2020ಕ್ಕೆ ಸ್ಫೂರ್ತಿದಾಯಕ ವಿಡಿಯೋ ಟ್ವೀಟ್ ಮಾಡಿದ ಸಚಿನ್ – ಧನ್ಯವಾದ ತಿಳಿಸಿದ ಬಾಲಕ

Public TV
2 Min Read
sachin new year tweet

ರಾಂಚಿ: 2020ಕ್ಕೆ ಸ್ವಾಗತ ಕೋರಿರುವ ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್, ಮುಂದಿನ ದಶಕವನ್ನು ಮಕ್ಕಳ ಭವಿಷ್ಯಕ್ಕಾಗಿ ಮೀಸಲಿರುಸವುದಾಗಿ ತಿಳಿಸಿದ್ದಾರೆ. ಅಲ್ಲದೇ ಬಾಲಕನೊಬ್ಬನ ವಿಡಿಯೋ ಟ್ವೀಟ್ ಮಾಡಿ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

ಸಚಿನ್ ಟ್ವೀಟ್ ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸದ್ಯ ಈ ವಿಡಿಯೋದಲ್ಲಿರುವ ಬಾಲಕ ಮದ್ದ ರಾಮ್ ಸಚಿನ್ ಅವರಿಗೆ ಧನ್ಯವಾದ ತಿಳಿಸಿದ್ದಾನೆ.

ಸಚಿನ್ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ 13 ವರ್ಷದ ಮದ್ದ ರಾಮ್ ಎಂಬ ಬಾಲಕ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಾ ರನ್ ಪಡೆಯುತ್ತಿರುವುದನ್ನು ಕಾಣಬಹುದು. ಆದರೆ ಬಾಲಕ ಮದ್ದ ರಾಮ್ ವಿಕಲ ಚೇತನ ಬಾಲಕನಾಗಿದ್ದು, ಆತನ ಜೀವನೋತ್ಸಾಹಕ್ಕೆ ಫಿದಾ ಆಗಿದ್ದ ಸಚಿನ್ ವಿಡಿಯೋ ಟ್ವೀಟ್ ಮಾಡಿದ್ದರು.

ಬಾಲಕ ಮದ್ದ ರಾಮ್ ಚತ್ತೀಸ್‍ಗಢದ ದಂತೇವಾಡ ಜಿಲ್ಲೆಯ ಕಾಂಟೆಕಲ್ಯಾಣ್ ಎಂಬ ಸಣ್ಣ ಗ್ರಾಮದ ನಿವಾಸಿಯಾಗಿದ್ದು, ಕ್ರಿಕೆಟ್ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದಾನೆ. ರಾಮ್ ಮಂಡಿಯ ಸಹಾಯದಿಂದಲೇ ತೆವಳುತ್ತಾ ರನ್ ಪಡೆಯುತ್ತಿದ್ದ. ಆ ಬಳಿಕ ಸ್ಟ್ರೈಕ್ ನಲ್ಲಿದ್ದ ಬಾಲಕನಿಗೆ ಮುಂದೇ ಸಾಗಿ ಬ್ಯಾಟ್ ಕೂಡ ನೀಡುತ್ತಿದ್ದ. ಈ ವಿಡಿಯೋ ಹಲವರಿಗೆ ಸ್ಫೂರ್ತಿದಾಯಕವಾಗಿತ್ತು.

Sachin Tendulkar Main

‘ಈ ಸ್ಫೂರ್ತಿದಾಯಕ ವಿಡಿಯೋದೊಂದಿಗೆ ಹೊಸ ವರ್ಷವನ್ನು ಆರಂಭಿಸಿ. ವಿಡಿಯೋ ನನ್ನ ಮನಸ್ಸನ್ನು ಮಿಡಿಯುವಂತೆ ಮಾಡಿತು. ನಿಮಗೂ ಇದೇ ಅನುಭವವಾಗುತ್ತದೆ’ ಎಂದು ಸಚಿನ್ ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದರು. ಸಚಿನ್ ಅವರ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಬಾಲಕ ಮದ್ದ ರಾಮ್, ನನ್ನ ಕ್ರಿಕೆಟ್ ದೇವರು ಸಚಿನ್ ಅವರಿಗೆ ಧನ್ಯವಾದ. ಸಚಿನ್ ಎಂದರೇ ನನಗೆ ತುಂಬಾ ಇಷ್ಟ. ನನ್ನ ವಿಡಿಯೋವನ್ನು ಅವರು ಸ್ವತಃ ಹಂಚಿಕೊಂಡಿದ್ದು ಮತ್ತಷ್ಟು ಖುಷಿ ತಂದಿದೆ. ಅವರು ತಮ್ಮ ಗ್ರಾಮಕ್ಕೆ ಬರಬೇಕೆಂದು ಇಚ್ಛಿಸುತ್ತೇನೆ. ನಾನು ಹೆಚ್ಚಿನ ಶಿಕ್ಷಣ ಪಡೆದು ಡಾಕ್ಟರ್ ಆಗಬೇಕೆಂಬ ಆಸೆ ಇದೆ ಎಂದು ತಿಳಿಸಿದ್ದಾನೆ. ವಿಡಿಯೋ ವೈರಲ್ ಆದ ಬಳಿಕ ಸ್ಥಳೀಯ ಶಿಕ್ಷಣ ಇಲಾಖೆಯ ಬ್ಲಾಕ್ ಅಧಿಕಾರಿ ಬಾಲಕನನ್ನು ಭೇಟಿ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *