ಬೆಂಗಳೂರು: ಭಗವಂತನ ಮೇಲೆ ಕೋಪ ಬರುತ್ತಿದೆ ಎಂದು ನಟ ಸಾಯಿ ಕುಮಾರ್ ಸಿಟ್ಟು ಹೊರ ಹಾಕಿದ್ದಾರೆ.
ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಸಮಾಧಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂಠೀರವ ಸ್ಟುಡಿಯೋಗೆ ಶೂಟಿಂಗ್ ಗಾಗಿ ನಾವು ಬಂದಿದ್ದೇವೆ. ನಾವು ಇಲ್ಲಿ ನಟಿಸುತ್ತಿದ್ದೇವೆ ಎನಿಸುತ್ತಿದೆ. ಇದು ನಿಜ ಎಂದು ನನಗೆ ಅನಿಸುತ್ತಿಲ್ಲ. ಏಕೆಂದರೆ ನಾವು ಎಷ್ಟೋ ಸಿನಿಮಾಗಳನ್ನು ಇಲ್ಲಿ ಶೂಟಂಗ್ ಮಾಡಿದ್ದೆವು. ಆದರೆ ಇಂದು ಇವರ ದರ್ಶನಕ್ಕೆ ಬಂದಿರುವುದು ನೋವುತರುತ್ತಿದೆ ಎಂದರು. ಇದನ್ನೂ ಓದಿ: ಅಪ್ಪು ಭಾವಚಿತ್ರಕ್ಕೆ ಮುತ್ತಿಟ್ಟು ಅಜ್ಜಿ ಭಾವುಕ – ವೀಡಿಯೋ ವೈರಲ್
ನಾನು ಭಗವಂತನನ್ನು ತುಂಬಾ ನಂಬುತ್ತೇನೆ. ಆದರೆ ಈ ವಿಚಾರ ಕೇಳಿ ಭಗವಂತನ ಮೇಲೆಯೇ ಕೋಪ ಬರುತ್ತಿದೆ. ಒಳ್ಳೆಯ ನಟನಿಗೆ ಈ ರೀತಿಯಾಗಿರುವುದು ತುಂಬಾ ನೋವು ತರುತ್ತಿದೆ. ಅವರು ಒಳ್ಳೆಯ ನಟನೂ ಹೌದು. ಅದೇ ರೀತಿ ಒಳ್ಳೆಯ ಮನುಷ್ಯ. ಏಕೆಂದರೆ ನಾನು ಅವರ ಜೊತೆ ನಟಿಸಿದ್ದೇನೆ. ಸೆಟ್ ನಲ್ಲಿ ಅವರು ಇದ್ದ ರೀತಿ ನೋಡಿದರೆ ಖುಷಿಯಾಗುತ್ತಿತ್ತು ಎಂದು ನೆನೆದರು.
ಒಳ್ಳೆಯ ಮನುಷ್ಯ
ಡಾ.ರಾಜ್‍ಕುಮಾರ್ ಕುಟುಂಬದವರ ಜೊತೆ ನಾವು ನಟಿಸುತ್ತಿದ್ದೇವೆ. ನಮ್ಮ ಅಪ್ಪ-ಅಮ್ಮನ ಕಾಲದಿಂದಲ್ಲೂ ನಟಿಸುತ್ತಾ ಬಂದಿದ್ದೇವೆ. ಅಪ್ಪ ತೆಲುಗಿನಲ್ಲಿ ರಾಜ್ ಅವರಿಗೆ ಧ್ವನಿ ಕೊಟ್ಟಿದ್ದರು. ಅಮ್ಮ ಅವರ ಜೊತೆ ಅಭಿನಯಿಸಿದ್ದರು. ನಾನು ಡಾ.ರಾಜ್ ಅವರನ್ನು ಭೇಟಿಯಾಗಿ ಬಭ್ರುವಾಹನ ಡೈಲಾಗ್ ಅನ್ನು ಅವರ ಹತ್ತಿರ ಹೇಳಿ ಆರ್ಶೀವಾದ ಪಡೆದು ಇಲ್ಲಿಯವರೆಗೂ ಬಂದಿದ್ದೇನೆ. ಶಿವಣ್ಣನ ಜೊತೆ, ರಾಘಣ್ಣನ ಮಗನ ಜೊತೆ ನಟಿಸಿದ್ದೆ. ಅಪ್ಪು ಜೊತೆ ಸಿನಿಮಾ ಮಾಡಬೇಕು ಎಂದು ಇತ್ತೀಚೆಗೆ ‘ಯುವರತ್ನ’ ಸಿನಿಮಾದಲ್ಲಿ ಅವರ ಜೊತೆಗೆ ನಟಿಸಿದ್ದೆ ಎಂದರು.
ಆ ವೇಳೆ ನಾವು ಪೊಲೀಸ್ ಸ್ಟೋರಿಯಿಂದ ಇಲ್ಲಿವರೆಗೂ ಮಾಡಿದ ಸಿನಿಮಾಗಳ ಬಗ್ಗೆ ಮಾತನಾಡಿದ್ದೆವು. ನಿಜವಾಗಲು ಆ ರೀತಿಯ ಮನುಷ್ಯನನ್ನು ನಾನು ನೋಡಿಲ್ಲ. ಒಳ್ಳೆಯ ಮನುಷ್ಯ. ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಾರೆ. ಅವರು ಬೆಳಗ್ಗೆ ಬಂದು ಶುಭೋದಯ ಹೇಳುವುದರಿಂದ ಹಿಡಿದು ಸಂಜೆ ಹೋಗುವವರೆಗೂ ಅವರ ನಡವಳಿಕೆ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿ ಮೌನಿಯಾದರು.
ಅಪ್ಪು ನಮ್ಮ ಜೊತೆಯಲ್ಲಿಯೇ ಇದ್ದರೆ ಎಂಬ ಭಾವನೆ ಇದೆಯೇ ಹೊರತು, ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂಬ ಭಾವನೆಯೇ ಬರುತ್ತಿಲ್ಲ. ಈ ರೀತಿ ಆಗುತ್ತೆ ಎಂದು ಯಾರು ಸಹ ಊಹಿಸಿಕೊಂಡಿರಲ್ಲ ಎಂದರು.
ಹೆಮ್ಮೆ ಪಟ್ಟುಕೊಂಡಿದ್ದರು:
ನನ್ನ ಮಗನನ್ನು ಅವರೇ ಇಂಡಸ್ಟ್ರಿಗೆ ಪರಿಚಯಿಸುತ್ತೇನೆ ಎಂದಿದ್ದರು. ನನ್ನ ಮಗಳು ಡಾಕ್ಟರ್. ಮಗಳು ಮತ್ತೆ ಅಳಿಯ ಸೇರಿ ಒಂದು ಫುಡ್ ಪ್ರಾಡಕ್ಟ್ ಲಾಂಚ್ ಮಾಡಲು ಕರೆದಾಗ ಅವರೇ ಸ್ವತಃ ಫೋನ್ ಮಾಡಿ ಡೇಟ್ ಕೇಳಿ ಲಾಂಚ್ ಮಾಡಿಕೊಟ್ಟಿದ್ದರು. ಪ್ರಾಡಕ್ಟ್ ಲಾಂಚ್ ಗೆ ಅವರು ಕುಟುಂಬದವರ ಜೊತೆ ಬಂದಿದ್ದು, ತುಂಬಾ ಹೆಮ್ಮೆ ಪಟ್ಟುಕೊಂಡಿದ್ದರು. ನಮ್ಮ ಕುಟುಂಬದವರ ಜೊತೆ ಸಂತೋಷವಾಗಿದ್ದರು ಎಂದರು. ಇದನ್ನೂ ಓದಿ: ತಾಂತ್ರಿಕ ಕಾರಣದಿಂದ ಎಡವಟ್ಟು ಆಗಿದೆ: ಅಕುಲ್ ಬಾಲಾಜಿ
ಜೀವನ ಕ್ಷಣಿಕ:
ಅಶ್ವಿನಿ ಮೇಡಂ ಜೊತೆಗೂ ಇವತ್ತು ಮಾತನಾಡಿಕೊಂಡು ಬರಬೇಕಾದರೆ ಪ್ರಾಡಕ್ಟ್ ಲಾಂಚ್ ದಿನದ ಬಗ್ಗೆ ನೆನೆಸಿಕೊಂಡರು. ಇದಕ್ಕೆ ಒಂದು ನುಡಿ ಇದೆ, ಕಣ್ಣು ತೆಗೆದರೆ ಜನನ, ಕಣ್ಣು ಮುಚ್ಚಿದರೆ ಮರಣ. ಈ ರೆಪ್ಪೆ ಆಡಿಸುವ ಕಾಲವೇ ನಮ್ಮ ಜೀವನ ಎನ್ನುತ್ತಾರೆ. ಅದೇ ರೀತಿ ನಮ್ಮ ಜೀವನ ಕ್ಷಣಿಕವಾಗಿದೆ. ಈ ಕ್ಷಣಿಕ ಜೀವನದಲ್ಲಿ ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕೆ ನಾವು ಏನನ್ನು ಕೊಟ್ಟೆವು ಎಂಬುದು ತುಂಬಾ ಮುಖ್ಯ. ಅದೇ ರೀತಿ ಇಡೀ ಪ್ರಪಂಚವೇ ಇಂದು ಅಪ್ಪು ಬಗ್ಗೆ ತಿಳಿದುಕೊಳ್ಳುತ್ತೆ ಎಂದು ಹೇಳಿದರು.
ಕರ್ನಾಟಕದವರಿಗೆ ಅಪ್ಪು ಬಗ್ಗೆ ಗೊತ್ತು. ಆದರೆ ಹೊರಗಿನ ಜನರು ಅಪ್ಪು ಬಗ್ಗೆ ಅವರು ಇಷ್ಟು ಒಳ್ಳೆಯ ಕೆಲಸ ಮಾಡಿದ್ರ ಎಂದು ನನಗೆ ಕರೆ ಮಾಡಿ ಕೇಳುತ್ತಿದ್ದಾರೆ. ಇಂದು ಅಪ್ಪು ಮಾಡಿರುವ ಸಮಾಜ ಕಾರ್ಯಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.
ಇಡೀ ಭಾರತದಲ್ಲಿಯೇ ಜನರು ಅಪ್ಪುಗೆ ಭಗವಂತ ಏಕೆ ಈ ರೀತಿ ಮಾಡಿದ ಎಂದು ಮರುಗುತ್ತಿದ್ದಾರೆ. ಇದು ನಿಜವಾಗಲು ದೊಡ್ಡ ನಷ್ಟವಾಗಿದೆ. ವಿ ಮಿಸ್ ಯೂ ಎಂದರು.