LatestMain PostNational

ಅನಾರೋಗ್ಯದಿಂದ ಜಾಮೀನಿನ ಮೇಲೆ ಹೊರಬಂದಿರೋ ಪ್ರಜ್ಞಾ ಸಿಂಗ್‌ರಿಂದ ಕ್ರಿಕೆಟ್, ಡ್ಯಾನ್ಸ್ – ವೀಡಿಯೋ ವೈರಲ್

ಭೋಪಾಲ್: ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಅನಾರೋಗ್ಯದ ಕಾರಣದಿಂದ ಜಾಮೀನಿನ ಮೇಲೆ ಹೊರಬಂದಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಕ್ರಿಕೆಟ್ ಆಟದಲ್ಲಿ ನಿರತರಾಗಿರುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅವರು ಕ್ರಿಕೆಟ್ ಆಡುತ್ತಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಆಗಿರುವ ಅವರು, ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೂ ಅವರು ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಬಾಸ್ಕೆಟ್ ಬಾಲ್ ಆಟ, ನೃತ್ಯ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಜಾಮೀನಿನ ಮೇಲೆ ಹೊರಬಂದವರು ಕಾರ್ಯಕ್ರಮಗಳಲ್ಲಿ ಹೀಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದಕ್ಕೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ವೀಡಿಯೋದಲ್ಲಿ ಏನಿದೆ?
ಭೋಪಾಲ್‌ನ ಶಕ್ತಿ ನಗರ ಪ್ರದೇಶದಲ್ಲಿ ಕೇಸರಿ ವಸ್ತ್ರಧಾರಿ ಸಂಸದೆ ಬ್ಯಾಟ್ ಹಿಡಿದುಕೊಂಡಿದ್ದಾರೆ. ಅವರ ಸುತ್ತ ಹಲವಾರು ಜನರಿದ್ದಾರೆ. ಒಬ್ಬರು ಬೌಲಿಂಗ್ ಮಾಡಿದ್ದು, ಬಾಲ್ ಅನ್ನು ಸಂಸದೆ ಹಿಟ್ ಮಾಡಿದ್ದಾರೆ. ಸಂಸದೆ ಸುತ್ತ ಇರುವ ಜನರೆಲ್ಲರೂ ಪ್ರೋತ್ಸಾಹಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ.

ಈ ವೀಡಿಯೋ ಹೆಚ್ಚು ವೀವ್ಸ್ ಪಡೆದಿದ್ದು, ಸಂಸದೆ ಯಾವುದೇ ಅನಾರೋಗ್ಯಕ್ಕೆ ತುತ್ತಾದವರ ಹಾಗೇ ಕಾಣುವುದಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

ಈ ಹಿಂದೆ ನವರಾತ್ರಿ ಆಚರಣೆ ವೇಳೆ ದೇಗುಲಕ್ಕೆ ಭೇಟಿ ನೀಡಿದ್ದಾಗ ಗಾರ್ಬಾ ನೃತ್ಯವನ್ನು ಸಂಸದೆ ಪ್ರದರ್ಶಿಸಿದ್ದರು. ಕೆಲ ದಿನಗಳ ನಂತರ ಬಾಸ್ಕೆಟ್ ಬಾಲ್ ಹಾಗೂ ಮಹಿಳಾ ಆಟಗಾರರೊಂದಿಗೆ ಕಬ್ಬಡಿಯನ್ನು ಆಡಿದ್ದ ವೀಡಿಯೋ ಭಾರೀ ವೈರಲ್ ಆಗಿತ್ತು. ಆಗ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ್ದ ರೈತರು ಪಂಜಾಬ್‌ ಚುನಾವಣೆಯಲ್ಲಿ ಕಣಕ್ಕೆ

2008ರ ಮಾಲೆಗಾಂವ್ ಬಾಂಬ್ ಸ್ಫೋಟದಲ್ಲಿ 10 ಜನರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದರು. ಈ ಪ್ರಕರಣದ ಆರೋಪಿಯಾಗಿ ಪ್ರಜ್ಞಾ ಠಾಕೂರ್ ಗುರುತಿಸಿಕೊಂಡಿದ್ದಾರೆ. 2017ರಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗಿತ್ತು. ನಂತರ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ

Leave a Reply

Your email address will not be published.

Back to top button