಷಯ. ಅವರು ಬಹಳ ಸ್ಟ್ರಾಂಗ್ ಲೇಡಿ. ಇತ್ತೀಚೆಗೆ ಅವರನ್ನು ಭೇಟಿಯಾಗೋಕೆ ಆಗಿರಲಿಲ್ಲ. ಅವರು ಕನ್ನಡಿಗರಷ್ಟೇ ಅಲ್ಲ ಭಾರತೀಯ ಕಲಾವಿದರಿಗೆ ಮಾದರಿ. ನಮ್ಮ ಕನ್ನಡಿಗರಿಗೆ ಕಿತ್ತೂರು ರಾಣಿ ಚೆನ್ನಮ್ಮ ಅಂದ್ರೆ ಸರೋಜಮ್ಮ ಎಂದಿದ್ದಾರೆ.
ಉದ್ಯಮಿ ಹಾಗೂ ಮಾಜಿ ಶಾಸಕ ಅಶೋಕ್ ಖೇಣಿ ಮಾತನಾಡಿ, ಸರೋಜದೇವಿ ಮತ್ತು ನಮ್ಮ ತಾಯಿಯ ಸ್ನೇಹಿತರು. ಅವರ ಅಗಲುವಿಕೆ ಬಹಳ ದೊಡ್ಡ ನಷ್ಟ. ನಮ್ಮ ತಾಯಿ ಕೂಡ ಸ್ವರ್ಗದಲ್ಲಿದ್ದಾರೆ. ಮತ್ತೆ ಅವರೆಲ್ಲ ಅಲ್ಲಿ ಒಟ್ಟಿಗೆ ಸೇರುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿನಿಮಾದ ಸುವರ್ಣ ಯುಗವೊಂದು ಅಂತ್ಯವಾಗಿದೆ – ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್, ಖುಷ್ಬು