ಚಿಕ್ಕಮಗಳೂರು: ಮಲೆನಾಡ ಮನೆ-ಮನಗಳಲ್ಲಿ ಆತ್ಮೀಯತೆಯ ಭಾವನಾತ್ಮಕ ಕೊಂಡಿ ಬೆಸೆದಿದ್ದ ದೇಶದ ಮೊದಲ ಸಹಕಾರ ಸಾರಿಗೆ ಸಂಸ್ಥೆ ಕಷ್ಟದ ಸುಳಿಗೆ ಸಿಲುಕಿ ಬೀಗ ಹಾಕುವ ಹಂತ ತಲುಪಿದೆ. ಮಾಲೀಕರೇ ಇಲ್ಲದೆ ಕಾರ್ಮಿಕರೇ ನಡೆಸುತ್ತಿದ್ದ ಈ ಸಹಕಾರ ಸಾರಿಗೆ ಸಂಸ್ಥೆಯ ಬೆನ್ನಿಗೆ ಸರ್ಕಾರ ನಿಲ್ಲದಿದ್ದರೆ ಈ ಸಾರಿಗೆ ಸಂಸ್ಥೆ ಇನ್ನು ನೆನಪಾಗಿ ಮಾತ್ರ ಉಳಿಯುತ್ತೆ.
Advertisement
ಕೆಲಸಗಾರರೆಲ್ಲರೂ ಮಾಲೀಕರೇ ಆಗಿದ್ದ ಈ ಸಂಸ್ಥೆಯಲ್ಲಿ 65ಕ್ಕೂ ಹೆಚ್ಚು ಬಸ್‍ಗಳು ಮಲೆನಾಡಿಗರ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಪ್ರತಿ ನಿತ್ಯ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 60-70 ಸಾವಿರ ಜನ ನಿತ್ಯ ಪ್ರಯಾಣಿಸುತ್ತಿದ್ದರು. ಆದರೆ, ಬರುತ್ತಿದ್ದ ಹಣ ನಿತ್ಯದ ಡಿಸೇಲ್‍ಗೂ ಆಗಾದ ಕಾರಣ 30 ವರ್ಷಗಳಿಂದ ದಣಿವರಿಯದೆ ಓಡಿದ ಬಸ್ಸಿನ ಚಕ್ರಗಳು ಚಿರನಿದ್ರೆಯತ್ತ ಧಾವಿಸಿವೆ. ಸಹಾಯಕ್ಕಾಗಿ ಸರ್ಕಾರದ ಕದ ಬಡಿದರೂ ಆಶ್ವಾಸನೆ ಸಿಕ್ಕಿತೇ ವಿನಃ, ಸ್ಪಂದನೆ ಸಿಕ್ಕಲಿಲ್ಲ. ಹಾಗಾಗಿ, ನಿಸ್ವಾರ್ಥ ಸಾರಿಗೆ ಸಂಸ್ಥೆ ತನ್ನ ಸಂಚಾರವನ್ನ ಸ್ಥಗಿತಗೊಳಿಸಿದೆ.
Advertisement
Advertisement
ಜನವರಿ 3, 2017ರಂದು ಬೆಳ್ಳಿಹಬ್ಬ ಆಚರಿಸಿಕೊಂಡ ಸಾರಿಗೆ ಸಂಸ್ಥೆ ನಷ್ಟವನ್ನ ಸರಿದೂಗಿಸಲಾಗದೆ ವೇತನ ಹೆಚ್ಚಳ, ಬೋನಸ್ ಯಾವೂದನ್ನೂ ನೀಡದೆ ವರ್ಷಗಳೇ ಕಳೆದಿದೆ. ವಿಮೆ ಕಟ್ಟಲೂ ಕೂಡ ಸಂಸ್ಥೆ ಪರದಾಡಿತ್ತು. ಈ ಸಾರಿಗೆ ಸಂಸ್ಥೆಯ ನೆರವಿಗೆ ಸರ್ಕಾರ ಬರದಿದ್ದರೆ ಏಷ್ಯಾ ಖಂಡದಲ್ಲೇ ಮೊದಲ ಹಾಗೂ ಮಾದರಿಯಾದ ಸಂಸ್ಥೆ ಶೀಘ್ರವೇ ಬಾಗಿಲು ಹಾಕಲಿದೆ. 300ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಹಾಗಾಗಿ ಇಂದು ಕಾರ್ಮಿಕರು ಸಂಚಾರವನ್ನ ಸ್ಥಗಿತಗೊಳಿಸಿ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಕೂಡ ಭಾಗವಹಿಸುವ ಸಾಧ್ಯತೆ ಇದ್ದು, ಸ್ಥಳೀಯ ನಾಯಕರು ಸಮಾಲೋಚನೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Advertisement
ಸರ್ಕಾರದ ನೆರವಿಗಾಗಿ ಸಂಸ್ಥೆಯವರು ಸಿಎಂ ಬಿ.ಎಸ್.ವೈ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅಂದು ಯಡಿಯೂರಪ್ಪ ಕೂಡ ಟ್ಯಾಕ್ಸ್ ವಿಚಾರದಲ್ಲಿ ನೆರವಿಗೆ ನಿಲ್ಲೋ ಭರವಸೆ ನೀಡಿದ್ದರು. ಆದ್ರೆ ಯಾವುದೂ ಈಡೇರಲಿಲ್ಲ. ದಿನದಿಂದ ದಿನಕ್ಕೆ ಸಮಸ್ಯೆ ಜಟಿಲವಾಗ್ತಿರುವುದರಿಂದ ಕಾರ್ಮಿಕರು ಸಂಚಾರವನ್ನ ಸ್ಥಗಿತಗೊಳಿಸೋ ತೀರ್ಮಾನಕ್ಕೆ ಬಂದಿದ್ದಾರೆ. ಸರ್ಕಾರ ಶೀಘ್ರವೇ 6.50 ಕೋಟಿ ಹಣ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತೆ. ಆ ಕ್ಷಣದಿಂದಲೇ ಮತ್ತೆ ಕಾರ್ಯಾರಂಭ ಮಾಡುತ್ತೇವೆ ಅಂತಿದ್ದಾರೆ ಕಾರ್ಮಿಕರು. ಸರ್ಕಾರದ ನಡೆ ಮೇಲೆ ಒಂದು ಸಂಸ್ಥೆಯ ಭವಿಷ್ಯವಂತೂ ನಿಂತಿದೆ.
ಸಹಕಾರ ಸಾರಿಗೆ ನಡೆದು ಬಂದ ಹಾದಿ:
90ರ ದಶಕದಲ್ಲಿ ಲಾಭದಲ್ಲಿದ್ದ ಶಂಕರ್ ಟ್ರಾನ್ಸ್‌ಪೋರ್ಟ್‌ನ ಸಿಬ್ಬಂದಿಗಳು ಮಾಲೀಕರ ಬಳಿ ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಟ್ಟು 2 ತಿಂಗಳಿಗೂ ಹೆಚ್ಚು ಕಾಲ ಮುಷ್ಕರ ಕೈಗೊಂಡಿದ್ರು. ಕಾರ್ಮಿಕರ ಬೇಡಿಕೆ ಈಡೇರಿಸಲು ಒಪ್ಪದ ಮಾಲೀಕರು ಸಂಸ್ಥೆಯನ್ನ ಮುಚ್ಚಿದರು. ಕೆಲಸವಿಲ್ಲದೆ ಅತಂತ್ರರಾದ 123 ಕಾರ್ಮಿಕರು ಶಂಕರ್ ಟ್ರಾನ್ಸ್‌ಪೋರ್ಟ್‌ನವರು ಕೊಟ್ಟ ಪರಿಹಾರ 12 ಲಕ್ಷ ಹಣವನ್ನೇ ಬಂಡವಾಳವನ್ನಾಗಿಸಿಕೊಂಡು, ಅದೇ ಸಂಸ್ಥೆಯ 6 ಹಳೇ ಬಸ್‍ಗಳನ್ನ ಕೊಂಡು 1991 ಮಾರ್ಚ್‍ನಲ್ಲಿ 8 ರಂದು ಸಹಕಾರ ಸಾರಿಗೆ ಆರಂಭಿಸಿದ್ದರು. ಅಂದು ಕಾರ್ಮಿಕ ಮುಖಂಡ ಬಿ.ಕೆ.ಸುಂದರೇಶ್ ಕಾರ್ಮಿಕರ ಬೆನ್ನಿಗೆ ನಿಂತಿದ್ದರು.
ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಯ ದಟ್ಟಕಾನನದ ಕುಗ್ರಾಮದಲ್ಲೂ ಸಾರಿಗೆ ಬಸ್ ಸಂಚರಿಸಿತ್ತು. 6 ಬಸ್ಸುಗಳಿಂದ ಆರಂಭವಾದ ಸಂಸ್ಥೆಯಲ್ಲೀಗ 75 ಬಸ್‍ಗಳಿವೆ. 1998ರಲ್ಲಿ ಕೊಪ್ಪದಲ್ಲಿ ಕಚೇರಿ ನಿರ್ಮಿಸಿದ್ದಲ್ಲದೆ ಕಂಪ್ಯೂಟರ್ ಬಳಸಿದ ಹೆಗ್ಗಳಿಕೆಯೂ ಈ ಸಂಸ್ಥೆಗಿದೆ. ಈ ಸಂಸ್ಥೆಯ ಸಾಹಸಕ್ಕೆ ನಿಬ್ಬೆರಗಾದ ಜಪಾನಿನ ಕ್ಯೊಟೊ ನಗರದ ರಿಟ್ಸುಮೆಕಿನ್ ಯುನಿರ್ವಸಿಟಿಯ ತಂಡ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ತನ್ನ ದೇಶದ ಸಹಕಾರ ಸಂಸ್ಥೆಯಲ್ಲಿ ಅಳವಡಿಸಿಕೊಂಡಿತು. ಮಂಗಳೂರು ವಿವಿಯ ಪ್ರಾಧ್ಯಾಪಕರು ಇದೇ ಸಾರಿಗೆ ಸಂಸ್ಥೆ ಬಗ್ಗೆ ಅಧ್ಯಯನ ನಡೆಸಿ ಪಿಎಚ್‍ಡಿ ಪಡೆದರು. ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ ಸಹಕಾರ ಸಾರಿಗೆಯ ಯಶೋಗಾಥೆ ಪಠ್ಯವಾಯ್ತು. ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮಂಡಿಸಿದ ಪ್ರಬಂಧಕ್ಕೆ ಕೊಲ್ಲಾಪುರದ ಶಿವಾಜಿ ವಿವಿ ಪಿಎಚ್‍ಡಿಯನ್ನೇ ನೀಡಿ ಗೌರವಿಸಿದೆ.
ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ವಿದ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಿಯಾಯಿತಿ ಕೊಟ್ಟು, ದಟ್ಟಕಾನನ, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ಅಂತಹಾ ಸಂಸ್ಥೆ ಈಗ, ಸರ್ಕಾರದ ರೀತಿ-ರಿವಾಜುಗಳಿಂದ ಬೀಗ ಹಾಕುವ ಹೊಸ್ತಿಲಲ್ಲಿದೆ. ಸರ್ಕಾರ ಈ ಸಂಸ್ಥೆಗೆ ನೆರವು ನೀಡಿದ್ದೇ ಆದಲ್ಲಿ ಇದರ ಗತವೈಭವದ ದಿನ ಮತ್ತೆ ಆರಂಭಗೊಳ್ಳುತ್ತೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ.