ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ (Brij Bhushan Sharan Singh) ವಿರುದ್ಧ ಕುಸ್ತಿಪಟುಗಳು (Wrestlers) ಮಾಡಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಲೇ ಇದೆ. ಇದೀಗ ಭಾರತದ ಕುಸ್ತಿಪಟು ಬಬಿತಾ ಫೋಗಟ್ (Babita Phogat) ಈ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿ, ಸಾಕ್ಷಿ ಮಲಿಕ್ (Sakshi Malik) ಅವರನ್ನು ಕಾಂಗ್ರೆಸ್‌ನ ಕೈಗೊಂಬೆ ಎಂದು ಆರೋಪಿಸಿದ್ದಾರೆ.
ರಾಜಕೀಯ ಪ್ರೇರಿತವೆಂದು ಭಾರೀ ಟೀಕೆಗೆ ಗುರಿಯಾಗಿದ್ದ ತಮ್ಮ ಹೋರಾಟದ ಬಗ್ಗೆ ಶನಿವಾರ ಕುಸ್ತಿಪಟುಗಳು ಸ್ಪಷ್ಟನೆ ನೀಡಿದ್ದರು. ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ. ಕೇಂದ್ರ ಸರ್ಕಾರದ ವಿರುದ್ಧವೂ ಅಲ್ಲ. ನಮ್ಮ ಹೋರಾಟ ಬ್ರಿಜ್ ಭೂಷಣ್ ವಿರುದ್ಧ ಮಾತ್ರ ಎಂದು ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಹಾಗೂ ಅವರ ಪತಿ ಸತ್ಯವರ್ತ್ ಕಡಿಯಾನ್ ಹೇಳಿದ್ದರು.
Advertisement
Advertisement
ಈ ಬಗ್ಗೆ 11 ನಿಮಿಷಗಳ ಸುದೀರ್ಘ ವೀಡಿಯೋ ಹಂಚಿಕೊಂಡಿದ್ದ ಸಾಕ್ಷಿ ಮಲಿಕ್ ತಮ್ಮ ಹೋರಾಟದ ಬಗ್ಗೆ ಸ್ಪಷ್ಟನೆ ನೀಡುತ್ತಾ, ನಮ್ಮ ಹೋರಾಟದ ಬಗ್ಗೆ ವದಂತಿಗಳನ್ನು ಹರಡಲಾಗುತ್ತಿದೆ. ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ. ಕಳೆದ ಜನವರಿಯಲ್ಲಿ ನಾವು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಇಳಿದಾಗ ಇಬ್ಬರು ಬಿಜೆಪಿ ನಾಯಕರನ್ನೇ ಕೋರಿ ಪೊಲೀಸರಿಂದ ಅನುಮತಿ ಪಡೆದುಕೊಂಡಿದ್ದೆವು. ಕಳೆದ 10-12 ವರ್ಷಗಳಿಂದ ಕುಸ್ತಿಪಟುಗಳ ಮೇಲೆ ಕಿರುಕುಳ ನಡೆಯುತ್ತಲೇ ಬಂದಿದೆ. 90% ಕ್ಕೂ ಹೆಚ್ಚು ಕುಸ್ತಿಪಟುಗಳು ತೊಂದರೆ ಅನುಭವಿಸುತ್ತಿರುವುದು ತಿಳಿದಿತ್ತು. ಆದರೆ ಒಗ್ಗಟ್ಟಿನ ಕೊರತೆಯಿಂದಾಗಿ ಸುಮ್ಮನಿದ್ದೆವು ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ – ಕುಸ್ತಿಪಟುಗಳ ಸ್ಪಷ್ಟನೆ
Advertisement
Advertisement
ಈ ವೀಡಿಯೋವನ್ನು ಬಿಡುಗಡೆ ಮಾಡಿದ ಬಳಿಕ ಪ್ರತಿಕ್ರಿಯಿಸಿರುವ ಬಬಿತಾ ಫೋಗಟ್, ನನ್ನ ಕಿರಿಯ ಸಹೋದರಿ ಹಾಗೂ ಆಕೆಯ ಪತಿ ಮಾಡಿರುವ ವೀಡಿಯೋ ನೋಡಿ ನನಗೆ ಬಹಳ ದುಃಖ ಹಾಗೂ ನಗು ಎರಡೂ ಬಂದಿದೆ. ಸಾಕ್ಷಿ ಮಲಿಕ್ ಪ್ರದರ್ಶಿಸಿರುವ ಅನುಮತಿ ಪತ್ರದಲ್ಲಿ ನನ್ನ ಹೆಸರು ಅಥವಾ ಸಹಿ ಎಲ್ಲಿಯೂ ಇಲ್ಲ. ಸಹಮತಕ್ಕೆ ಇದು ಪುರಾವೆಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ನಿಮ್ಮ ಉದ್ದೇಶಗಳ ಬಗ್ಗೆ ದೇಶದ ಜನರಿಗೆ ಸ್ಪಷ್ಟನೆ ಸಿಗುತ್ತಿದೆ. ಹೊಸ ಸಂಸತ್ ಉದ್ಘಾಟನೆ ಸಂದರ್ಭ ನೀವು ನಡೆಸಿರುವ ಪ್ರತಿಭಟನೆ ಮತ್ತು ಗಂಗಾ ನದಿಯಲ್ಲಿ ಪದಕಗಳನ್ನು ವಿಸರ್ಜಿಸುವ ಬೆದರಿಕೆ ಹಾಕಿದ್ದು ದೇಶಕ್ಕೆ ಮುಜುಗರ ಉಂಟುಮಾಡಿದೆ. ನೀವು ಕಾಂಗ್ರೆಸ್‌ನ ಕೈಗೊಂಬೆಗಳು ಎಂಬುದು ಈಗ ದೇಶದ ಜನರಿಗೆ ಮನದಟ್ಟಾಗುತ್ತಿದೆ. ನಿಮ್ಮ ನಿಜವಾದ ಉದ್ದೇಶ ಏನು ಎಂಬುದನ್ನು ಬಹಿರಂಗಪಡಿಸಬೇಕಾದ ಸಮಯ ಬಂದಿದೆ ಎಂದು ಬಬಿತಾ ಫೋಗಟ್ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬಿಕ್ಕಟ್ಟಿನ ನಡುವೆ 5 ವರ್ಷಗಳ ಬಳಿಕ ಅಮೆರಿಕ ರಾಜ್ಯ ಕಾರ್ಯದರ್ಶಿ ಚೀನಾಗೆ ಮೊದಲ ಭೇಟಿ