– ಕರಾವಳಿ ಗ್ರಾಮದ ಗದ್ದೆಗಳಲ್ಲಿ ಉಪ್ಪು ಮಿಶ್ರಿತ ನೀರು
– ಸಾವಿರಾರು ಎಕ್ರೆ ರೈತರ ಭೂಮಿ ಜಲಾವೃತ
ಕಾರವಾರ: ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಬಿಸಿ ಗಾಳಿ ಬೀಸತೊಡಗಿದೆ. ಈ ಮಧ್ಯೆ ಕಳೆದ ಮೂರು ದಿನದಿಂದ ಕಾರವಾರದ(Karawara) ಕಿನ್ನರ ಗ್ರಾಮದ ಗದ್ದೆಗಳಿಗೆ ಏಕಾಏಕಿ ಕಾಳಿ ನದಿಯ (Kali River) ಉಪ್ಪು ಮಿಶ್ರಿತ ನೀರು ಬಂದು ಸೇರುತ್ತಿದ್ದು ಕೃತಕ ಪ್ರವಾಹವನ್ನೇ ಸೃಷ್ಟಿಸಿದೆ.
Advertisement
ಸಾವಿರಾರು ಎಕರೆ ಕೃಷಿ ಭೂಮಿ ಇದೀಗ ಕಾಳಿ ನದಿಯ ಉಪ್ಪು ಮಿಶ್ರಿತ ನೀರಿನಿಂದ ಹಾನಿಯಾಗಿದ್ದು ರೈತ ಬೆಳೆದ ತರಕಾರಿ, ಭತ್ತಗಳು ನೀರುಪಾಲಾಗಿದ್ದರೆ ಕುಡಿಯಲು ಬಳಸುವ ಬಾವಿ ನೀರು ಸಹ ಉಪ್ಪು ಮಿಶ್ರಿತವಾಗಿ ಕುಡಿಯಲು ಈಗ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Advertisement
ಕಾಳಿ ನದಿಯ ನೀರು ಏಕಾಏಕಿ ಜನವಸತಿ ಪ್ರದೇಶಕ್ಕೆ ನುಗ್ಗಿದ್ದರಿಂದ ಜನ ಭಯಭೀತರಾದರೆ ವಿಜ್ಞಾನಿಗಳು ಇದೊಂದು ನೈಸರ್ಗಿಕ ಪ್ರಕ್ರಿಯೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು| ನೇಣು ಬಿಗಿದುಕೊಂಡು ಮಂಗಳೂರು ಮೂಲದ ನವವಿವಾಹಿತೆ ಆತ್ಮಹತ್ಯೆ
Advertisement
Advertisement
ಪಬ್ಲಿಕ್ ಟಿವಿಗೆ ಕಾರವಾರದ ಕಡಲ ಜೀವಶಾಸ್ತ್ರಜ್ಞ ಜಗನ್ನಾಥ್ ರಾಥೋಡ್ ಪ್ರತಿಕ್ರಿಯಿಸಿ, ಪ್ರತಿ ಬಾರಿ ಸಮುದ್ರದಲ್ಲಿ ಭರತ-ಇಳಿತ ಎಂಬ ನೈಸರ್ಗಿಕ ಕ್ರಿಯೆ ನಡೆಯುತ್ತದೆ. ಅಮಾವಾಸ್ಯೆ, ಹುಣ್ಣಿಮೆ ಸಂದರ್ಭದಲ್ಲಿ ಭೂಮಿಗೆ ಚಂದ್ರ ಹತ್ತಿರವಾಗುತ್ತಾನೆ. ಆಗ ಗುರುತ್ವಾಕರ್ಷಣೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಭರತ – ಇಳಿತ ಎಂಬ ನೈಸರ್ಗಿಕ ಪ್ರಕ್ರಿಯೆ ಸಮುದ್ರದಲ್ಲಿ ನಡೆಯುತ್ತದೆ. ಮೊನ್ನೆ ಶಿವರಾತ್ರಿ ಸಂದರ್ಭದಲ್ಲಿ ಅಮವ್ಯಾಸೆ ಬಂದಿತ್ತು. ಅಂದಿನಿಂದ ಭರತದ ಪ್ರಮಾಣ ಗಣನೀಯ ಏರಿಕೆ ಕಂಡಿದೆ. ಮಾರ್ಚ್ 1 ಮತ್ತು 2 ರಂದು ಸಮುದ್ರದ ಅಲೆಯ ಪ್ರಮಾಣ 3 ಮೀಟರ್‌ಗಿಂತಲೂ ಹೆಚ್ಚಾಗಿತ್ತು. ಇದರಿಂದ ಸಮುದ್ರದ ನೀರು ನದಿ ನೀರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇರಿ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ ಎಂದು ತಿಳಿಸಿದರು.
ಏಕಾಏಕಿ ಕೃಷಿ ಭೂಮಿಗೆ ನೀರು ನುಗ್ಗಿದ್ದರಿಂದ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಮುದ್ರದ ನೀರು ಹೆಚ್ಚಾಗಿ ಕಾಳಿ ನದಿಗೆ ಸೇರಿದ್ದರಿಂದ ನದಿ ಪಾತ್ರದ ಸುತ್ತಮುತ್ತ ಪ್ರದೇಶಕ್ಕೆ ನೀರು ನುಗ್ಗಿದ್ದು ಯಾವುದೇ ಸಮಸ್ಯೆಯಾಗದು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಪೂರ್ಣಿಮಾ ಹೇಳಿದ್ದಾರೆ.
ಎಲ್ಲೆಲ್ಲಿ ನೀರು ನುಗ್ಗಿದೆ?
ಕೇವಲ ಕಿನ್ನರ ಗ್ರಾಮದಲ್ಲಿ ಅಲ್ಲದೇ ಸಮುದ್ರ ತೀರಭಾಗದ ಚಂಡಿಯಾ, ಚಿತ್ತಾಕುಲ, ಅಮದಳ್ಳಿಯಲ್ಲಿ ಅಲ್ಲದೇ ಕುಮಟ, ಅಂಕೋಲ ತಾಲೂಕಿನ ಭಾಗದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟಿನಲ್ಲಿ ಬಿಸಿಲ ಬೇಗೆಯಲ್ಲಿ ಕರಾವಳಿಯ ಜನ ಬೆಂದಿರುವಾಗಲೇ ಮಳೆ, ಗಾಳಿ ಇಲ್ಲದೇ ಕಾಳಿ ನದಿ ಪ್ರವಾಹ ಜನರನ್ನು ಬೆಚ್ಚು ಬೀಳಿಸಿದೆ. ಆರು ವರ್ಷಗಳ ನಂತರ ಇದೀಗ ಸಮುದ್ರದ ನೈಸರ್ಗಿಕ ಪ್ರಕ್ರಿಯೆಯ ಪರಿಣಾಮ ಕರಾವಳಿ ಗ್ರಾಮದಲ್ಲಿ ರೈತರು ಬೆಳೆದ ಬೆಳೆ ನದಿಪಾಲಾಗಿದೆ.