ಮಂಗಳೂರು: ಮರಳು ದಂಧೆಗೆ ಬೇಸತ್ತು ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.
ವೈಯಕ್ತಿಕ ಕಾರಣದಿಂದ ನಾನು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದರೂ ಮರಳು ದಂಧೆಗೆ ಕಡಿವಾಣ ಹಾಕಿದ ಬಳಿಕ ಸೆಂಥಿಲ್ ಅವರು ಗುತ್ತಿಗೆದಾರರ ಮತ್ತು ಕಟ್ಟಡ ನಿರ್ಮಾಣ ಕಂಪನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ತಾನು ಮಾಡಬೇಕೆಂದುಕೊಂಡಿದ್ದ ಅಭಿವೃದ್ಧಿ ಕೆಲಸಗಳಿಗೆ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಂದ ಸರಿಯಾದ ಬೆಂಬಲ ಸಿಗದ ಕಾರಣ ಈಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
Advertisement
Advertisement
ಸೆಂಥಿಲ್ ಅವರು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಈ ವರ್ಷದ ಮೇ 20 ರಂದು dksandbazaar ಹೆಸರಿನ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ್ದರು. ಈ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ಮರಳಿನ ವ್ಯಾಪಾರಕ್ಕೆ ಅಪ್ಲಿಕೇಶನ್ ತಂದ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಆ್ಯಪ್ ಮೂಲಕ ಜನರಿಗೆ ಮರಳು ಸಿಗುವಂತೆ ಮಾಡುವ ಮೂಲಕ ಉದ್ದಿಮೆದಾರರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಜೊತೆ ಮರಳು ಮಾರಾಟಗಾರರಿಂದ ರಾಜಕೀಯ ಒತ್ತಡ, ಮೈತ್ರಿ ಸರ್ಕಾರ ಹಾಗೂ ಈಗಿನ ಬಿಜೆಪಿ ಸರ್ಕಾರದ ರಾಜಕಾರಣಿಗಳಿಂದ ಒತ್ತಡ ಬರುತಿತ್ತು ಎನ್ನುವ ಮಾತು ಈಗ ಕೇಳಿ ಬಂದಿದೆ.
Advertisement
ಏಳು ಸಾವಿರ ರೂ.ಗೆ ಜನರಿಗೆ ಮರಳು ನೀಡಲು ವ್ಯವಸ್ಥೆ ಮಾಡಿದ್ದರೂ ಈ ಅಪ್ಲಿಕೇಶನ್ ಸರಿಯಾಗಿ ಕಾರ್ಯನಿರ್ವಹಿಸದಂತೆ ಮರಳು ವ್ಯಾಪಾರಿಗಳು ಅಡ್ಡಿ ಪಡಿಸುತ್ತಿದ್ದರು. ಅಕ್ರಮ ಸಾಗಿಸುತ್ತಿದ್ದ ಮರಳು ದಂಧೆಕೋರರಿಗೆ ಈ ಅಪ್ಲಿಕೇಶನ್ ಮೂಲಕ ಸೆಂಥಿಲ್ ಅವರು ದೊಡ್ಡ ಹೊಡೆತ ನೀಡಿದ್ದರು. ಆ್ಯಪ್ ರದ್ದುಪಡಿಸಲು ಬಹಳಷ್ಟು ದಂಧೆಕೋರರು ಒತ್ತಡ ಕಿರುಕುಳ ನೀಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಎಂದು ಸೆಂಥಿಲ್ ತಿಳಿಸಿದ್ದರೂ ಮರಳು ಮಾಫಿಯಾದ ಒತ್ತಡಕ್ಕೆ ಮಣಿದೇ ರಾಜೀನಾಮೆ ನೀಡಿದ್ದಾರೆ ಎನ್ನುವ ವಿಚಾರ ಈಗ ಭಾರೀ ಚರ್ಚೆಯಾಗುತ್ತಿದೆ.
Advertisement
ಆಗಸ್ಟ್ 3ರಿಂದ ರಜೆಯಲ್ಲಿ ತೆರಳಿರುವ ಜಿಲ್ಲಾಧಿಕಾರಿ ಸೆಂಥಿಲ್ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಉತ್ತಮ ಕೆಲಸ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಡಿಸಿ ಸಸಿಕಾಂತ್ ಸೆಂಥಿಲ್ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿದೆ ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದು ನೈತಿಕವೆಂದು ನನಗೆ ಅನಿಸುತ್ತಿಲ್ಲ. ಸಂವಿಧಾನದ ಮೂಲ ಆಶಯಗಳು ಕಾಣೆಯಾಗುತ್ತಿದೆ. ಭವಿಷ್ಯದಲ್ಲಿ ಮತ್ತಷ್ಟು ಅಡೆತಡೆ ಬರುವ ಸಾಧ್ಯತೆಯಿದೆ. ಜೊತೆಗೆ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
2009ರ ಬ್ಯಾಚಿನ ಈ ಅಧಿಕಾರಿ 2017 ಅಕ್ಟೋಬರ್ ತಿಂಗಳಿಂದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೂ ಮುನ್ನ ರಾಯಚೂರು ಜಿಲ್ಲಾಧಿಕಾರಿಯಾಗಿ, ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಒ ಆಗಿ ಸಸಿಕಾಂತ್ ಅವರು ಕೆಲಸ ಮಾಡಿದ್ದರು.
ಮರಳು ಆ್ಯಪ್ ವಿಶೇಷತೆ ಏನು?
ಮರಳು ಬೇಕಾದವರು www.dksandbazaar.com ವೆಬ್‍ಸೈಟ್ ಅಥವಾ ಆ್ಯಪ್‍ನ್ನು ಡೌನ್ಲೋಡ್ ಮಾಡಬೇಕು. ನಂತರ ಅದರ ಮುಖಪುಟದಲ್ಲಿ ಇರುವ ಬುಕ್ ಯುವರ್ ಸ್ಯಾಡ್ ಎಂಬವುದರ ಮೇಲೆ ಕ್ಲಿಕ್ ಮಾಡಿ ಮರಳು ಬುಕ್ ಮಾಡಬಹುದು. ಆನ್‍ಲೈನ್ ಮೂಲಕವೇ ಗ್ರಾಹಕರು ಹಣ ಪಾವತಿಸಬೇಕಾಗುತ್ತದೆ. ಹೀಗೆ ಗ್ರಾಹಕರು ಬುಕ್ ಮಾಡಿದ ತಕ್ಷಣ ಮೇಸೆಜ್ ಮೂಲಕ ಒಟಿಪಿ ಮರಳು ಗುತ್ತಿಗೆದಾರರಿಗೆ ಹೋಗುತ್ತದೆ. ಅವರ ಜೊತೆಗೆ ಗ್ರಾಹಕರಿಗೆ ಮತ್ತು ಲಾರಿ ಮಾಲೀಕನಿಗೂ ಒಂದು ಒಟಿಪಿ ಬರುತ್ತದೆ.
ಹೀಗೆ ಗ್ರಾಹಕರು ಬುಕ್ ಮಾಡಿದ ತಕ್ಷಣ ಮೂವರಿಗೂ ಒಟಿಪಿ ಬರುತ್ತದೆ. ಈ ಒಟಿಪಿ ಸಂಖ್ಯೆಯೂ ಬಂದ ನಂತರ ಸಂದೇಶದಲ್ಲಿ ಬಂದಿರುವ ಸ್ಥಳಕ್ಕೆ ಲಾರಿ ಚಾಲಕ ಹೋಗುತ್ತಾನೆ. ಒಟಿಪಿ ಸಂಖ್ಯೆ ನೀಡಿ ಮರಳು ತುಂಬಿಸಿಕೊಂಡು ಬರುತ್ತಾನೆ. ನಂತರ ಚಾಲಕ ಮರಳು ಸಮೇತ ಗ್ರಾಹಕರ ಸ್ಥಳಕ್ಕೆ ಬಂದು ಒಟಿಪಿ ಚೆಕ್ ಮಾಡಿ ಮರಳನ್ನು ಅನ್‍ಲೋಡ್ ಮಾಡಿ ಹೋಗಬೇಕು.
ಇದರ ಜೊತೆಗೆ ಈ ವಿಧಾನದಲ್ಲಿ ಲಾರಿ ಚಾಲಕನ ಮೇಲೆ ನಿಗಾ ಇಡಲು ಅವರ ಲಾರಿಯನ್ನು ಜಿಪಿಎಸ್ ಟ್ರ್ಯಾಕ್ ಮಾಡಲಾಗುತ್ತದೆ. ಮರಳು ತುಂಬಿದ ಲಾರಿ ಯಾವ ಮಾರ್ಗದಿಂದ ಹೋಗುತ್ತಿದೆ? ಎಲ್ಲಿ ಹೋಗುತ್ತಿದೆ ಎಂಬ ಎಲ್ಲಾ ಮಾಹಿತಿಯೂ ಈ ಆ್ಯಪ್ ನಲ್ಲಿ ಲಭ್ಯವಾಗುತ್ತದೆ.