ಬೆಂಗಳೂರು: ದಂಧೆ ಹಣ ಮೂಲಕ ಸರ್ಕಾರವನ್ನು ಉರುಳಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಮೂಲಕ ಸಿಎಂ ಎಚ್‍ಡಿ ಕುಮಾರಸ್ವಾಮಿ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದ್ದು, ಹಳೆಯ ಪ್ರಕರಣಗಳನ್ನು ಕೆದಕುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಆಪರೇಷನ್ ಕಮಲ ಕುರಿತು ಪ್ರತಿಕ್ರಿಯೆ ನೀಡಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಲಾಟರಿ, ಇಸ್ಪೀಟ್ ದಂಧೆಯಲ್ಲಿ ಕೋಟ್ಯಾಂತರ ರೂಪಾಯಿ ದುಡ್ಡು ಮಾಡಿ ಆ ದುಡ್ಡನ್ನ ಆಪರೇಷನ್ ಕಮಲಕ್ಕೆ ಬಳಸಲಾಗುತ್ತಿದೆ ಎಂದು ಹೇಳಿ ಮೂವರು ಕಿಂಗ್‍ಪಿನ್ ಗಳ ಬಗ್ಗೆಯೂ ಸುಳಿವು ಬಿಟ್ಟುಕೊಟ್ಟಿದ್ದಾರೆ.
Advertisement
2009ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಬೆಂಕಿ ಇಟ್ಟು ಹಣ ಹೊಂದಿಸೋಕೆ ಯತ್ನಿಸಿದ್ದು ಯಾರು? ಸಕಲೇಶಪುರದ ಕಾಫಿ ಪ್ಲಾಂಟ್ ಓನರ್ ಬೆಂಗಳೂರಲ್ಲಿ ರೆಸಾರ್ಟ್ ಮಾಡೋಕೆ ಯತ್ನಿಸಿದ್ದ. ಸಾಲದ ಸುಳಿಯಲ್ಲಿ ಆ ಪ್ಲಾಂಟರ್ ಹೆಂಡತಿಯನ್ನೇ ಗುಂಡಿಟ್ಟು, ಮಗುನಾ ಸಾಯಿಸಿ ಈಗ ಜೈಲಿನಲ್ಲಿ ಇದ್ದಾನೆ. ಅದಕ್ಕೆಲ್ಲಾ ಕಾರಣ, ಕಿಂಗ್‍ಪಿನ್ ಯಾರು? ಸರ್ಕಾರ ಉರುಳಿಸಲು ಯಾವ ರೀತಿ ಪ್ಲಾನ್ ಮಾಡಿದ್ದಾರೆ, ಯಾರ ಜೊತೆ ಸೇರಿದ್ದಾರೆ ಎನ್ನುವ ಎಲ್ಲಾ ಮಾಹಿತಿ ಗೊತ್ತು ತಿಳಿಸಿದ್ದರು.
Advertisement
Advertisement
ಕಿಂಗ್‍ಪಿನ್-01
ಜಿಮ್ ಸೋಮ?
ಸಕಲೇಶಪುರದಲ್ಲಿ 154 ಎಕರೆ ಕಾಫಿ ತೋಟದ ಮಾಲೀಕ ಉದ್ಯಮಿ ಗಣೇಶ್ ರಿಯಲ್ ಎಸ್ಟೇಟ್‍ಗಾಗಿ ಸಾಲ ಮಾಡಿ ಹೆಂಡತಿ ಮತ್ತು ಮಗನನ್ನು ಕೊಂದಿದ್ದ. ಉದ್ಯಮಿ ಗಣೇಶ್ ಜೊತೆಗೆ ಜಿಮ್ ಸೋಮ ಹಣಕಾಸು ವ್ಯವಹಾರವನ್ನು ನಡೆಸುತ್ತಿದ್ದರು.
Advertisement
ಅಂದಹಾಗೇ ಖ್ಯಾತ ಚಿತ್ರ ನಟಿ ದಾಮಿನಿ ಪತಿಯಾಗಿರುವ ಜಿಮ್ ಸೋಮ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಬೆಂಗಳೂರಿನ ತಿಲಕನಗರ ಠಾಣೆಯ ರೌಡಿಶೀಟರ್ ಆಗಿದ್ದು ಬಡ್ಡಿ ದಂಧೆ, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಆರೋಪವಿದೆ. 15 ವರ್ಷದ ಹಿಂದೆಯೇ ಕೊಲೆ ಪ್ರಕರಣವೊಂದರಲ್ಲಿ ಸೋಮ ಎ1 ಆರೋಪಿಯಾಗಿದ್ದು, ಈಗ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್, ಸಂಡೂರು ಶಾಸಕ ತುಕಾರಾಂಗೆ 50 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಸೋಮಶೇಖರ್, ಸಿಎಂ ಬಳಿ ಎಲ್ಲಾ ಅಧಿಕಾರಿಗಳು, ಇಲಾಖೆಗಳು ಹಾಗೂ ಸಂಪೂರ್ಣ ಅಧಿಕಾರ ಇದ್ದು ನನ್ನ ವಿರುದ್ಧ ಆರೋಪ ಇದ್ದರೆ ನೇರ ಕ್ರಮಕೈಗೊಳ್ಳಬಹುದು. ಆದರೆ ಸರ್ಕಾರ ಹುಳುಕು ಮುಚ್ಚಲು ಈ ರೀತಿ ಆರೋಪ ಮಾಡಲಾಗುತ್ತಿದೆ. ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಆದರೆ ವ್ಯವಹಾರಿಕವಾಗಿ ಉದ್ಯಮಿ ಗಣೇಶ್ ಜಮೀನು ಖರೀದಿ ಮಾಡಿದ್ದೇನೆ. ಅಲ್ಲದೇ ನನ್ನ ಒಂದು ಜಮೀನುನನ್ನು ಆತನಿಗೂ ಮಾರಾಟ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಕಿಂಗ್‍ಪಿನ್-02
ಫೈಟರ್ ರವಿ?
ಇನ್ನು ಸಿಎಂ ಕುಮಾರಸ್ವಾಮಿ ಅವರು ಅರೋಪ ಮಾಡಿರುವ ಮತ್ತೊಬ್ಬ ಕಿಂಗ್‍ಪಿನ್ ಫೈಟರ್ ರವಿ. ಕ್ರಿಕೆಟ್ ಬೆಟ್ಟಿಂಗ್, ಒಂದಂಕಿ ಲಾಟರಿ, ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವ ಆರೋಪ ಇದ್ದು ಈ ಹಿಂದೆ ಲಾಟರಿ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ದೂರು ರವಿ ದೂರು ನೀಡಿ ಸುದ್ದಿಯಾಗಿದ್ದರು.
ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯ ರೌಡಿಶೀಟರ್ ರವಿ ಅಕ್ರಮ ಹಣ ವರ್ಗಾವಣೆಯಲ್ಲಿ (ಹವಾಲಾ) ಎತ್ತಿದ ಕೈ ಎನ್ನುವ ಆರೋಪಗಳಿವೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಗೂಂಡಾ ಕಾಯ್ದೆಯಡಿ ಈ ಹಿಂದೆ ಬಂಧನಕ್ಕೆ ಒಳಗಾಗಿದ್ದರು. ಜಾರಿ ನಿರ್ದೇಶನಾಲಯ ಈ ಹಿಂದೆ ದಾಳಿ ನಡೆಸಿದಾಗ ಪ್ಲಾಟ್‍ನಲ್ಲಿ 50 ಲಕ್ಷ ರೂ. ನಗದು ಪತ್ತೆಯಾಗಿತ್ತು. ಇನ್ನು 2011 ರಲ್ಲಿ ರವಿ ಮೇಲೆ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ದೂರು ದಾಖಲಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರವಿ, ನಾನು ನನ್ನ ಆಸ್ತಿ ಮಾರಾಟ ಮಾಡಿ ಸಹೋದರನಿಗಾಗಿ ಚುನಾವಣೆಯಲ್ಲಿ ವೆಚ್ಚ ಮಾಡಿರುವ ಬಗ್ಗೆ ಸಿಎಂ ಕುಮಾರಸ್ವಾಮಿ ಅವರಿಗೂ ಮಾಹಿತಿ ಇದೆ. ಸದ್ಯ ಆರೋಪ ಮಾಡಿರುವ ಕುಮಾರಸ್ವಾಮಿ ಅವರ ಬಳಿಯೇ ಭೇಟಿ ಮಾಡಿ ಮಾಹಿತಿ ಪಡೆಯುತ್ತೇನೆ. ಅವರ ಪಕ್ಷದ ಪರವೇ ನಾನು ಕಳೆದ ಬಾರಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದೆ. ಆದರೆ ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ. ಸಹೋದರನ ಚುನಾವಣೆಗಾಗಿ ಕೆಲ ಕಾಲ ರಾಜಕೀಯದಲ್ಲಿ ಇದ್ದೆ ಅಷ್ಟೇ. ಯಾರೋ ಕುಮಾರಸ್ವಾಮಿ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ನನ್ನ ವಿರುದ್ಧದ ಯಾವುದೇ ಆರೋಪವಿದ್ದರೂ ತನಿಖೆ ಎದುರಿಸಲು ಸಿದ್ಧ ಎಂದು ತಿಳಿಸಿದ್ದಾರೆ.
ಕಿಂಗ್‍ಪಿನ್-03
ಉದಯ್ ಗೌಡ?
ಬೆಂಗಳೂರಿನ ಶ್ರೇಷಾದ್ರಿಪುರಂ ನಿವಾಸಿಯಾಗಿರುವ ಉದಯ್ ಗೌಡ ಮೂರನೇ ಕಿಂಗ್‍ಪಿನ್ ಆಗಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ವಂಚನೆ, ನಕಲು ಮಾಡಿದ ಪ್ರಕರಣ ದಾಖಲಾಗಿದೆ. ಗೋವಾ ಮತ್ತು ಶ್ರೀಲಂಕಾದಲ್ಲಿ ಕ್ಯಾಸಿನೋ ಗ್ಯಾಂಬ್ಲಿಂಗ್ ಕೂಡ ನಡೆಸುತ್ತಿರುವ ಆರೋಪವಿದೆ.
ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಉದ್ಯಮಿಗಳನ್ನ ಕರೆ ತಂದು ಇಸ್ಪೀಟ್ ಆಡಿಸುವ ಕಾಯಕ ಹಾಗೂ ಮೀಟರ್ ಬಡ್ಡಿ ದಂಧೆಯಲ್ಲೂ ಉದಯ್‍ಗೌಡ ತೊಡಗಿಕೊಂಡಿದ್ದಾರೆ ಎನ್ನುವ ಆರೋಪವಿದೆ. ಅಕ್ರಮ ಹಣ ವಹಿವಾಟು ಪ್ರಕರಣಕ್ಕೆ ಸಂಬಂಧಿದಂತೆ ಶ್ರೀಲಂಕಾ ಪೊಲೀಸರು ಈ ಹಿಂದೆ ವಿಚಾರಣೆ ನಡೆಸಿದ್ದರು. ಅಲ್ಲದೇ ಉದಯ್ ಗೌಡ ಕಾರ್ ಗ್ಯಾರೇಜ್‍ನಲ್ಲಿ ಐಟಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ 7 ಕೋಟಿ ರೂಪಾಯಿ ರೂ. ಹಣ ಪತ್ತೆಯಾಗಿತ್ತು.
ಮೂಲತಃ ಚೆನ್ನಪಟ್ಟಣದವರಾದ ದೊಡ್ಡ ಬುಕ್ಕಿ, ಸಿಪಿ ಯೋಗೇಶ್ವರ್ ಆಪ್ತನಾಗಿರುವ ಉದಯ್, ಜಿಮ್ ಸೋಮನ ರಾಜಕೀಯ ಪ್ರವೇಶಕ್ಕೆ ಕಾರಣನಾಗಿದ್ದರು. ಜಿಮ್ ಸೋಮನ್ನು ಯೋಗೇಶ್ವರ್ ಮೂಲಕ ಯಡಿಯೂರಪ್ಪಗೆ ಪರಿಚಯಿಸಿ ಬಳಿಕ ಸೋಮ ಬಿಜೆಪಿ ಅಭ್ಯರ್ಥಿಯಾಗಲು ಉದಯ್ ನೇರ ಕಾರಣ ಎನ್ನಲಾಗಿದೆ.
ಸದ್ಯ ಸರ್ಕಾರ ಉರುಳಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂಬ ಆರೋಪ ಮಾಡಿರುವ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಗುಪ್ತಚರ ಇಲಾಖೆ ಮಾಹಿತಿ ಅನ್ವಯ ಮೀಟರ್ ಬಡ್ಡಿ, ಅಬಕಾರಿ, ಭೂ ಮಾಫಿಯಾ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv