ಲಿಫ್ಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ನೀಡಿದ್ದ ಸಲಹೆಯಿಂದ ಸಚಿನ್ ಕ್ರಿಕೆಟ್ ಲೈಫ್ ಬದಲಾಯ್ತು

Public TV
2 Min Read
sachin guruprasad

ಚೆನ್ನೈ: ಸಚಿನ್ ಅಭಿಮಾನಿಗಳಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುವುದಕ್ಕೆ, ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದ ವಿಡಿಯೋ ಸಾಕ್ಷಿಯಾಗಿತ್ತು. ಬಹುವರ್ಷಗಳ ಹಿಂದೆ ಅಚನಾಕ್ ಆಗಿ ಭೇಟಿಯಾಗಿದ್ದ ಅಭಿಮಾನಿಯನ್ನು ಮತ್ತೆ ಭೇಟಿ ಮಾಡಲು ಸಹಾಯ ಮಾಡುವಂತೆ ಸಚಿನ್ ಟ್ವೀಟ್‍ನಲ್ಲಿ ಮನವಿ ಮಾಡಿದ್ದರು. ಅವರ ಆಸೆಯಂತೆ ಸದ್ಯ ಅಭಿಮಾನಿಯ ವಿವರ ಲಭಿಸಿದ್ದು, ತಮ್ಮ ಮನೆಗೆ ಬರುವಂತೆ ಸಚಿನ್ ಅವರಿಗೆ ಅಭಿಮಾನಿ ಅಹ್ವಾನ ನೀಡಿದ್ದಾರೆ.

‘ಬಹಳ ಸಮಯದ ಹಿಂದೆ ಚೆನ್ನೈ ತಾಜ್ ಹೋಟೆಲ್‍ನಲ್ಲಿ ಒಬ್ಬರನ್ನು ಭೇಟಿ ಮಾಡಿದ್ದೆ. ಅಂದು ನಾನು ಬಳಕೆ ಮಾಡುತ್ತಿದ್ದ ಎಲ್ಬೋ ಗಾರ್ಡ್ ಬಗ್ಗೆ ಆತ ಸಲಹೆ ನೀಡಿದ್ದ. ಆತನ ಸಲಹೆ ಮೇರೆಗೆ ನಾನು ಎಲ್ಬೋ ಗಾರ್ಡ್ ನಲ್ಲಿ ಬದಲಾವಣೆ ಮಾಡಿದ್ದೆ. ಇದರಿಂದಾಗಿ ನಾನು ಉತ್ತಮ ಪ್ರದರ್ಶನ ನೀಡಲು ಆರಂಭಿಸಿದೆ. ಆತ ಈಗ ಎಲ್ಲಿದ್ದಾನೆ ನನಗೆ ತಿಳಿದಿಲ್ಲ. ನಿಮಗೆ ಮಾಹಿತಿ ಇದ್ದರೆ ಹೇಳಿ’ ಎಂದು ಸಚಿನ್ ಟ್ವೀಟ್ ಮಾಡಿದ್ದರು.

ಸಚಿನ್ ಈ ವಿಡಿಯೋ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು. ಇದರೊಂದಿಗೆ ಮಾಧ್ಯಮಗಳು ಸಚಿನ್ ಹೇಳಿದ ವ್ಯಕ್ತಿಯ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿತ್ತು. ಸದ್ಯ ಆತನ ಮಾಹಿತಿ ದೊರೆತಿದ್ದು, 46 ವರ್ಷದ ಅಸಿಸ್ಟೆಂಟ್ ಪ್ರೊಫೆಸರ್ ಈ ಹಿಂದೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಆ ವೇಳೆಯೇ ಅವರು ಸಚಿನ್ ರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದರು. ಸದ್ಯ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಭಿಮಾನಿ ಸಚಿನ್ ಅವರಿಗೆ ಧನ್ಯವಾದ ಹೇಳಿ ತಮ್ಮ ಕುಟುಂಬವನ್ನು ಭೇಟಿ ಮಾಡಲು ಮನೆಗೆ ಆಹ್ವಾನ ನೀಡಿದ್ದಾರೆ.

ಸಚಿನ್ ಆ ವೇಳೆಗೆ ಅವರು ಧರಿಸುತ್ತಿದ್ದ ಎಲ್ಬೋ ಗಾರ್ಡ್ ಅವರ ಕೈನ ಅಳತೆಗಿಂತ ದೊಡ್ಡದಾಗಿತ್ತು. ಬ್ಯಾಟಿಂಗ್ ವೇಳೆ ವೇಗದ ಬೌಲರ್ ಗಳನ್ನು ಎದುರಿಸಲು ಮುಂದಾದ ವೇಳೆ ಎಲ್ಬೋ ಗಾರ್ಡ್ ನಿಂದ ಅವರು ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಅಭಿಮಾನಿ ಗ್ರಹಿಸಿ ಅಂದು ಸಲಹೆ ನೀಡಿದ್ದರು. ಸಚಿನ್ ಎಲ್ಬೋ ಬದಲಿಸಿಕೊಂಡ ಬಳಿಕ ಮತ್ತಷ್ಟು ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಹಕಾರಿಯಾಗಿತ್ತು. ಬರೋಬ್ಬರಿ 18 ವರ್ಷಗಳ ಬಳಿಕ ಸಚಿನ್ ಇದನ್ನು ನೆನಪು ಮಾಡಿಕೊಂಡು ಅಭಿಮಾನಿಯ ಭೇಟಿಗೆ ಆಸೆ ಪಟ್ಟಿದ್ದರು.

taj hotel

ಈ ಬಗ್ಗೆ ಗುರುಪ್ರಸಾದ್ ಮಾತನಾಡಿದ್ದು, ತಾಜ್ ಹೋಟೆಲಿನಲ್ಲಿ ನಾನು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೆ. ಲಿಫ್ಟಿನಲ್ಲಿ ಹತ್ತುವ ವೇಳೆ ಸಚಿನ್ ಅವರನ್ನು ಆಟೋಗ್ರಾಫ್ ಸಿಗಬಹುದಾ ಎಂದು ಕೇಳಿದೆ. ಆದರೆ ನನ್ನ ಬಳಿ ಪೇಪರ್ ಇರಲಿಲ್ಲ. ನಂತರ ಸೆಕ್ಯೂರಿಟಿ ಬೀಟ್ ಪುಸ್ತಕದ ಹಾಳೆಯನ್ನೇ ಆಟೋಗ್ರಾಫ್ ಹಾಕಿಸಿಕೊಂಡೆ. ಆ ನೋಟ್ ಬುಕ್ ಇದೀಗ ನನಗೆ ಅಮೂಲ್ಯವಾದ ಆಸ್ತಿಯಾಗಿದೆ ಎಂದು ವಿವರಿಸಿದರು.

ತೆಂಡೂಲ್ಕರ್ ಅವರು ಆಟೋಗ್ರಾಫ್ ನೀಡಿದ ನಂತರ ಕ್ರಿಕೆಟ್ ಬಗ್ಗೆ ಮಾತನಾಡಲು ಕೆಲ ಸಮಯವನ್ನು ನೀಡುತ್ತಿರಾ ಎಂದು ಕೇಳಿಕೊಂಡೆ. ಅವರು ಸ್ನೇಹಪರವಾಗಿದ್ದರು ಹೀಗಾಗಿ ನಾನು ಕೇಳಲು ಹಿಂಜರಿಯಲಿಲ್ಲ. ಬ್ಯಾಟ್ ಸ್ವಿಂಗ್, ಟ್ವಿಸ್ಟ್ ಮಾಡುವಾಗ ಕೈ ಎಲ್ಬೋ ಗಾರ್ಡ್ ಗೆ ಹೊಡೆತ ಬೀಳುವುದಿಲ್ಲವೇ ಎಂದು ನಾನು ಕೇಳಿದ್ದೆ ಎಂಬುದನ್ನು ಹಂಚಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *