– ಬಿಕ್ಕಿಬಿಕ್ಕಿ ಅತ್ತ ನಟಿ ಕಾರುಣ್ಯಾ ರಾಮ್ ಸಹೋದರಿ
ನಟಿ ಕಾರುಣ್ಯ ರಾಮ್ (Karunya Ram) ತನ್ನ ಸ್ವಂತ ತಂಗಿ ಸಮೃದ್ಧಿ ರಾಮ್ ವಿರುದ್ಧ ಸಿಸಿಬಿಯಲ್ಲಿ 25 ಲಕ್ಷ ವಂಚನೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಬೆಟ್ಟಿಂಗ್ (Betting) ಹುಚ್ಚಿನಿಂದ 25 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಮನೆಯಲ್ಲಿದ್ದ ಚಿನ್ನ, ಹಣವನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾಗಿ ತಂಗಿ ಸಮೃದ್ಧಿ ರಾಮ್ ಜೊತೆ ಪ್ರತಿಭಾ ಶೆಟ್ಟಿ, ಕಪಿಲ್, ಪ್ರಜ್ವಲ್, ರಕ್ಷಿತ್ ಮತ್ತು ಸಾಗರ್ ಎಂಬುವವರ ವಿರುದ್ಧವು ದೂರು ನೀಡಿದ್ದಾರೆ.

ಈ ಸಂಬಂಧ ʻಪಬ್ಲಿಕ್ ಟಿವಿʼ ಜೊತೆಗೆ ಕಾರುಣ್ಯಾ ರಾಮ್ ಸಹೋದರಿ ಸಮೃದ್ಧಿ ರಾಮ್ (Samruddhi Ram) ಮಾತನಾಡಿದ್ದಾರೆ. ಗ್ಯಾಮ್ಲಿಂಗ್‌ನಿಂದ ಹಣ ಕಳೆದುಕೊಂಡಿದ್ದು ನಿಜ, ಇದರಿಂದ ನಾನು ಮನೆ ಬಿಟ್ಟು ಹೊರಗೆ ಬರಬೇಕಾಯ್ತು. ಮೂರು ವರ್ಷಗಳಿಂದ ಫ್ಯಾಮಿಲಿಯಿಂದ ದೂರ ಇದ್ದೀನಿ ಅಂತ ಕಣ್ಣೀರಿಟ್ಟಿದ್ದಾರೆ.
ʻನನಗೆ ಸಾಲ ಕೊಟ್ಟಿರೋರು ಗೊತ್ತಿರುವ ಸ್ನೇಹಿತರೇ. ಪ್ರತಿಯೊಬ್ಬರೂ ಗೊತ್ತೋ ಗೊತ್ತಿಲ್ಲದೇ ತಪ್ಪು ಮಾಡ್ತಾರೆ, ಅದೇ ರೀತಿ ನನ್ ಲೈಫಲ್ಲೂ ಒಂದು ಮಿಸ್ಟೇಕ್ ಆಗಿದೆ. ಅವರ ಆರೋಪಗಳ ಬಗ್ಗೆ ಮಾತನಾಡಬಾರದು ಅಂತ 3 ವರ್ಷ ಮನೆಯಿಂದ ದೂರ ಇದ್ದೆ. ನಾನು ಯಾವುದರಲ್ಲಿ ಹಣ ಕಳ್ಕೊಂಡಿದ್ದೀನಿ, ಕಳ್ಕೋತಿದ್ದೀನಿ ಅಂತ ಎಲ್ಲರಿಗೂ ಗೊತ್ತಿತ್ತು. 10% – 5% ಬಡ್ಡಿಗೆ ಸಾಲ ಪಡೆದುಕೊಂಡಿದ್ದೆ. ಪ್ರತಿಭಾಗೆ ಇಂಟ್ರೆಸ್ಟ್ ತಪ್ಪದೇ ಕೊಡ್ತಿದ್ದೆ. ಆದ್ರೆ ನಾನು ದುಡ್ಡು ಕೊಡದಿದ್ದರೂ ಪರ್ವಾಗಿಲ್ಲ. ಬೀದಿಗೆ ಬರಬೇಕು ಅನ್ನದಷ್ಟೇ ಅವರ ಉದ್ದೇಶ ಆಗಿತ್ತು ಅಂತ ಹೇಳಿದ್ರು.

2023ರಲ್ಲಿ ನಾನು ಹಣ ಇಸ್ಕೊಂಡಿದ್ದೆ. ಮೊದಲೇ ದೂರು ಕೊಡಬೇಕಿತ್ತು, ಈಗ ಯಾಕೆ ಬಂದಿದ್ದಾರೆ? ಪ್ರತಿಭಾ ನನ್ನ ಕಾಲೇಜ್‌ಮೇಟ್, 2 ಲಕ್ಷ ಸಾಲ ತೀರಿಸಿದ್ದೆ. ಆದ್ರೆ 25 ಲಕ್ಷ ಹಣ ಪಡ್ಕೊಂಡಿದ್ದೀನಾ, ಇಲ್ವಾ? ಅನ್ನೋದನ್ನ ನೋಡಬೇಕು. ನಾನು ಯಾವತ್ತು ಫ್ಯಾಮಿಲಿನ, ಅಕ್ಕನ್ನ ಬಿಟ್ಟು ಇದ್ದವಳೇ ಅಲ್ಲ. ಗ್ಯಾಮ್ಲಿಂಗ್‌ನಲ್ಲಿ ಹಣ ಕಳೆದುಕೊಂಡು 3 ವರ್ಷಗಳಿಂದ ಮನೆಯಿಂದ ಆಚೆ ಇದ್ದೀನಿ. ಈಗಲೂ ಬೀದಿಯಲ್ಲೇ ನಿಂತು ಮಾತನಾಡ್ತಿದ್ದೀನಿ ಅಂತ ಕಣ್ಣೀರು ಹಾಕಿದ್ರು.
ಪ್ರತಿಭಾ, ಕಪಿಲ್ ಅಂತ ಯಾರ‍್ಯಾರಿದ್ದಾರೆ ಅವರಿಗೆ ನಾನು ದುಡ್ಡು ಕೊಡೋದು ಬೇಕಾಗಿರಲಿಲ್ಲ. ನನ್ನ ಮತ್ತು ನನ್ನ ಅಕ್ಕನ ಮರ್ಯಾದೆ ತೆಗೆಯೋದ್ರಲ್ಲೇ ಅವರಿಗೆ ಮಜಾ ಇತ್ತು. ಅದಕ್ಕಾಗಿ ಬೇರೆ ಬೇರೆ ಪ್ಲ್ಯಾನ್ ಮಾಡ್ತಿದ್ರು. ಹೇಳಲು ಸಾಧ್ಯವಾಗದಷ್ಟು ಹಲ್ಕಾ ಭಾಷೆಯಲ್ಲಿ ಮೆಸೇಜ್ ಮಾಡ್ತಿದ್ರು. ನಾನು ರಿಪ್ಲೇ ಮಾಡುವಷ್ಟರಲ್ಲಿ ಬ್ಲಾಕ್ ಮಾಡಿಕೊಳ್ತಿದ್ರು, ಅದೆಲ್ಲವೂ ನನ್ನ ಬಳಿ ಇದೆ, ತೆಗೆದುಕೊಂಡು ಬರ್ತೀನಿ ಎಂದರು.

ನಾನು ಹಿಂದೆಯೇ ಕಂಪ್ಲೆಂಟ್ ಕೊಡಬೇಕಾಗಿತ್ತು. ಆದ್ರೆ ನನ್ನ ಅಕ್ಕನ ಹೆಸರು ಮಧ್ಯ ಬರುತ್ತೆ ಅಂತ ನಾನು ಎಲ್ಲಾ ನೋವನ್ನ ಸಹಿಸಿಕೊಂಡೆ. ನಾನ್ ಎಲ್ಲೇ ಕೆಲಸಕ್ಕೆ ಹೋದ್ರೂ ಹಾಳು ಮಾಡ್ತಿದ್ರು, ಲಕ್ಷ ಲಕ್ಷ ಬಡ್ಡಿ ಕೊಡು ಅಂತ ಕಿರುಕುಳ ಕೊಡ್ತಿದ್ರು. ಒಟ್ಟಿನಲ್ಲಿ ನನ್ನಕ್ಕನ ಮರ್ಯಾದೆ ತೆಗೀಬೇಕು ಅನ್ನೋದು ಅವರ ಉದ್ದೇಶ ಅಷ್ಟೇ. ಅದಕ್ಕಾಗಿ ನನ್ನ ಬಗ್ಗೆ ಸುಳ್ಳು ಆರೋಪಗಳನ್ನ ಮಾಡಿದ್ದಾರೆ. ಇವರಿಂದ ಬದುಕೋಕೆ ಆಗಲ್ಲ, ನಾನೊಬ್ಬಳೇ ತಪ್ಪು ಮಾಡಿದ್ದೀನಿ ಅನ್ನೋತರಹ ಮಾಡಿ, ಬದುಕೋಕೆ ಆಗದಂತೆ ಮಾಡ್ತಿದ್ದಾರೆ ಎಂದು ಬಿಕ್ಕಿ ಬಿಕ್ಕಿ ಅತ್ತರು.

