– ಇಬ್ಬರು ಅರಣ್ಯಾಧಿಕಾರಿಗಳು ಅಮಾನತು
ಯಾದಗಿರಿ: ಅರಣ್ಯ ಇಲಾಖೆ ಅಧಿಕಾರಿಗಳು (Forest Department) ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಕಾಡನ್ನು ಕಾಯೋದು ಬಿಡಿ, ತಮ್ಮ ಕಚೇರಿಯನ್ನೇ ಕಾಯದ ಪರಿಸ್ಥಿತಿ ಯಾದಗಿರಿಯಲ್ಲಿ ಕಂಡುಬಂದಿದೆ.
ಹೌದು. ಯಾದಗಿರಿಯ (Yadagiri) ಅರಣ್ಯ ಇಲಾಖೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧದ ಕಟ್ಟಿಗೆಗಳು ಕಳ್ಳತನವಾಗಿವೆ. ಅರಣ್ಯ ಪ್ರದೇಶದಲ್ಲಿ ಖದೀಮರು ಕಳ್ಳತನ ಮಾಡಿದ್ದ ಶ್ರೀಗಂಧದ ಕಟ್ಟಿಗೆಗಳನ್ನು ಜಪ್ತಿ ಮಾಡಿ ಕಚೇರಿಯಲ್ಲಿ ಶೇಖರಿಸಲಾಗಿತ್ತು. ಅದೇ ಕಚೇರಿಯಿಂದಲೇ ಶ್ರೀಗಂಧ ಕಟ್ಟಿಗೆ ಕಳ್ಳತನವಾಗಿರೋದು ಇದೀಗ ಭಾರೀ ಅನುಮಾನ ಉಂಟು ಮಾಡಿದೆ.
Advertisement
Advertisement
ಕಳೆದ ನಾಲ್ಕು ದಿನದ ಹಿಂದೆ ಯಾದಗಿರಿ ಜಿಲ್ಲಾ ಕೆಂದ್ರದ ಅರಣ್ಯ ಇಲಾಖೆಯ ಕಚೇರಿಯಲ್ಲಿ 8 ಲಕ್ಷದ 58 ಸಾವಿರ ರೂ. ಮೌಲ್ಯದ 85 ಕೆ.ಜಿ ಶ್ರೀಗಂಧದ ಕಟ್ಟಿಗೆಗಳು ಕಳ್ಳತನವಾಗಿವೆ. ಉಪ ವಲಯ ಅರಣ್ಯಾಧಿಕಾರಿ ಕಾಜೋಲ್ ಪಾಟೀಲ್ ಅವರ ಕಚೇರಿ ಪಕ್ಕದಲ್ಲಿರುವ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿರುವ ಶೌಚಾಲಯದಲ್ಲಿ ಈ ಶ್ರೀಗಂಧ ಕಟ್ಟಿಗೆಗಳನ್ನು ಭದ್ರವಾಗಿ ಶೇಖರಿಸಿದ್ದನ್ನು ಕಳ್ಳರು ಯಾರಿಗೆ ಗೊತ್ತಾಗದಂತೆ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
Advertisement
ಒಂದು ಸರ್ಕಾರಿ ಕಚೇರಿಯಲ್ಲಿ ಇಟ್ಟ ಶ್ರೀಗಂಧದ ಕಟ್ಟಿಗೆಗಳನ್ನು ಕದಿಯುವುದು ಅಷ್ಟು ಸುಲಭದ ಮಾತಲ್ಲ. ಇದರ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳು ಶಾಮೀಲು ಆಗಿರುವ ಶಂಕೆಯೂ ಸಹ ವ್ಯಕ್ತಪಡಿಸಲಾಗಿದೆ. ಜೊತೆಗೆ ಜಿಲ್ಲಾ ಕೆಂದ್ರದಲ್ಲಿರುವ ಈ ಅರಣ್ಯ ಕಚೇರಿಗೆ ಯಾವುದೇ ಸಿಸಿಟಿವಿ ಕ್ಯಾಮರಾ ಇಲ್ಲ. ರಾತ್ರಿ ಹೊತ್ತು ಕಚೇರಿ ಕಾಯಲು ಯಾವುದೇ ವಾಚ್ ಮನ್ ನೇಮಿಸಿಲ್ಲ. ಇದರಿಂದ ಕಳ್ಳರು ಬಹಳ ಸಲೀಸಾಗಿ, ಯಾವುದೇ ಭಯ-ಭೀತಿಯಿಲ್ಲದೇ ಯಾವುದೋ ವಾಹನದಲ್ಲಿ ಕಚೇರಿಯೊಳಗೆ ಬಂದು ಕಳ್ಳತನ ಮಾಡಿದ್ದಾರೆ ಎಂಬ ಸಂಶಯವಾಗ್ತಿದೆ.
Advertisement
ಕಳ್ಳತನದ ಮಾಹಿತಿ ತಿಳಿಯುತ್ತಿದ್ದಂತೆ ಕಳ್ಳತನ ಆಗಿಯೇ ಇಲ್ಲ ಎಂದು ಅರಣ್ಯ ಅಧಿಕಾರಿಗಳು ಮುಚ್ವಿ ಹಾಕಲು ಪ್ಲಾನ್ ಮಾಡಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಯಬಾರದು, ಹೇಗಾದ್ರು ಮಾಡಿ ಇದರಿಂದ ಪಾರಾಗಲು ಗುರಮಠಕಲ್ ಕಡೆಯ ಅರಣ್ಯ ಪ್ರದೇಶದಲ್ಲಿ ಎರಡು ಶ್ರೀಗಂಧ ಗೀಡಗಳನ್ನು ಕಡಿದು ಅದರ ಕಟ್ಟಿಗೆಗಳನ್ನು ತಂದು ಕಳ್ಳತನವಾಗಿರುವ ಜಾಗದಲ್ಲಿ ಸೇಫ್ ಆಗಿ ಇಟ್ಟಿದ್ದಾರೆ. ಇನ್ನು ಈ ಶ್ರೀಗಂಧದ ಕಟ್ಟಿಗೆಗಳನ್ನು ಕಳ್ಳತನ ಮಾಡಿರುವುದು 2-3 ದಿನಗಳ ಬಳಿಕ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕಲಬುರಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಫನ್ವಾರ್ ಇಂದು ಯಾದಗಿರಿ ಅರಣ್ಯ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು, ಈ ವೇಳೆ ಮೆಲ್ನೊಟಕ್ಕೆ ಉಪ ವಲಯ ಅರಣ್ಯಾಧಿಕಾರಿ ಚಂದ್ರ ಶಾ ನೀರಕಟ್ಟಿ ಹಾಗೂ ಗಸ್ತು ವನಪಾಲಕ ರಿಜ್ವಾನ್ ಇಬ್ಬರನ್ನು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗುವುದು. ಜೊತೆಗೆ ಇದರ ಬಗ್ಗೆ ಯಾದಗಿರಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಹತ್ತಿಕುಣಿ ಅರಣ್ಯ ಪ್ರದೇಶವೂ ಅತೀ ಹೆಚ್ಚು ಅರಣ್ಯವನ್ನು ಹೊಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಇದೇ ಸೆ. 13 ರಂದು ಹತ್ತಿಕುಣಿ ಬಳಿಯ ಬಗ್ಗಲಮಡು-ಹಂದರಕಿ ಅರಣ್ಯ ಪ್ರದೇಶದಲ್ಲಿ ಹಲವು ವರ್ಷಗಳಿಂದ ಶ್ರೀಗಂಧ ಮರಗಳನದ್ನು ಕಡಿದು ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ಸಚಿನ್ ಎಂಬಾತ ಶ್ರೀಗಂಧದ ಗೀಡಗಳನ್ನು ಕಟ್ ಮಾಡಿ ಅದರ ಕಟ್ಟಿಗೆಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದನು. ಈ ವೇಳೆ ಅರಣ್ಯಾಧಿಕಾರಿಗಳು ದಾಳಿ ಮಾಡಿ 8.5. ಲಕ್ಷ ರೂ.ಮೌಲ್ಯದ ಶ್ರೀಗಂಧ ಕಟ್ಟಿಗೆಗಳನ್ನು ಜಪ್ತಿ ಹಾಗೂ ಆರೋಪಿ ಸಚಿನ್ ನನ್ನು ವಶಕ್ಕೆ ಪಡೆದು, ಜೈಲಿಗಟ್ಟಿದ್ದರು. ಆಗ ಸಚಿನ್ ಕಳ್ಳತನ ಮಾಡಿದ್ದ ಶ್ರೀಗಂಧದ ಕಟ್ಟಿಗೆಗಳನ್ನು ಹಿರಿಯ ಅಧಿಕಾರಿಗಳ ಸಮ್ಮಖದಲ್ಲಿ ಕಚೇರಿಯಲ್ಲಿ ಶೇಖರಿಸಲಾಗಿತ್ತು. ಇನ್ನೊಂದು ಇದೇ ರೀತಿಯ ಶ್ರೀಗಂಧ ಕಟ್ಟಿಗೆ ಕಳ್ಳತನ ಪ್ರಕರಣವೂ ಇದಾದ 15 ದಿನದ ಬಳಿಕ ಯಾದಗಿರಿ ತಾಲೂಕಿನ ಬಾಚವಾರ ಬಳಿ ದಾಳಿ ಮಾಡಿದರು. ಆಗ ಕಲಬುರಗಿ ಮೂಲದ ದೇವಪ್ಪ ಕದಿದ್ದ ಶ್ರೀಗಂಧ ಕಟ್ಟಿಗೆ ವಶಕ್ಕೆ ಪಡೆದುಕೊಂಡು ಜೈಲಿಗಟ್ಟಿದ್ರು. ನಂತರ ಶ್ರೀಗಂಧ ಕಟ್ಟಿಗೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕಚೇರಿಯಲ್ಲಿ ಶೇಖರಿಸಲಾಗಿತ್ತು.
ಇವೆರಡೂ ಪ್ರಕರಣ ಸೇರಿದಂತೆ ಹಲವು ವೇಳೆ ದಾಳಿ ಮಾಡಿ ಕಚೇರಿಯಲ್ಲಿ ಇಟ್ಟಿದ್ದ ಅರಣ್ಯ ಇಲಾಖೆಯ ಆಸ್ತಿಯನ್ನು ಕಳ್ಳತನ ಆಗಿರುವುದು ದೊಡ್ಡ ವಿಫಲ. ಇದೆಲ್ಲವೂ ಹಿರಿಯ ಅಧಿಕಾರಿಗಳಿಂದ ಹಿಡಿದು ಸಣ್ಣ ಅಧಿಕಾರಿಗಳಿಗೂ ತಮ್ಮ ಇಲಾಖೆಯ ಶ್ರಿಗಂಧ ಸೇರಿದಂತೆ ಹಲವು ವಸ್ತುಗಳು ಜಪ್ತಿಯ ಇಂಚಿಂಚೂ ಮಾಹಿತಿ ಗೊತ್ತಿರುತ್ತದೆ. ಆದ್ರೆ ಇವರೆಲ್ಲರ ಕಣ್ತಪ್ಪಿಸಿ ಈ ಕಳ್ಳತನ ನಡೆದಿರುವುದು ನಂಬಲು ಅಸಾಧ್ಯದ ಮಾತು. ಕೇವಲ ಇಬ್ಬರನ್ನು ಅಮಾನತು ಮಾಡಿ ಕೈ ತೊಳೆದುಕೊಳ್ಳುವ ಬದಲು ಸೂಕ್ತ ತನಿಖೆ ಮಾಡಿ ಸಾರ್ವಜನಿಕರ ಆಸ್ತಿ ಪತ್ತೆ ಹಚ್ಚಿ ಖದೀಮರ ಎಡೆಮುರಿ ಕಟ್ಟಬೇಕಾಗಿದೆ.
ತಮ್ಮ ಮನೆಯನ್ನು ಕಾಯಲಾಗದೇ ಇರುವವರು. ನಾಡಿನ ಅರಣ್ಯವನ್ನು ಕಾಯಲು ಹೇಗೆ ಸಾಧ್ಯ. ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧ ಕಟ್ಟಿಗೆ ಕಳ್ಳತನ ಪ್ರಕರಣ ಅರಣ್ಯ ಇಲಾಖೆಯ ಮೇಲೆ ಸಾಕಷ್ಟು ಸಂಶಯ ಮೂಡಿಸಿದೆ. ಇಂತಹ ದುಷ್ಕೃತ್ಯದಲ್ಲಿ ಯಾವುದೇ ಅಧಿಕಾರಿಗಳು ಹಾಗೂ ಬೇರೆಯವರಿದ್ರು ಅವ್ರನ್ನು ಪತ್ತೆ ಹಚ್ಚಿ ಸತ್ಯಾಸತ್ಯತೆ ಬಯಲಿಗೆಳೆಯಬೇಕಾಗಿದೆ.
Web Stories