60 ಹಿರಿಯ ಸಹಕಾರಿ ಧುರೀಣರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ- ನಟ ಪುನೀತ್‌ಗೆ ಮರಣೋತ್ತರ ಪ್ರಶಸ್ತಿ

Public TV
3 Min Read
sahakara ratna award

ಬೆಂಗಳೂರು: ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ 60 ಹಿರಿಯ ಸಹಕಾರಿಗಳಿಗೆ 2021-22ನೇ ಸಾಲಿನ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ಜೊತೆಗೆ ನಟ ಪುನೀತ್ ರಾಜ್‌ಕುಮಾರ್ ಹಾಗೂ ಕರೇಗೌಡ ಸಿದ್ಲಿಂಗಪ್ಪಗೌಡ ಸಣ್ಣ ಗೌಡ್ರ ಅವರಿಗೆ ಮರಣೋತ್ತರ ಪ್ರಶಸ್ತಿ ಘೋಷಣೆ ಮಾಡಲಾಯಿತು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳಿ ಮತ್ತು ಸಹಕಾರ ಇಲಾಖೆ ವತಿಯಿಂದ ಕೆಂಗೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಹಕಾರಿಗಳಿಗೆ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇಶದಲ್ಲಿ ಹಸಿರುಕ್ರಾಂತಿಯಾಗಿದೆ. ಆದರೆ ಕೃಷಿಗೆ ತಕ್ಕಂತೆ ರೈತ ಬೆಳೆದಿಲ್ಲ. ಯಶಸ್ವಿನಿ ಯೋಜನೆ ಮರು ಜಾರಿ ಮಾಡುವುದರ ಜೊತೆಗೆ, ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಇದರಿಂದ ರೈತರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು. ಇದನ್ನೂ ಓದಿ: ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ: ಸಿಎಂ ಬೊಮ್ಮಾಯಿ

bommai 5

ಯಶಸ್ವಿನಿ ಯೋಜನೆ ಮರು ಜಾರಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ಯೋಜನೆಗಾಗಿ 300 ಕೋಟಿ ರೂ. ಹಣವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ರಾಜ್ಯಾದ್ಯಂತ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು. ರೈತರಿಗೆ ಯಂತ್ರೋಪಕರಣಕ್ಕೆ ಅಗತ್ಯವಿರುವ ಡೀಸೆಲ್, ಪೆಟ್ರೋಲ್‌ಗೆ 500 ಕೋಟಿ ರೂ. ಹಣವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದು ಹೇಳಿದರು.

33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 24 ಸಾವಿರ ಕೋಟಿ ರೂ. ಸಾಲ ವಿತರಣೆ ಮಾಡಲಾಗುವುದು. ಕೃಷಿಯಲ್ಲಿ ಬಂಡವಾಳ ಹೂಡಿಕೆ ಆಗಬೇಕು. ಕೃಷಿ ಆರ್ಥಿಕತೆಯ ಮೂಲ. ರೈತರು ಕೇವಲ ಉತ್ಪಾದಕರಲ್ಲ, ಅವರು ಬಳಕೆದಾರರು ಕೂಡ ಎಂದು ಹೇಳಿದರು.

ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಕಾರ ಕ್ಷೇತ್ರಕ್ಕೆ ಸಾಕಷ್ಟು ಒತ್ತು ಕೊಟ್ಟಿದ್ದಾರೆ. ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಎರಡನೇ ಅವಧಿಗೂ ಬಿರೇನ್ ಸಿಂಗ್ ಮಣಿಪುರಕ್ಕೆ ಸಿಎಂ

sahakara ratna award 1

ಸಹಕಾರ ರತ್ನ ಪ್ರಶಸ್ತಿಗೆ ಯಾವುದೇ ಪ್ರಭಾವ ಬಳಸಬಾರದು. ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಬೇಕು ಎಂಬ ಮುಖ್ಯಮಂತ್ರಿಗಳ ಆದೇಶದಂತೆ 60 ಸಹಕಾರಿಗಳನ್ನು ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಯಶವಂತಪುರ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಕಷ್ಟು ಅನುದಾನ ನೀಡಿದ್ದಾರೆ. 21 ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ಒಳಚರಂಡಿ ಕಾಮಗಾರಿ ಏಪ್ರಿಲ್‌ಗೆ ಮುಕ್ತಾಯವಾಗಲಿದೆ ಎಂದರು.

2021ನೇ ಸಾಲಿನಲ್ಲಿ 20,810 ಕೋಟಿ ರೂ. ಶೂನ್ಯ ಬಡ್ಡಿ ಸಾಲ ನೀಡುವ ಗುರಿ ನೀಡಲಾಗಿದ್ದು, ಈಗಾಗಲೇ 16 ಸಾವಿರ ಕೋಟಿ ರೂ. ಹಣ ವಿತರಣೆಯಾಗಿದೆ. ತಿಂಗಳ ಅಂತ್ಯದ ವೇಳೆಗೆ ನಿಗದಿತ ಗುರಿ ತಲುಪಲಾಗುವುದು ಎಂದು ಹೇಳಿದರು.

sahakara ratna award 3

ಸಹಕಾರಿಗಳ ಬೇಡಿಕೆಯಂತೆ ಯಶಸ್ವಿನಿ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾರಿಗೊಳಿಸಿದರು. ಸಹಕಾರ ರತ್ನ ಪ್ರಶಸ್ತಿಗೆ ಪ್ರಭಾವ ಬಳಸಬಾರದು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಅದರಂತೆ ಸಹಕಾರಿ ರತ್ನ ಪ್ರಶಸ್ತಿಗೆ ಸಹಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಇದೇ ಸಮಾರಂಭದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಲ್ಕು ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ವರ್ಚುವಲ್ ಮೂಲಕ ಉದ್ಘಾಟನೆ ಮಾಡಲಾಯಿತು. ಇದನ್ನೂ ಓದಿ: ನಾವು ಸಹ ಹಿಂದೂಗಳೇ, ಭಗವದ್ಗೀತೆಯನ್ನು ಇಡೀ ದೇಶದ ಜನರಿಗೆ ತಲುಪಿಸಿದ್ದು ಕಾಂಗ್ರೆಸ್: ಡಿಕೆಶಿ

sahakara ratna award 2

ಕಾರ್ಯಕ್ರಮದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಅಬಕಾರಿ ಸಚಿವ ಗೋಪಾಲಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಸಂಸದ ಡಿ.ವಿ.ಸದಾನಂದಗೌಡ, ಸಹಕಾರ ಮಹಾಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮತ್ತು ವಿವಿಧ ಸಹಕಾರ ಮಂಡಳಿಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *