ರೋರಿಂಗ್ ಸ್ಟಾರ್ ಶ್ರೀಮುರಳಿ ಇದೀಗ ಭರಾಟೆ ಚಿತ್ರದ ಗೆಲುವಿನಿಂದ ಖುಷಿಗೊಂಡಿದ್ದಾರೆ. ವರ್ಷಾನುಗಟ್ಟಲೆ ಆ ಸಿನಿಮಾಗಾಗಿಯೇ ಸಮರ್ಪಿಸಿಕೊಂಡು ಕಾರ್ಯ ನಿರ್ವಹಿಸಿದ್ದ ಅವರೀಗ ಮತ್ತೊಂದು ಚಿತ್ರಕ್ಕಾಗಿ ಅಣಿಗೊಂಡಿದ್ದಾರೆ. ಇದೇ ಹೊತ್ತಲ್ಲಿ ವರ್ಷಾಂತ್ಯದಲ್ಲಿ ತುಸು ನಿರಾಳವಾಗುವುದಕ್ಕಾಗಿ ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ಕೊಟ್ಟು ಸ್ವಚ್ಛಂದವಾಗಿ ಓಡಾಡಿಕೊಂಡು ಖುಷಿ ಅನುಭವಿಸಿದ್ದಾರೆ. ಅಲ್ಲಿನ ಹಾಡಿ ಮಕ್ಕಳೊಂದಿಗೆ ಬೆರೆತು ಮುದಗೊಂಡಿದ್ದಾರೆ.
ರೋರಿಂಗ್ ಸ್ಟಾರ್ ನಾಗರಹೊಳೆ ಅಭಯಾರಣ್ಯ ಪ್ರದೇಶಕ್ಕೆ ಭೇಟಿ ಕೊಡುತ್ತಿರೋ ಸುದ್ದಿ ತಿಳಿದು ನೂರಾರು ಅಭಿಮಾನಿಗಳೂ ಸಾಥ್ ಕೊಟ್ಟಿದ್ದರು. ವಿಶೇಷವೆಂದರೆ, ಶ್ರೀಮುರಳಿ ಕೇವಲ ಜಾಲಿ ಮಾಡೋದಕ್ಕೆ ಮಾತ್ರವೇ ನಾಗರಹೊಳೆಗೆ ಭೇಟಿ ನೀಡಿಲ್ಲ. ಬದಲಾಗಿ ಅಲ್ಲಿಯೂ ತಮ್ಮ ಪರಿಸರ ಕಾಳಜಿಗೆ ಅನುಗುಣವಾಗಿಯೇ ನಡೆದುಕೊಂಡಿದ್ದಾರೆ. ಅಲ್ಲಿನ ಶಾಲಾ ಮಕ್ಕಳ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು ಆ ನಂತರದಲ್ಲಿ ಅಭಿಮಾನಿಗಳ ಜೊತೆ ಗಿಡ ನೆಡುವ ಮೂಲಕ ಪರಿಸರ ಪ್ರೇಮವನ್ನು ಪಸರಿಸುವಂಥಾ ಕೆಲಸ ಮಾಡಿದ್ದಾರೆ.
ರೋರಿಂಗ್ ಸ್ಟಾರ್ ಶ್ರೀಮುರಳಿಗೆ ವನ್ಯಜೀವಿಗಳು ಮತ್ತು ಪರಿಸರದ ಬಗ್ಗೆ ಅತೀವವಾದ ಕಾಳಜಿ ಇದೆ. ಅವರು ಸಮಯ ಸಿಕ್ಕಾಗೆಲ್ಲ ಪ್ರಕೃತಿಯ ಮಡಿಲು ಸೇರಿಕೊಂಡು ನಿರಾಳವಾಗುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದೆಲ್ಲವನ್ನೂ ಮನಗಂಡೇ ರಾಜ್ಯ ಸರ್ಕಾರ ಅವರನ್ನು ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ನೇಮಕ ಮಾಡಿತ್ತು. ಈ ಸಂಬಂಧವಾಗಿಯೇ ಅವರು ನಾಗರಹೊಳೆ ಅರಣ್ಯ ಪ್ರದೇಶಕ್ಕೆ ತೆರಳಿ ಒಂದಷ್ಟು ಪರಿಸರ ಕಾಳಜಿಯ ಕೆಲಸ ಮಾಡಿ ನಿರಾಳವಾಗಿದ್ದಾರೆ.