ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ನನ್ನಮ್ಮ ಸೂಪರ್ ಸ್ಟಾರ್ ಶೋನ ಸ್ಪರ್ಧಿ ಸಮನ್ವಿ ನೆನೆದು ನಟ ಸೃಜನ್ ಲೋಕೇಶ್ ಭಾವುಕರಾದರು.
ಪುಟಾಣಿ ಸಾವಿನ ಸುದ್ದಿ ಕೇಳಿ ಮನಸ್ಸು ತುಂಬಾ ಡಿಸ್ಟರ್ಬ್ ಆಗಿದೆ. ರಾತ್ರಿ ಕೂಡ ನಿದ್ರೆ ಮಾಡಲಾಗಲಿಲ್ಲ. ಕಣ್ಣು ಮುಚ್ಚಿದರೂ ಆ ಮಗುವಿನ ಬಿಂಬವೇ ಬರುತ್ತಿತ್ತು. ಇಂತಹ ಸನ್ನಿವೇಶಗಳನ್ನು ನೋಡಿದಾಗ ನಮ್ಮ ಮಕ್ಕಳ ವಿಚಾರದಲ್ಲೂ ನಾವು ಜಾಗೃತರಾಗಬೇಕು ಎನಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು
ಮುದ್ದಾದ ಮಗು ಅದು. ಕಾರ್ಯಕ್ರಮದಲ್ಲಿ ಬಹಳ ಖುಷಿ ಖುಷಿಯಾಗಿ ಇರುತ್ತಿದ್ದಳು. ಅಂಥ ಮಗು ಅಪಘಾತದಲ್ಲಿ ಸಾವನ್ನಪ್ಪಿದ್ದು ನಿಜಕ್ಕೂ ಘೋರ. ಶತ್ರುಗಳಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದು ದುಃಖಿಸಿದರು.
ಪರದೆಯ ಮುಂದೆ ಚೆನ್ನಾಗಿ ಅಭಿನಯಿಸುತ್ತಿದ್ದ ಸಮನ್ವಿ, ತುಂಬಾ ಪ್ರತಿಭಾವಂತೆ. ಮುಗ್ದತೆ, ಪ್ರೀತಿ ಎಲ್ಲವನ್ನೂ ತುಂಬಿಕೊಂಡಿದ್ದ ಮಗು. ಮುಂದೆ ದೊಡ್ಡ ಸ್ಟಾರ್ ಆಗುತ್ತಾಳೆ ಎನ್ನುತ್ತಿದ್ದೆವು. ಕಾರ್ಯಕ್ರಮ ಮುಗಿಸಿ ಹೊರಬಂದಾಗ ನನ್ನನ್ನು ಜಡ್ಜ್ ಬಾಯ್ ಅಂತ ಪ್ರೀತಿಯಿಂದ ಕರೆಯುತ್ತಿದ್ದಳು ಎಂದು ನೆನೆದರು. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ
ನಮ್ಮ ಜೀವನ ನಮ್ಮ ಕೈಯಲ್ಲಿಲ್ಲ ಎನ್ನುವಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಕೊರೊನಾ ವೈರಸ್ ಬಂದಾಗಲೂ ನಮ್ ಜೀವನ ನಮ್ಮ ಕೈಯಲ್ಲಿಲ್ಲ. ವಾಹನ ಓಡಿಸುತ್ತಿದ್ದಾಗಲೂ ಹೀಗೆಯೇ ಅಂದುಕೊಳ್ಳಬೇಕು. ಅಪ್ಪು ಅವರು ತೀರಿಕೊಂಡ ಸುದ್ದಿಯನ್ನು ಇನ್ನೂ ಅರಗಿಸಿಕೊಳ್ಳಲು ಆಗಿಲ್ಲ. ಇದರ ಮಧ್ಯೆಯೇ ಮಗು ಸಾವನ್ನಪ್ಪಿದ ಸುದ್ದಿ ಬಂದು, ಬರೆ ಮೇಲೆ ಬರೆ ಹಾಕಿದಂತಾಗಿದೆ ಎಂದು ವಿಷಾದಿಸಿದರು.
ಇಂತಹ ಸಂದರ್ಭದಲ್ಲಿ ಸಮನ್ವಿ ತಾಯಿ ಅಮೃತಾ ನಾಯ್ಡು ಪರಿಸ್ಥಿತಿ ನೆನೆದರೆ ನೋವಾಗುತ್ತದೆ. ಅಮೃತಾ ಮೊದಲು ಒಂದು ಮಗುವನ್ನು ಕಳೆದುಕೊಂಡಿದ್ದರು. ನಂತರ ಸಮನ್ವಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದರು. ಸಮನ್ವಿ ಒಂಟಿಯಾಗುತ್ತಾಳೆ ಎಂಬ ಕಾರಣಕ್ಕೆ ಮತ್ತೊಂದು ಮಗು ಹೊಂದಲು ಯೋಜಿಸಿದ್ದೇವೆ ಅಂತ ಅಮೃತ ಹೇಳುತ್ತಿದ್ದಳು. ಆ ದಂಪತಿ ಈ ನೋವನ್ನು ಹೇಗೆ ಸಹಿಸಿಕೊಳ್ಳುತ್ತಾರೋ ಎಂದು ನೊಂದು ನುಡಿದರು.