ಚಂದನ್ ಶೆಟ್ಟಿ (Chandan Shetty) ನಾಯಕನಾಗಿ ನಟಿಸಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಚಿತ್ರ ಅತ್ಯಂತ ವೇಗವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಐವತ್ತು ದಿನಗಳ ಕಾಲ ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣ ಸಂಪೂರ್ಣಗೊಳಿಸಿಕೊಂಡಿದೆ. ಹೀಗೆ ಕುಂಬಳಕಾಯಿ ಒಡೆದ ಬಳಿಕ ಪತ್ರಿಕಾಗೋಷ್ಠಿಯೊಂದನ್ನು ಚಿತ್ರತಂಡ ಆಯೋಜಿಸಿತ್ತು. ಅಚ್ಚುಕಟ್ಟಾಗಿ ನಡೆದ ಈ ಪತ್ರಿಕಾ ಗೋಷ್ಠಿಯಲ್ಲಿ ಒಂದಿಡೀ ಚಿತ್ರತಂಡ ಹುರುಪಿನಿಂದ ಭಾಗಿಯಾಗಿತ್ತು. ವಿಶೇಷವೆಂದರೆ, ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಕಲಾವಿದರೇ ಆ ಬಗೆಗಿನ ಬೆರಗು ಮೂಡಿಸುವ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Advertisement
ಅರುಣ್ ಅಮುಕ್ತ (Arun Amukta) ನಿರ್ದೇಶನದ ಈ ಸಿನಿಮಾ ಹೆಸರೇ ಸೂಚಿಸುವಂತೆ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರ ಜಗತ್ತಿನಲ್ಲಿ ಕದಲುವ ಕಥಾನಕವನ್ನೊಳಗೊಂಡಿದೆ. ಪ್ರಸ್ತಿತ ಸನ್ನಿವೇಶದಲ್ಲಿನ ಯುವ ಸಮುದಾಯದ ಮನಃಸ್ಥಿತಿಗೆ ಕನ್ನಡಿ ಹಿಡಿಯುವಂಥಾ ಯೂಥ್ ಫುಲ್ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ನಟನೆಯಲ್ಲಿ ಬ್ಯುಸಿಯಾಗುತ್ತಿರುವ ಪ್ರಶಾಂತ್ ಸಂಬರ್ಗಿ ಇಲ್ಲಿ ರಗಡ್ ಲುಕ್ಕಿನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರಂತೆ. ಸದರಿ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದ ಸಂಬರ್ಗಿ (Prasanth Sambaragi) ತಮ್ಮ ಪಾತ್ರದ ಬಗ್ಗೆ ಕೆಲ ಅಂಶಗಳನ್ನು ಬಿಚ್ಚಿಡುತ್ತಲೇ, ನಿರ್ದೇಶಕ ಅರುಣ್ ಅಮುಕ್ತ ಅವರ ಕಾರ್ಯವೈಖರಿ ಮತ್ತು ನಿರ್ಮಾಪಕರ ಸಿನಿಮಾ ಪ್ರೇಮವನ್ನು ಕೊಂಡಾಡಿದ್ದಾರೆ.
Advertisement
Advertisement
ಅಂದಹಾಗೆ, ಇಲ್ಲಿ ಪ್ರಶಾಂತ್ ಸಂಬರ್ಗಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರತಂಡದ ಸಿನಿಮಾ ಪ್ರೇಮ ಕಂಡು ಅವರು ಖುಷಿಕೊಂಡಿದ್ದಾರೆ. ಅದರಲ್ಲಿಯೂ ನಿರ್ಮಾಪಕರುಗಳು ಯಾವುದಕ್ಕೂ ಕಡಿಮೆಯಾಗದಂತೆ ನೋಡಿಕೊಂಡು ಕಾರ್ಪೋರೇಟ್ ಶೈಲಿಯಲ್ಲಿ ಈ ಸಿನಿಮಾವನ್ನು ಪೊರೆದ ರೀತಿಗೆ ಸಂಬರ್ಗಿ ಮೆಚ್ಚುಗೆ ಸೂಚಿಸಿದ್ದಾರೆ. ಇಷ್ಟಲ್ಲದೇ ಈ ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಕಲಾವಿದರೆಲ್ಲರೂ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳುತ್ತಾರೆಂಬ ಭರವಸೆಯನ್ನೂ ಕೂಡಾ ಪ್ರಶಾಂತ್ ಸಂಬರ್ಗಿ ವ್ಯಕ್ತಪಡಿಸಿದ್ದಾರೆ.
Advertisement
ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.