ಭುವನೇಶ್ವರ: ಪರಿಸರ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಆದರೂ ಕೂಡ ಪರಿಸರ ಉಳಿಸಬೇಕಾದ ನಾವು ಪ್ಲಾಸ್ಟಿಕ್, ಕೆಮಿಕಲ್ ಇನ್ನಿತರ ವಸ್ತುಗಳ ಬಳಕೆ, ವಾಯು ಮಾಲಿನ್ಯ, ಜಲ ಮಾಲಿನ್ಯ ಮಾಡಿ ನಿಸರ್ಗದ ಉಸಿರು ಗಟ್ಟಿಸುತ್ತಿದ್ದೇವೆ. ಆದ್ದರಿಂದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಪ್ಲಾಸ್ಟಿಕ್‍ನಿಂದ ಹಾಗೂ ಮರಳಿನಲ್ಲಿ ಗಣಪತಿಯನ್ನು ತಯಾರಿಸಿ ಕಲಾವಿದರೊಬ್ಬರು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.
ಒಡಿಶಾ ಮೂಲದ ಅಂತರಾಷ್ಟ್ರೀಯ ಮಟ್ಟದಲ್ಲಿ ಮರಳು ಕಲಾಕೃತಿ ಮಾಡುವಲ್ಲಿ ಹೆಸರು ಗಳಿಸಿರುವ ಸುದರ್ಶನ್ ಪಟ್ನಾಯಕ್ ಅವರು ಈ ವಿಶೇಷ ಗಣಪನ ಕಲಾಕೃತಿ ಮಾಡಿದ್ದಾರೆ. ಪುರಿ ಬೀಚ್‍ನಲ್ಲಿ ಈ ಅದ್ಭುತ ಗಣಪನ ಕಲಾಕೃತಿಯನ್ನು ಮಾಡಲಾಗಿದೆ. ಬೀಚ್ ಮರಳಿನಲ್ಲಿ ಸಿಕ್ಕ ಸುಮಾರು 1 ಸಾವಿರ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಗಣಪನ ಕಲಾಕೃತಿಯನ್ನು ವಿಶೇಷವಾಗಿ ತಯಾರಿಸಿದ್ದಾರೆ. ಅಲ್ಲದೆ ಅದರ ಮುಂದೆ ಒಮ್ಮೆ ಮಾತ್ರ ಬಳಕೆಗೆ ಬರುವ ಪ್ಲಾಸ್ಟಿಕ್ ಉಪಯೋಗಿಸಬೇಡಿ, ಪರಿಸರವನ್ನು ಉಳಿಸಿ ಎಂದು ಬರೆದು ಒಂದೊಳ್ಳೆ ಸಂದೇಶವನ್ನು ಸಾರಿದ್ದಾರೆ.
Advertisement
Advertisement
ಪ್ರಧಾನಿ ಮೋದಿ ಅವರ ಏಕ-ಬಳಕೆ ಪ್ಲಾಸ್ಟಿಕ್ ತ್ಯಜಿಸಿ ಅಭಿಯಾನದಿಂದ ಪ್ರೇರಿತರಾಗಿ ಈ ಕಲಾಕೃತಿ ತಯಾರಿಸಿದ್ದೇನೆ ಎಂದು ಪಟ್ನಾಯಕ್ ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೋದಿ ಅವರು ರೆಡಿಯೋದಲ್ಲಿ ಪ್ರಸಾರವಾಗುವ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಈ ಅಭಿಯಾದ ಬಗ್ಗೆ ಹೇಳಿದ್ದರು. ಇದನ್ನು ಆಲಿಸಿದ್ದ ಪಟ್ನಾಯಕ್ ಅವರು ಒಂದು ವಿಶೇಷ ಪ್ರಯತ್ನದ ಮೂಲಕ ಸಾರ್ವಜನಿಕರಲ್ಲಿ ಪರಿಸರ ಉಳಿಸಿ ಎಂದು ವಿನಂತಿ ಮಾಡಿದ್ದಾರೆ.
Advertisement
ಬರೋಬ್ಬರಿ 5 ಟನ್ ಮರಳನ್ನು ಬಳಸಿ ಪಟ್ನಾಯಕ್ ಅವರು 10 ಅಡಿ ಎತ್ತರದ ಗಣೇಶನ ಕಲಾಕೃತಿಯನ್ನು ಮಾಡಿದ್ದಾರೆ. ಅದರ ಸುತ್ತ ಸುಮಾರು 1 ಸಾವಿರ ಪ್ಲಾಸ್ಟಿಕ್ ಬಾಟೆಲ್‍ಗಳನ್ನು ಇರಿಸಿ ಏಕ-ಬಳಕೆ ಪ್ಲಾಸ್ಟಿಕ್ ಬಳಸಬೇಡಿ, ಪರಿಸರ ಉಳಿಸಿ ಎಂದು ಸಂದೇಶವನ್ನು ಕೂಡ ಕಲಾಕೃತಿಯ ಎದುರು ಬರೆದಿದ್ದಾರೆ. ಅದ್ಭುತ ಕಲಾಕೃತಿ ಜೊತೆಗೆ ಪರಿಸರ ಜಾಗೃತಿ ಮೂಡಿಸಿ ಪಟ್ನಾಯಕ್ ಅವರು ಜನರ ಮನ ಗೆದ್ದಿದ್ದಾರೆ.