ಇಸ್ಲಾಮಾಬಾದ್: ದೇಶ ವಿದೇಶಗಳ ಗಣ್ಯರಿಂದ ಪಡೆದ ಸರ್ಕಾರಿ ಉಡುಗೊರೆಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ (Pakistan) ಚುನಾವಣಾ ಆಯೋಗ (ECP) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಅನರ್ಹಗೊಳಿಸಿದೆ. ಇನ್ನು ಮುಂದೆ ಪಿಟಿಐ (PTI) ಅಧ್ಯಕ್ಷ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಲ್ಲ ಎಂದು ತೀರ್ಪು ನೀಡಿದೆ.
ತೋಷಾಖಾನಾ (Toshakhana) ಎಂದು ಕರೆಯಲಾಗುವ ರಾಜ್ಯ ಭಂಡಾರದಿಂದ ರಿಯಾಯಿತಿ ದರದಲ್ಲಿ ಖರೀದಿಸಿದ ಉಡುಗೊರೆಗಳನ್ನು ಮಾರಾಟ ಮಾಡಿ, ಅದರಿಂದ ಬಂದಿರುವ ಆದಾಯವನ್ನು ಬಹಿರಂಗಗೊಳಿಸದ ಕಾರಣ ಇಮ್ರಾನ್ ಖಾನ್ ವಿರುದ್ಧ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಶಾಸಕರು ಆಗಸ್ಟ್ನಲ್ಲಿ ಆಯೋಗಕ್ಕೆ ದೂರು ನೀಡಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಇಸಿಪಿ ಶುಕ್ರವಾರ ಇಮ್ರಾನ್ ಖಾನ್ ಇನ್ನು ಮುಂದೆ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಲ್ಲ, ಅವರ ಸ್ಥಾನ ಖಾಲಿ ಎಂದು ಘೋಷಿಸಿದೆ. ಇದರೊಂದಿಗೆ ಮಾಜಿ ಪ್ರಧಾನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಯೋಗ ನಿರ್ಧರಿಸಿದೆ. ಇದನ್ನೂ ಓದಿ: ನಿಜವಾದ ಮುಸ್ಲಿಮರು ಎಂದಿಗೂ ಬಿಜೆಪಿಗೆ ವೋಟ್ ಹಾಕಲ್ಲ: ಇಕ್ಬಾಲ್ ಮೊಹಮೂದ್
2018 ರಲ್ಲಿ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಅವರು ಅಧಿಕೃತ ಭೇಟಿಗಳ ಸಮಯದಲ್ಲಿ ಶ್ರೀಮಂತ ಅರಬ್ ಆಡಳಿತಗಾರರಿಂದ ದುಬಾರಿ ಉಡುಗೊರೆಗಳನ್ನು ಪಡೆದಿದ್ದರು. ಅದನ್ನು ತೋಷಾಖಾನಾದಲ್ಲಿ ಠೇವಣಿ ಇಡಲಾಗುತ್ತಿದ್ದು, ನಂತರ ಅವರು ಸಂಬಂಧಿತ ಕಾನೂನುಗಳ ಪ್ರಕಾರ ರಿಯಾಯಿತಿ ದರದಲ್ಲಿ ಖರೀದಿಸಿದ್ದರು. ಬಳಿಕ ಅವರು ಭಾರೀ ಲಾಭದಲ್ಲಿ ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪ ಬಂದಿದೆ.
ಇಸಿಪಿ ಪ್ರಕಾರ ಇಮ್ರಾನ್ ಖಾನ್ ಅವರು 2 ಕೋಟಿ ರೂ. ಪಾವತಿಸಿ ರಾಜ್ಯದ ಖಜಾನೆಯಿಂದ ಉಡುಗೊರೆಗಳನ್ನು ಪಡೆದು, ಅವುಗಳನ್ನು ಸುಮಾರು 5.8 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಅವರು ಮಾರಾಟ ಮಾಡಿರುವ ಉಡುಗೊರೆಗಳಲ್ಲಿ ಗ್ರಾಫ್ ಕೈಗಡಿಯಾರ, ಒಂದು ಜೋಡಿ ಕಂಫ್ಲಿಕ್, ದುಬಾರಿ ಪೆನ್, ಉಂಗುರ ಹಾಗೂ 4 ರೋಲೆಕ್ಸ್ ವಾಚ್ಗಳು ಸೇರಿವೆ. ಇದನ್ನೂ ಓದಿ: ಮುಂದಿನ ವರ್ಷದಿಂದ ದೀಪಾವಳಿಗೆ ನ್ಯೂಯಾರ್ಕ್ ನಗರದ ಶಾಲೆಗಳಿಗೆ ರಜೆ