ಶಿವಮೊಗ್ಗ: ಕಳೆದ ಮೂರ್ನಾಲ್ಕು ದಿನಗಳಿಂದ ಹೊತ್ತಿ ಉರಿದಿದ್ದ ಉತ್ತರ ಕನ್ನಡ ಇನ್ನೂ ಬೂದಿ ಮುಚ್ಚಿ ಕೆಂಡದಂತಿದೆ.
ಸಿದ್ಧಾಪುರ, ಮುರುಡೇಶ್ವರದಲ್ಲಿ ಬಂದ್ ನ ವದಂತಿ ಹಬ್ಬಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಬಂದ್ ಕುರಿತಂತೆ ಸುಳ್ಳು ಸಂದೇಶಗಳು ಹರಿದಾಡುತ್ತಿದ್ದವು. ಆದರೆ ಯಾವುದೇ ಪಕ್ಷ ಅಧಿಕೃತವಾಗಿ ಬಂದ್ ಗೆ ಕರೆ ಕೊಟ್ಟಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ 3 ದಿನಗಳ ಕಾಲ ಸಭೆ, ಸಮಾರಂಭ, ಪ್ರತಿಭಟನೆಗಳಿಗೆ ನಿಷೇಧ ಹೇರಲಾಗಿದ್ದು, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಕುಮಟಾ ಮತ್ತು ಶಿರಸಿ ಸಹಜ ಸ್ಥಿತಿಗೆ ಮರಳುತ್ತಿದ್ದರೆ, ಮೇಸ್ತಾ ಸಾವು ಖಂಡಿಸಿ ಇವತ್ತು ಶಿವಮೊಗ್ಗ ಬಂದ್ ಗೆ ಸಂಘ ಪರಿವಾರ ಕರೆ ನೀಡಿದೆ. 144 ಸೆಕ್ಷನ್ ಜಾರಿ ಮಾಡಿ ಹೋರಾಟ ಕೈ ಬಿಡುವಂತೆ ಎಸಿ ಹಾಗೂ ಎಎಸ್ಪಿ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಗಿತ್ತು.
ಆದರೆ ಏನೇ ಆದರೂ ಪ್ರತಿಭಟನೆ ನಿಶ್ಚಿತ ಎಂದು ಸಂಘ ಪರಿವಾರದ ನಾಯಕರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಂಘ ಪರಿವಾರ ಇವತ್ತು ಗಣಪತಿ ದೇವಾಲಯದಿಂದ ಎಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.