ಸಹಾರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ ನಿಧನ

Public TV
2 Min Read
Sahara Group Founder Subrata Roy Dies At 75 After Long Illness

ಮುಂಬೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಹಾರಾ ಗ್ರೂಪ್ (Sahara Group) ಸಂಸ್ಥಾಪಕ ಮತ್ತು ಅಧ್ಯಕ್ಷ ಸುಬ್ರತಾ ರಾಯ್ (Subrata Roy) ಅವರು ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದ ಸುಬ್ರತಾ ರಾಯ್ (75) ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಭಾನುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೇ ಹೃದಯ ಸ್ತಂಭನದಿಂದ ವಿಧಿವಶರಾದರು ಎಂದು ಸಹಾರಾ ಗ್ರೂಪ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬಿಹಾರದ ಅರಾರಿಯಾದಲ್ಲಿ 1948ರಲ್ಲಿ ಜನಿಸಿದ ಸುಬ್ರತಾ ರಾಯ್ ಅವರು ಕೇವಲ 2,000 ರೂ. ಬಂಡವಾಳದೊಂದಿಗೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ 1978ರಲ್ಲಿ ಸಣ್ಣ ಫೈನಾನ್ಸ್‌ ಆರಂಭಿಸುವ ಮೂಲಕ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.

Pune Warriors Subrata Roy

ಫೈನಾನ್ಸ್‌ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತಿದ್ದಂತೆ ಠೇವಣಿದಾರರ ಸಂಖ್ಯೆಯೂ ಹೆಚ್ಚಾಗುತ್ತದೆ. ಮುಂದಿನ 29 ವರ್ಷಗಳಲ್ಲಿ ಠೇವಣಿದಾರರ ಸಂಖ್ಯೆ 6.1 ಕೋಟಿ ದಾಟುತ್ತದೆ. ದೇಶಾದ್ಯಂತ 1,700ಕ್ಕೂ ಹೆಚ್ಚು ಕಚೇರಿಗಳು ತೆರೆಯಲ್ಪಡುತ್ತದೆ. ಹಂತ ಹಂತವಾಗಿ ಮೂಲಸೌಕರ್ಯ, ಹಣಕಾಸು, ರಿಯಲ್ ಎಸ್ಟೇಟ್, ರಿಟೇಲ್, ಮಾಧ್ಯಮ, ಮನರಂಜನೆ ಮುಂತಾದ ವಲಯಗಳಲ್ಲಿ ಸಹಾರಾ ಸಮೂಹ ಹೂಡಿಕೆ ಮಾಡುತ್ತದೆ. ಇದನ್ನೂ ಓದಿ: ಅಭಿಮಾನಿಯ ಹೃದಯ ಬಡಿತ ನಿಲ್ಲಿಸಿತ್ತು, ವಿಶ್ವಕಪ್ ಕನಸನ್ನೇ ಭಗ್ನಗೊಳಿಸಿತ್ತು ಆ ಒಂದು ರನೌಟ್

ಈ ಹಿಂದೆ 68,000 ಕೋಟಿ ರೂ.ಗೂ ಹೆಚ್ಚು ನಿವ್ವಳ ಸಂಪತ್ತು ಮತ್ತು 1.5 ಲಕ್ಷ ಕೋಟಿ ರೂ. ಬೆಲೆಯ ಆಸ್ತಿ ಹೊಂದಿರುವುದಾಗಿ ಸಮೂಹ ಹೇಳಿಕೊಂಡಿತ್ತು. ಅಷ್ಟೇ ಅಲ್ಲದೇ 2010ರಲ್ಲಿ ಐಪಿಎಲ್ (IPL) ತಂಡಗಳ ಹರಾಜಿನಲ್ಲಿ ಸಹಾರಾ ಸಮೂಹ ಪುಣೆ ವಾರಿಯರ್ಸ್‌ (Pune Warriors) ತಂಡವನ್ನು 1,702 ಕೋಟಿ ರೂ. ನೀಡಿ ಖರೀದಿಸಿತ್ತು. ಭಾರತೀಯ ಕ್ರಿಕೆಟ್ ತಂಡದ (Team India) ಜೆರ್ಸಿ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು. 2011ರ ವಿಶ್ವಕಪ್‌ನಲ್ಲಿ (World Cup Cricket) ಟೀಂ ಇಂಡಿಯಾ ಸಹಾರಾ ಕಂಪನಿ ಪ್ರಾಯೋಜಿಸಿದ್ದ ಜೆರ್ಸಿಯನ್ನು ಧರಿಸಿತ್ತು.

team india 2011 world Cup Cricket

ಸೆಬಿಗೆ ಸಹಾರಾ ಸಮೂಹದ ಕಂಪನಿಗಳು ಹೂಡಿಕೆದಾರರಿಗೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ 2009ರಲ್ಲಿ ದೂರು ದಾಖಲಾಗುತ್ತದೆ. ಈ ಬಗ್ಗೆ ತನಿಖೆ ಮುಂದುವರಿದಾಗ ಮೂರು ಕೋಟಿಗೂ ಹೆಚ್ಚು ಹೂಡಿಕೆದಾರರಿಗೆ 24,000 ಕೋಟಿ ರೂ. ವಂಚಿಸಿರುವ ಹಗರಣ ಬಯಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಸುಬ್ರತಾ ರಾಯ್ ತಿಹಾರ್‌ ಜೈಲು ಸೇರಿದ್ದರು. ಇದನ್ನೂ ಓದಿ: ನನ್ನ ಮಗನ ಹೆಸರಿಗೂ ದ್ರಾವಿಡ್‌-ಸಚಿನ್‌ ಹೆಸರಿಗೂ ಸಂಬಂಧವಿಲ್ಲ: ಕ್ರಿಕೆಟಿಗ ರಚಿನ್‌ ತಂದೆ

ಸುಬ್ರತಾ ರಾಯ್ ಅವರು ಪತ್ನಿ ಸ್ವಪ್ನಾ ರಾಯ್ ಮತ್ತು ಇಬ್ಬರು ಪುತ್ರರಾದ ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಅವರನ್ನು ಅಗಲಿದ್ದಾರೆ.

 
 

 

Share This Article