ಅಸಾರಾಂ ಬಾಪು ಪಕ್ಕದಲ್ಲಿರುವ ಕೋಣೆಯಲ್ಲಿ ಮಲಗಲಿದ್ದಾರೆ ಸಲ್ಮಾನ್-ಕೋರ್ಟ್ ನಲ್ಲಿ ಕಣ್ಣೀರಿಟ್ಟ ಅಲ್ವಿರಾ

Public TV
2 Min Read
salman khan jail 11

ಜೋಧಪುರ: ರೀಲ್ ಲೈಫ್‍ನಲ್ಲಿ ಸೂಪರ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡರೂ, ರಿಯಲ್ ಲೈಫ್‍ನಲ್ಲಿ ಬ್ಯಾಡ್‍ಬಾಯ್ ಅಂತಲೇ ಕುಖ್ಯಾತಿ ಪಡೆದ ಸಲ್ಮಾನ್ ಖಾನ್ ಈಗ ಜೈಲುಪಾಲಾಗಿದ್ದಾರೆ.

20 ವರ್ಷಗಳ ಹಿಂದೆ ಅಂದರೆ 1998ರಲ್ಲಿ `ಹಮ್ ಸಾಥ್ ಸಾಥ್ ಹೈ’ ಅನ್ನೋ ಚಿತ್ರದ ಶೂಟಿಂಗ್ ವೇಳೆ ಅವಸಾನದ ಅಂಚಿನಲ್ಲಿರುವ ಅಪರೂಪದ ಪ್ರಭೇದ ಕೃಷ್ಣಮೃಗವನ್ನ ಬೇಟೆಯಾಡಿದ ಪ್ರಕರಣದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 5 ವರ್ಷ ಶಿಕ್ಷೆ, 10 ಸಾವಿರ ದಂಡಕ್ಕೀಡಾಗಿದ್ದಾರೆ. 10 ಸಾವಿರ ಅವರಿಗೆ ಜುಜುಬಿ ಅನಿಸಿದರೂ 5 ವರ್ಷದ ಸೆರೆಮನೆ ವಾಸ ಮಾತ್ರ ಸಲ್ಮಾನ್ ಸಿನಿ ಜೀವನಕ್ಕೆ ಘಾಸಿಗೊಳಿಸಿದೆ.

ಜೋಧಪುರ ಸಿಜೆಎಂ ಕೋರ್ಟ್‍ನಲ್ಲಿ ಬೆಳಗ್ಗೆ 11.15ಕ್ಕೆ ಅಂತಿಮ ತೀರ್ಪು ಪ್ರಕಟಿಸುವ ಪ್ರಕ್ರಿಯೆ ಆರಂಭವಾಯ್ತು. 11.30ರ ವೇಳೆಗೆ ಸಲ್ಮಾನ್ ಖಾನ್ ದೋಷಿ ಅಂತಲೂ ಉಳಿದ ಆರೋಪಿಗಳಾದ ಸೈಫ್ ಅಲಿಖಾನ್, ಟಬು, ನೀಲಂ, ಸೋನಾಲಿ ಅವರನ್ನು ನಿರ್ದೋಷಿಗಳೆಂದು ಜಡ್ಜ್ ದೇವ್ ಕುಮಾರ್ ಖತ್ರಿ ತೀರ್ಪು ಪ್ರಕಟಿಸಿದರು.

ಶಿಕ್ಷೆ ಪ್ರಮಾಣ ಎಷ್ಟು ಅನ್ನೋದರ ಬಗ್ಗೆ ಗೊಂದಲ-ಜಿಜ್ಞಾಸೆ ಮೂಡಿತ್ತು. 12 ಗಂಟೆ ಸುಮಾರಿಗೆ ಎಲ್ಲಾ ಮಾಧ್ಯಮಗಳಲ್ಲೂ 2 ವರ್ಷ ಶಿಕ್ಷೆ, ಸಲ್ಮಾನ್‍ಗೆ ಬೇಲ್ ಸಿಗತ್ತೆ ಅಂತಲೇ ಸುದ್ದಿ ಪ್ರಸಾರವಾಯ್ತು. ಆದ್ರೆ, ಇದೆಲ್ಲಾ ಸುಳ್ಳಾಯ್ತು. ನಂತರ 2.15ರ ಸುಮಾರಿಗೆ 5 ವರ್ಷಗಳ ಶಿಕ್ಷೆ ಪ್ರಕಟಿಸಿದ ಜಡ್ಜ್, ಎಲ್ಲ ಗೊಂದಲಗಳಿಗೂ ಕೊನೆ ಹಾಡಿದರು.

ಕೋರ್ಟ್ ಹಾಲ್‍ನಲ್ಲಿ ಸಹೋದರಿ ಅಲ್ವಿರಾ ಹಾಗು ಕುಟುಂಬಸ್ಥರು ಸಲ್ಮಾನ್‍ಗೆ ಮೊದಲಿನಿಂದಲೂ ಧೈರ್ಯ ತುಂಬುತ್ತಿದ್ದರು. ಆದ್ರೆ, ದೋಷಿ ಅಂತ ಆದೇಶ ಬರುತ್ತಿದ್ದಂತೆಯೇ ಸಲ್ಮಾನ್ ಕಳಾಹೀನರಾದರು. ಆದರೂ, ಶಿಕ್ಷೆ ಕಡಿಮೆ ಇರಲಿದೆ ಧೃತಿಗೆಡಬೇಡ ಅಂತ ಮಾನಸಿಕಸ್ಥೈರ್ಯ ತುಂಬುವ ಕಾರ್ಯ ಮಾಡಿದರು.

ಸಲ್ಮಾನ್ ಪರ ವಕೀಲರು ಸಹ, ನ್ಯಾಯಾಧೀಶರಿಗೆ 3 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಮನವಿ ಮಾಡಿದರು. ಆದ್ರೆ, ಪ್ರಾಸಿಕ್ಯೂಷನ್ ಮಾತ್ರ 6 ವರ್ಷ ಶಿಕ್ಷೆ ವಿಧಿಸಲು ಮನವಿ ಮಾಡಿತ್ತು. ಎರಡು ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್, 5 ವರ್ಷ ಶಿಕ್ಷೆ ಪ್ರಕಟಿಸಿತು.

ಸಲ್ಮಾನ್ ನಿಂತಲ್ಲೇ ಅರೆಕ್ಷಣ ನಿಂತರೆ ಸಹೋದರಿ ಅಲ್ವಿರಾ ಕಣ್ಣೀರು ಸುರಿಸಿದರು. ಕೆಲಕ್ಷಣಗಳ ನಂತರ ಕೋರ್ಟ್‍ನಲ್ಲೇ ಅರೆಸ್ಟ್ ಮಾಡಿದ ಪೊಲೀಸರು, ಸಲ್ಮಾನ್‍ಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಸೆಂಟ್ರಲ್ ಜೈಲ್‍ಗೆ ಕರೆದೊಯ್ದರು. ಕೋರ್ಟ್‍ಹಾಲ್‍ನಲ್ಲಿ ಸಲ್ಮಾನ್ ಅಭಿಮಾನಿಗಳು ತುಂಬಿ ಹೋಗಿದ್ದರು.

ಅಪ್ರಾಪ್ತೆಯರ ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಅಸಾರಾಂ ಬಾಪು ಪಕ್ಕದಲ್ಲೇ ಸಲ್ಮಾನ್ ಕೋಣೆ ಇದೆ. ಸದಾ ಎಸಿ ಕಾರ್, ಎಸಿ ರೂಮ್‍ಗಳಲ್ಲೇ ತಿರುಗಾಡುತ್ತಿದ್ದ ಸಲ್ಮಾನ್ ಇವತ್ತು ಜೋಧಪುರದ ಸೆಂಟ್ರಲ್ ಜೈಲಿನಲ್ಲಿ ಸೆಕೆಯಲ್ಲಿ ರಾತ್ರಿ ಕಳೆಯಬೇಕಾಗಿದೆ.

ಜೋಧಪುರದಲ್ಲಿ ಸದ್ಯಕ್ಕೆ ಇವತ್ತು 39ರಿಂದ 40 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ. ಜಾಮೀನಿಗಾಗಿ ಮನವಿ ಸಲ್ಲಿಸಿದ್ದು ನಾಳೆ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಬರಲಿದೆ. ಹಿಟ್ ಅಂಡ್ ರನ್ ಕೇಸ್‍ನಲ್ಲಿ ಬಚಾವ್ ಆಗಿದ್ದ ಸಲ್ಮಾನ್ ಬೇಟೆ ಕೇಸಲ್ಲಿ ಅಂದರ್ ಆಗಿದ್ದಾರೆ. ಈಗ ಸೇವ್ ಸಲ್ಮಾನ್ ಎಂದು ಬಾಲಿವುಡ್ ವಲಯದಿಂದ ಅಭಿಯಾನ ಆರಂಭವಾಗಿದೆ.

 

 

Share This Article
Leave a Comment

Leave a Reply

Your email address will not be published. Required fields are marked *