Monday, 22nd October 2018

Recent News

ಜೈಲಿನಲ್ಲಿದ್ದಾಗ ನಿರ್ಮಾಪಕರ ಬಗ್ಗೆ ನೋವಾಗಲಿಲ್ವಾ ಎಂದು ಪ್ರಶ್ನಿಸಿದ್ದಕ್ಕೆ ಖಡಕ್ಕಾಗಿ ಉತ್ತರಿಸಿದ ಸಲ್ಮಾನ್!

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಟಿಸಿದ ರೇಸ್-3 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಯಾದ ಮೇಲೆ ಸಲ್ಮಾನ್ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಪತ್ರಕರ್ತರ ಮೇಲೆ ಗುಡುಗಿದ್ದಾರೆ.

ಇತ್ತೀಚೆಗೆ ಸಲ್ಮಾನ್ ಖಾನ್ ನಟನೆಯ ರೇಸ್-3 ಟ್ರೇಲರ್ ಬಿಡುಗಡೆಯಾಗಿತ್ತು. ಈ ಸಂದರ್ಭದಲ್ಲಿ ಚಿತ್ರತಂಡ ಸುದ್ದಿಗೋಷ್ಠಿಯನ್ನು ನಡೆಸಿದ್ದರು. ಆಗ ಪತ್ರಕರ್ತರು ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನೀವು ಅಪರಾಧಿಯಾಗಿ ಜೈಲಿನಲ್ಲಿದ್ದಿರಿ. ಆಗ ನಿಮಗೆ ನಿಮ್ಮ ನಿರ್ಮಾಪಕರು ಹಾಗೂ ಅವರ ಹಣದ ಬಗ್ಗೆ ನಿಮಗೆ ನೋವಾಗಲಿಲ್ಲವೇ ಎಂದು ಸಲ್ಮಾನ್ ಖಾನ್‍ಗೆ ಪ್ರಶ್ನಿಸಿದ್ದರು.

ಈ ಪ್ರಶ್ನೆಗೆ ಸಲ್ಮಾನ್ ಖಾನ್ ರೊಚ್ಚಿಗೆದ್ದು, ನಾನು ಜೀವನ ಪೂರ್ತಿ ಜೈಲಿನಲ್ಲೇ ಇರುತ್ತೇನೆ ಎಂದು ನೀವೆಲ್ಲಾ ಅಂದುಕೊಂಡಿದ್ದೀರ ಎಂದು ಸಲ್ಮಾನ್ ಖಾನ್ ಖಡಕ್ ಉತ್ತರ ನೀಡುವ ಮೂಲಕ ಪತ್ರಕರ್ತರಿಗೆ ಮರು ಪ್ರಶ್ನಿಸಿದ್ದಾರೆ. ಸಲ್ಮಾನ್ ಪ್ರಶ್ನೆಗೆ ಪತ್ರಕರ್ತರು ಹಾಗೇನು ಇಲ್ಲ ಎಂದು ಉತ್ತರಿಸಿದ್ದಾರೆ. ಆಗ ಸಲ್ಮಾನ್ ಖಾನ್, ‘ಥ್ಯಾಂಕ್ಯೂ ನಾನು ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

1998ರ ಸೆಪ್ಟೆಂಬರ್ 26 ರಾಜಸ್ಥಾನದ ಕಂಕಾನಿ ಗ್ರಾಮದಲ್ಲಿ `ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಕೃಷ್ಣ ಮೃಗದ ಬೇಟೆ ಆಡಿದ್ದರು. ಸಲ್ಮಾನ್ ಬೇಟೆ ಆಡುವ ವೇಳೆ ಸೈಫ್ ಅಲಿ ಖಾನ್, ತಬು, ಸೊನಾಲಿ ಬೇಂದ್ರೆ, ನೀಲಮ್ ಸಹ ಹಾಜರಿದ್ದರು. ಅಳಿವಿನಂಚಿನಲ್ಲಿರುವ ಕೃಷ್ಣ ಮೃಗ ಬೇಟೆಗೆ ನಟರು ಜಿಪ್ಸಿ ಬಳಸಿದ್ದರು. ಅಕ್ರಮ ಶಸ್ತ್ರಾಸ್ತ್ರ, ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಸಲ್ಮಾನ್ ಸೇರಿ ಎಲ್ಲರ ಮೇಲೆ ನಾಲ್ಕು ಕೇಸ್ ದಾಖಲಾಗಿತ್ತು.

ಎರಡು ದಶಕಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್‍ಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ದಂಡವನ್ನು ವಿಧಿಸಿ ಜೋಧಪುರ ಸಿಜೆಎಂ ಕೋರ್ಟ್ ಶಿಕ್ಷೆ ತೀರ್ಪು ನೀಡಿತ್ತು. ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆಯ ಪ್ರಮಾಣವನ್ನು ಜೋದ್‍ಪುರ ಕೋರ್ಟ್ ಪ್ರಕಟಿಸುತ್ತಿದ್ದಂತೆ ಬಾಲಿವುಡ್ ನಿರ್ಮಾಪಕರ ಎದೆಯಾಳದಲ್ಲಿ ನಡುಕ ಆರಂಭವಾಗಿತ್ತು.

ಸಲ್ಮಾನ್ ಖಾನ್ ಗಾಗಿ ಈಗಾಗಲೇ ಹಲವು ನಿರ್ಮಾಪಕರು 500 ಕೋಟಿಗೂ ಅಧಿಕ ಬಂಡವಾಳವನ್ನು ಹೂಡಿದ್ದರು. ಒಂದು ವೇಳೆ ಸಲ್ಮಾನ್ ಖಾನ್‍ಗೆ ಜಾಮೀನು ಸಿಗದೇ ಇದ್ದರೆ ನಿರ್ಮಾಪಕರು ಕೋಟ್ಯಾಂತರ ರೂ. ನಷ್ಟ ಅನುಭವಿಸಬೇಕಿತ್ತು. ಕೃಷ್ಣಮೃಗ ಬೇಟೆ ಪ್ರಕರಣದ ಬಗ್ಗೆ ಸಲ್ಮಾನ್ ಖಾನ್ ಎಲ್ಲಿಯೂ ಮಾತನಾಡಿರಲಿಲ್ಲ. ಹಾಗಾಗಿ ಪತ್ರಕರ್ತರು ರೇಸ್-3 ಸುದ್ದಿಗೋಷ್ಠಿ ವೇಳೆ ಸಲ್ಮಾನ್ ಖಾನ್ ಅವರಲ್ಲಿ ಈ ಮೇಲಿನ ಪ್ರಶ್ನೆಯನ್ನು ಕೇಳಿದ್ದರು.

ರೆಮೋ ಡಿಸೋಜಾ ನಿರ್ದೇಶನದಲ್ಲಿ ರೇಸ್-3 ಚಿತ್ರ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ರಮೇಶ್ ಎಸ್.ತೌರಾನಿ ಮತ್ತು ಸಲ್ಮಾನ್ ಖಾನ್ ಬಂಡವಾಳ ವಿನಿಯೋಗಿಸಿದ್ದಾರೆ. ಸಲ್ಮಾನ್ ಖಾನ್, ಅನಿಲ್ ಕಪೂರ್, ಬಾಬಿ ಡಿಯೋಲ್, ಜಾಕ್ವೇಲಿನ್ ಫರ್ನಾಂಡೀಸ್, ಡೈಸಿ ಶಾ ಮತ್ತು ಸಖೀಬ್ ಸಲೀಂ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ಸಿನಿಮಾ ಈ ಬಾರಿಯ ಈದ್ ಗೆ ರಿಲೀಸ್ ಆಗಲಿದೆ.

Leave a Reply

Your email address will not be published. Required fields are marked *