ಕಲಬುರಗಿ: ಗುತ್ತಿಗೆದಾರ ಸಚಿನ್ ಪಾಂಚಾಳ (Contractor Sachin Panchal) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿಗೆ (Andola shree) ಸಿಐಡಿ (CID) ನೋಟಿಸ್ ಜಾರಿಗೊಳಿಸಿದೆ.
ತನ್ನ ಸಾವಿಗೂ ಮುನ್ನ ಸಚಿನ್ ಬರೆದಿಟ್ಟ ಡೆತ್ ನೋಟ್‌ನಲ್ಲಿ ಸಿದ್ದಲಿಂಗ ಸ್ವಾಮೀಜಿ, ಕಲಬುರಗಿ ನಗರ ಬಿಜೆಪಿ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಚಿತ್ತಾಪುರದ ಮಣಿಕಂಠ ರಾಠೋಡ್ ಹಾಗೂ ಶಾಸಕ ಬಸವರಾಜ್ ಮತ್ತಿಮೂಡ ಹತ್ಯೆಗೂ ಸಂಚು ರೂಪಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಕೂಲಂಕುಷ ತನಿಖೆ ಕೈಗೊಳ್ಳಲು ಜ.29 ಮತ್ತು 30ರ ಪೈಕಿ ಯಾವುದಾದರೂ ಒಂದು ದಿನ ಬೆಂಗಳೂರಿನ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಿದ್ದಲಿಂಗ ಸ್ವಾಮೀಜಿಗೆ ಸಿಐಡಿ ನೋಟಿಸ್ ನೀಡಿದೆ.
Advertisement
Advertisement
ಸಚಿನ್ ಆತ್ಮಹತ್ಯೆ ಬಳಿಕ ಪತ್ತೆಯಾದ ಡೆತ್ ನೋಟ್ ಮೂಲಕ ಈ ನಾಲ್ವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಅಂಶ ಬಯಲಾಗುತ್ತಿದ್ದಂತೆಯೇ ಚಂದು ಪಾಟೀಲ್ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರ ಪೈಕಿ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿಯನ್ನು ಪ್ರಮುಖ ಸಾಕ್ಷಿ ಎಂದು ಪರಿಗಣಿಸಿ ಸಿಐಡಿ ನೋಟಿಸ್ ಜಾರಿಗೊಳಿಸುವ ಮೂಲಕ ತನಿಖೆ ಆರಂಭಿಸಿದೆ.