ಬೆಂಗಳೂರು: ಸಾಮಾನ್ಯವಾಗಿ ಮನೆಯ ಬೆಲೆ ಬಾಳುವ ವಸ್ತುಗಳನ್ನು ಕಾಪಾಡಿಕೊಳ್ಳಲು ಮನೆಯ ಮಲಗುವ ಕೊಠಡಿ, ಅಲ್ಮೆರಾಗಳಲ್ಲಿ ಸೇಫ್ಟಿ ಲಾಕರ್ ಮಾಡಿಸಲಾಗುತ್ತದೆ. ತೀರಾ ಇತ್ತೀಚೆಗೆ ಉದ್ಯಮಿಯೊಬ್ಬರು ತನ್ನ ಮನೆಯ ಬಾತ್‍ರೂಮ್‍ನಲ್ಲಿ ಸೇಫ್ಟಿ ಲಾಕರ್ ಮಾಡಿಸಿ ಸುದ್ದಿಯಾಗಿದ್ದರು. ಆದರೆ ಇಲ್ಲೊಬ್ಬ ಮನೆಯ ಬಾಗಿಲಿನ ವಾಸ್ಕಲ್‍ನಲ್ಲೇ ಸೀಕ್ರೆಟ್ ಲಾಕರ್ ಮಾಡಿಸಿದ್ದಾನೆ.
ಹೌದು, ಐಟಿ ಅಧಿಕಾರಿಗಳು ಉದ್ಯಮಿ ಚಳ್ಳಕೆರೆಯ ವೀರೇಂದ್ರ ಮನೆ ಮೇಲೆ ದಾಳಿ ಮಾಡಿದಾಗ ಬಾತ್ ರೂಮ್‍ನಲ್ಲಿ ಸೀಕ್ರೆಟ್ ಲಾಕರ್ ಅಳವಡಿಸಿದ್ದ ವಿಚಾರ ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ನಗರದ ಯಲಹಂಕದ ರೇಣುಕಾ ಪ್ರಸಾದ್ ಎಂಬಾತ ತನ್ನ ಮನೆಯ ಬಾಗಿಲಿನಲ್ಲೇ ಸೀಕ್ರೆಟ್ ಲಾಕರ್ ಮಾಡಿಸಿಕೊಂಡಿದ್ದಾನೆ.
Advertisement
Advertisement
ರೇಣುಕಾ ಪ್ರಸಾದ್ ಮನೆಯ ಬಾಗಿಲನ್ನು ದೊಡ್ಡ ಮರದ ದಿಮ್ಮಿಯಿಂದ ಮಾಡಿಸಲಾಗಿದ್ದು, ಇದರಲ್ಲಿ ಲಾಕರ್ ಇದೆ ಎನ್ನುವುದು ಯಾರಿಗೂ ಕೂಡ ಗೊತ್ತಾಗುವುದಿಲ್ಲ. ವಿಶೇಷ ಎಂದರೆ ಈ ಸೀಕ್ರೆಟ್ ಲಾಕರ್ ಗೆ ಸೆನ್ಸರ್ ಸಹ ಮಾಡಿಸಲಾಗಿದ್ದು, ಲಾಕರ್ ಓಪನ್ ಆಗ ಬೇಕು ಎಂದರೆ ರೇಣುಕಾ ಪ್ರಸಾದ್‍ನ ಕಿರುಬೆರಳು ಸ್ಕಾನ್ ಮಾಡಬೇಕಾಗುತ್ತದೆ. ಇಲ್ಲದೇ ಇದ್ದರೆ ಲಾಕರ್ ಓಪನ್ ಮಾಡಲು ಸಾಧ್ಯವೇ ಇಲ್ಲ.
Advertisement
ಸೀಕ್ರೆಟ್ ಲಾಕರ್ ಬಹಿರಂಗವಾಗಿದ್ದು ಹೇಗೆ?: ಜನವರಿ 11 ರಂದು ಯಲಹಂಕದ ಕೋಟ್ಯಾಧಿಪತಿ ಮಲ್ಲಿಕಾರ್ಜುನ್ ಎಂಬವರನ್ನು ಅಪಹರಣ ಮಾಡಿ 80 ಲಕ್ಷ ಹಣ ಪಡೆದು ಅವರನ್ನು ಬಿಡುಗಡೆ ಮಾಡಿದ್ದರು. ಆದರೆ ಹಣವನ್ನು ಪಡೆದ ಆರೋಪಿಗಳು ತಲಾ 20 ಲಕ್ಷದಂತೆ ಹಣ ಹಂಚಿಕೊಂಡು ಸುಮ್ಮನಾಗಿದ್ದಾರೆ.
Advertisement
ಘಟನೆ ಕುರಿತು ಮಾಹಿತಿ ತಿಳಿದ ಬಳಿಕ ಆರೋಪಿಗಳಿಗಾಗಿ ಬೆನ್ನತ್ತಿದ ಪೊಲೀಸರಿಗೆ ರೇಣುಕಾ ಪ್ರಸಾದ್, ಆರ್ಶಿಯಾ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಾರೆ. ಈ ವೇಳೆ ಪ್ರಕರಣದ ಪೂರ್ಣ ಮಾಹಿತಿ ಪಡೆದ ಪೊಲೀಸರು ಅಪಹರಣ ಮಾಡಿ ಮಲ್ಲಿಕಾರ್ಜುನ್ ಅವರಿಂದ ಪಡೆದ ಹಣವನ್ನು ವಶ ಪಡಿಸಲು ಮುಂದಾಗುತ್ತಾರೆ.
ಈ ವೇಳೆ ಅಪಹರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರೋಪಿ ರೇಣುಕಾ ಪ್ರಸಾದ್ ಮನೆಗೆ ಪೊಲೀಸರು ಹಣ ವಶಪಡಿಸಿಕೊಳ್ಳಲು ತೆರಳಿದ್ದಾರೆ. ಆದರೆ ಮನೆಯ ಎಲ್ಲಾ ಕಡೆ ಹುಡುಕಿದರೂ ಬಚ್ಚಿಟ್ಟಿದ ಹಣ ಪೊಲೀಸರಿಗೆ ಸಿಕ್ಕಿರಲಿಲ್ಲ. ತದನಂತರ ಆರೋಪಿಯನ್ನು ತೀವ್ರ ವಿಚಾರಣೆ ನಡೆಸಿದ ವೇಳೆ ಸೀಕ್ರೆಟ್ ಲಾಕರ್ ನ ಸತ್ಯಾಂಶ ಬೆಳಕಿಗೆ ಬಂದಿದೆ. ಆರೋಪಿ ತನ್ನ ಕಿರುಬೆರಳಿನಿಂದ ಸೀಕ್ರೆಟ್ ಲಾಕರ್ ಓಪನ್ ಮಾಡಿದ್ದು, ಅದರಲ್ಲಿ 20 ಲಕ್ಷ ಹಣ, ಚಿನ್ನಾಭರಣ ಮತ್ತು ಒಂದು ಪರವಾನಗಿ ಹೊಂದಿರುವ ಗನ್ ಪತ್ತೆಯಾಗಿದೆ.