ಬಾಲಿವುಡ್ (Bollywood) ಖ್ಯಾತ ನಟ ಸಲ್ಮಾನ್ ಖಾನ್ (Salman Khan) ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ನಿನ್ನೆ ವಿಶ್ವದಾದ್ಯಂತ ರಿಲೀಸ್ ಆಗಿದೆ. ಸಲ್ಮಾನ್ ಸಿನಿಮಾಗಳು ಎಂದರೆ ಯಾವಾಗಲೂ ಅಬ್ಬರಿಸುತಲ್ಲೇ ತೆರೆಗೆ ಬರುತ್ತವೆ. ಈ ಸಿನಿಮಾ ಕೂಡ ಅಷ್ಟೇ ಸದ್ದು ಮಾಡಿಕೊಂಡು, ಐದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಆದರೆ, ಅಂದುಕೊಂಡಷ್ಟು ಕಲೆಕ್ಷನ್ (Collection) ಬಂದಿಲ್ಲ ಎಂದು ಹೇಳಲಾಗುತ್ತಿದೆ.
ಸಲ್ಲು ಸಿನಿಮಾ ರಿಲೀಸ್ ಆದಾಗ ಫಸ್ಟ್ ಡೇ ಕಲೆಕ್ಷನ್ ಅಂದಾಜು 30 ರಿಂದ 40 ಕೋಟಿ ಬರುತ್ತಿತ್ತು. ಈ ಹಿಂದಿನ ಅದೆಷ್ಟೋ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿವೆ. ಆದರೆ, ಕಿಸಿ ಕ ಭಾಯ್ ಕಿಸಿ ಕಿ ಜಾನ್ ಸಿನಿಮಾದ ಕಲೆಕ್ಷನ್ ತೀರಾ ಡಲ್ ಎಂದು ಹೇಳಲಾಗುತ್ತಿದೆ. ಮೊದಲ ದಿನ ಬಾಕ್ಸ್ ಆಫೀಸಿಗೆ ಹರಿದು ಬಂದ ಹಣ ಕೇವಲ 15 ಕೋಟಿ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ
ಸಲ್ಮಾನ್ ಚಿತ್ರಗಳು ರಿಲೀಸ್ ಆದ ಕೆಲವೇ ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರುತ್ತಿದ್ದವು. ಆದರೆ, ಕಿಸಿ ಕ ಭಾಯ್ ಕಿಸಿ ಕಿ ಜಾನ್ ನೂರು ಕೋಟಿ ಕ್ಲಬ್ ಸೇರಲು ಹಲವು ದಿನಗಳನ್ನು ತಗೆದುಕೊಳ್ಳಲಿದೆ ಎಂದು ಬಿಟೌನ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಕೋವಿಡ್ ವೇಳೆಯಲ್ಲಿ ಸಲ್ಮಾನ್ ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆದವು. ಹಾಗಾಗಿ ನೋಡುಗರು ಥಿಯೇಟರ್ ನತ್ತ ಸುಳಿದಿಲ್ಲ ಎನ್ನುವ ಮಾತು ಕೇಳಿ ಬಂದಿದೆ.
ಈಗಾಗಲೇ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ, ಬಾಲಿವುಡ್ ಗೆ ಟಾನಿಕ್ ನೀಡಿತ್ತು. ಹೀಗಾಗಿ ಸಲ್ಮಾನ್ ಚಿತ್ರ ಕೂಡ ಭರ್ಜರಿಯಾಗಿಯೇ ಬಾಕ್ಸ್ ಆಫೀಸ್ ತುಂಬಿಸಲಿದೆ ಎಂದು ಅಂದಾಜಿಸಲಾಗಿತ್ತು. ಈ ನಿರೀಕ್ಷೆ ಹುಸಿಯಾಗಿದೆ. ಇವತ್ತಿನ ಕಲೆಕ್ಷನ್ ರಿಪೋರ್ಟ್ ಬಂದಿಲ್ಲವಾದ್ದರಿಂದ ಎರಡನೇ ದಿನ ಸಲ್ಲು ಪಾಸಾಗಿದ್ದಾರಾ ಅಥವಾ ನಿರಾಸೆ ಮೂಡಿಸಿದ್ದಾರಾ ಕಾದು ನೋಡಬೇಕು.