– ದೋಸ್ತಿಯಿಂದ ಇಂದು ಕೃತಜ್ಞತಾ ಸಮಾವೇಶ
ಬಳ್ಳಾರಿ: ಲೋಕಸಭೆ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಉಗ್ರಪ್ಪ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿಂದು ಜೆಡಿಎಸ್, ಕಾಂಗ್ರೆಸ್ ನಾಯಕರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇಂದು ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಉಗ್ರಪ್ಪ ಗೆಲುವಿಗೆ ಕಾಂಗ್ರೆಸ್, ಜೆಡಿಎಸ್ ನಿಂದ ಕೃತಜ್ಞತಾ ಸಮಾವೇಶ ಏರ್ಪಡಿಸುವ ಮೂಲಕ ಮೈತಿ ಸರ್ಕಾರದ ನಾಯಕರಿಂದ ಮತ್ತೆ ಶಕ್ತಿ ಪ್ರದರ್ಶನ ನಡೆಯಲಿದೆ.
Advertisement
ರಾಷ್ಟ್ರ ರಾಜಕಾರಣವೇ ಬಳ್ಳಾರಿಯತ್ತ ತಿರುಗಿ ನೋಡುವಂತೆ ಮಾಡಿದ ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ಮೈತ್ರಿಕೂಟದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ 2 ಲಕ್ಷದ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ ಇತಿಹಾಸ ಬರೆದಿದ್ದಾರೆ. ಹೀಗಾಗಿ ನಾವೆಲ್ಲ ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಾರಲು ಬಳ್ಳಾರಿಯಲ್ಲಿ ಕಾಂಗ್ರೆಸ್- ಜೆಡಿಎಸ್ ನಾಯಕರು ಜಂಟಿ ಕೃತಜ್ಞತಾ ಸಮಾವೇಶ ಆಯೋಜನೆ ಮಾಡಿದ್ದಾರೆ. ಈ ಮೂಲಕ ಬಳ್ಳಾರಿ ಕಣ ಮತ್ತೆ ಶಕ್ತಿ ಪ್ರದರ್ಶನದ ವೇದಿಕೆಯಾಗುತ್ತಿದೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
Advertisement
ಇಂದು ಸಂಜೆ 4 ಗಂಟೆಗೆ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕೃತಜ್ಞತಾ ಸಮಾವೇಶಕ್ಕೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ , ಸಚಿವ ಡಿಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಶಾಸಕರು, ಸಂಸದರ ದಂಡೇ ಸಮಾವೇಶದಲ್ಲಿ ಭಾಗಿಯಾಗಲಿದೆ.
Advertisement
Advertisement
ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜಿಲ್ಲೆಯ ಜನತೆ ನಿರೀಕ್ಷೆಗೂ ಮೀರಿ ಮತ ನೀಡುವ ಮೂಲಕ ಜಯಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭದ ಮೂಲಕ ಮತ್ತೊಮ್ಮೆ ಗುರು ಶಿಷ್ಯರು, ಹಾಲಿ, ಮಾಜಿ ಸಿಎಂಗಳು ಸಮಾಗಮವಾಗಲಿದ್ದಾರೆ. ಸಮಾವೇಶದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 5 ಡಿವೈಎಸ್ಪಿ, 15 ಸಿಪಿಐ, 42ಪಿಎಸ್ ಐ, 100 ಎಎಸ್ ಐ, 400 ಸಿಬ್ಬಂದಿ ನಿಯೋಜಿಸಲಾಗಿದೆ.
ಪಾರ್ಕಿಂಗ್ ಗಾಗಿ ಪ್ರವಾಸಿ ಮಂದಿರ, ಮುನ್ಸಿಪಲ್ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಒಟ್ಟು ನಾಲ್ಕು ಪ್ರವೇಶ ದ್ವಾರ ವ್ಯವಸ್ಥೆ ಮಾಡಲಾಗಿದೆ ಅಂತ ಎಸ್ ಪಿ ಅರುಣ್ ರಂಗರಾಜನ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಉಗ್ರಪ್ಪ ಗೆಲುವಿಗೆ ಜನರಿಗೆ ಕೃತಜ್ಞತೆ ಹೇಳುವ ನೆಪದಲ್ಲಿ ಮತ್ತೊಮ್ಮೆ ದೋಸ್ತಿಗಳ ಶಕ್ತಿ ಪ್ರದರ್ಶನ ನಡೆಸುವ ಮೂಲಕ ಮುಂದೆಯೂ ಬಳ್ಳಾರಿ ಕೋಟೆಯನ್ನ ಕೈ ನಾಯಕರು ವಶಪಡಿಸಿಕೊಳ್ಳಲು ಈಗಿನಿಂದಲೇ ಸಿದ್ಧತೆಗೆ ಮುಂದಾಗಿರುವುದು ವಿಶೇಷವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv