ಮುಂಬೈ: ವಯಸ್ಸು ಹೆಚ್ಚು ಆಗುತ್ತಾ ಇರೋದರಿಂದ ಸಹಜವಾಗಿ ನನಗೆ ಭಯ ಆಗುತ್ತಿದೆ ಎಂದು ಬಾಲಿವುಡ್ ಭಾಯಿಜಾನ್, ದಬಾಂಗ್ ಹೀರೋ 53 ವರ್ಷದ ಸಲ್ಮಾನ್ ಖಾನ್ ಹೇಳಿದ್ದಾರೆ.
ಖಾಸಗಿ ಮ್ಯಾಗಜೀನ್ ಒಂದಕ್ಕೆ ಸಂದರ್ಶನ ನೀಡಿರುವ ಸಲ್ಮಾನ್ ಖಾನ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ಹಲವು ವರ್ಷಗಳಿಂದ ಆ್ಯಕ್ಷನ್ ಸೀನ್ ಮಾಡಿಕೊಂಡು ಬಂದಿದ್ದರಿಂದ ನನ್ನ ದೇಹ ಒಗ್ಗಿಕೊಂಡಿದೆ. ಕೆಲವೊಮ್ಮೆ ಆಕ್ಷನ್ ಸೀನ್ ಚಿತ್ರೀಕರಿಸುವ ಮೊದಲು ಐದರಿಂದ ಆರು ಬಾರಿ ರಿಹರ್ಸಲ್ ಮಾಡೋದು ಅನಿವಾರ್ಯ. ಪ್ರತಿಯೊಂದು ದೃಶ್ಯಗಳು ತೆರೆಯ ಮೇಲೆ ಚೆನ್ನಾಗಿ ಬರಲು ರಿಹರ್ಸಲ್ ಅಗತ್ಯ. ಕೆಲವೊಮ್ಮೆ ತರಬೇತಿ ವೇಳೆ ಮೇಲಿಂದ ಕೆಳಗೆ ಬೀಳುವಾಗ ಸಣ್ಣ ನೋವುಗಳು ಉಂಟಾಗುತ್ತವೆ. ‘ಭಾರತ್’ ಬಳಿಕ ಪಕ್ಕಾ ಆ್ಯಕ್ಷನ್ ಸೀನ್ ಗಳನ್ನೇ ಹೊಂದಿರುವ ‘ದಬಾಂಗ್-3’ರಲ್ಲಿ ನಟಿಸುತ್ತಿದ್ದೇನೆ. ಪ್ರತಿ ದೃಶ್ಯದಲ್ಲಿಯೂ ಒಂದೇ ಎನರ್ಜಿಯನ್ನು ಕಾಪಾಡಿಕೊಳ್ಳಬೇಕು. ಈ ರೀತಿಯ ಸಿನಿಮಾಗಳಿಂದಾಗಿಯೇ ನನ್ನ ದೇಹ ಇಂದಿಗೂ ಫಿಟ್ ಆಗಿದೆ ಎಂದು ತಿಳಿಸಿದ್ದಾರೆ.
ವಯಸ್ಸು ಹೆಚ್ಚಾಗೋದು ಎಲ್ಲರಲ್ಲಿಯೂ ಭಯ ಉಂಟು ಮಾಡುತ್ತದೆ. ಸಹಜವಾಗಿಯೇ ಆ ವಯಸ್ಸಿನ ನಂಬರ್ ನನ್ನನ್ನು ಭಯ ಹುಟ್ಟಿಸುತ್ತಿದೆ. ಪ್ರತಿ ಸಿನಿಮಾಗೂ ನಮ್ಮಿಂದ ಬೆಸ್ಟ್ ನೀಡಲು ಪ್ರಯತ್ನಿಸೋದು ನಮ್ಮ ಕರ್ತವ್ಯ. ಚಿತ್ರದ ದೃಶ್ಯಗಳು ಸಹಜವಾಗಿ ಕಾಣುವಂತೆ ಚಿತ್ರೀಕರಿಸಲು ನಿರ್ದೇಶಕರು ಪ್ರುಯತ್ನಿಸುತ್ತಾರೆ. ನಿರ್ದೇಶಕರು ಕಲ್ಪನೆಯನುಗುಣವಾಗಿ ನಾವು ನಟಿಸಬೇಕು. ಅಮಿತಾಬ್ ಬಚ್ಚನ್ ಮತ್ತು ಅನಿಲ್ ಕಪೂರ್ ಅವರಿಗೆ ವಯಸ್ಸಾಗಿದೆ ಎಂದ್ರೆ ಜನ ನಂಬಲ್ಲ. ಇಂದಿಗೂ ತಮ್ಮ ಫಿಟ್ ನೆಸ್ ನಿಂದಾಗಿ ಇಬ್ಬರೂ ನಟರೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಸಂಜಯ್ ದತ್, ತಮ್ಮ ತೂಕವನ್ನು ಇಳಿಸಿಕೊಂಡು ತೆಳ್ಳಗಾಗಿದ್ದಾರೆ ಎಂದರು.
ಇದೇ ಸಂದರ್ಶನದಲ್ಲಿ ಸಲ್ಮಾನ್, ದಿನಕ್ಕೆ ಕೇವಲ ಎರಡೂವರೆ ಗಂಟೆಯಿಂದ ಮೂರು ಗಂಟೆ ಮಾತ್ರ ನಿದ್ದೆ ಮಾಡುತ್ತೇನೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಬಿಡುವಿನ ವೇಳೆ ಪೇಟಿಂಗ್, ಬರೆಯುತ್ತೇನೆ ಮತ್ತು ಟಿವಿ ನೋಡುತ್ತೇನೆ. ನಚ್ ಬಲಿಯೇ-9 ರಿಯಾಲಿಟಿ ಶೋ ಮತ್ತು ದಬಾಂಗ್-3ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾನೆ. ಈ ಎರಡೂ ಕೆಲಸ ಮುಗಿದ ಬಳಿಕ ಸಂಜಯ್ ಲೀಲಾ ಬನ್ಸಾಲಿಯವರ ‘ಇಂಶಾಅಲ್ಲಾಹ’ ಚಿತ್ರಕ್ಕೆ ತೂಕ ಕಡಿಮೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.